Rules Change from 1st October : ಅಕ್ಟೋಬರ್‌ನಲ್ಲಾಗುವ ಪ್ರಮುಖ 8 ಹಣಕಾಸು ಸಂಬಂಧಿತ ಬದಲಾವಣೆ
ಸೆಪ್ಟೆಂಬರ್ ತಿಂಗಳು ಕೊನೆಯಾಗುತ್ತಿದ್ದು ನಾಳೆಯಿಂದಲೇ ಹೊಸ ತಿಂಗಳು ಅಂದರೆ ಅಕ್ಟೋಬರ್ ಮಾಸ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಕಾರ್ಡ್ ಬದಲಾಗಿ ಟೋಕನ್ ಮೂಲಕ ಪಾವತಿ, ಎಲ್‌ಪಿಜಿ ದರ ಪರಿಷ್ಕರಣೆ ಮೊದಲಾದ ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಖಚಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.
ನಮ್ಮ ಜೀವನವನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಸಾಗಲು ನಮಗೆ ವೈಯಕ್ತಿಕ ಹಣಕಾಸು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲೂ ಆಗುವ ಎಲ್ಲಾ ಬದಲಾವಣೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ನಿಯಮ ಬದಲಾವಣೆಯು ನಮಗೆ ಲಾಭವನ್ನು ಉಂಟು ಮಾಡಿದರೆ, ಇನ್ನು ಕೆಲವು ನಿಯಮ ಬದಲಾವಣೆಯು ನಮಗೆ ನಷ್ಟವನ್ನು ಉಂಟು ಮಾಡಬಹುದು. ನಮ್ಮ ಮಾಸಿಕ ಬಜೆಟ್ ಅನ್ನು ಬುಡಮೇಲು ಮಾಡಬಹುದು.
ಸೆಪ್ಟೆಂಬರ್ ಒಂದರಿಂದ ನಮ್ಮ ವೈಯಕ್ತಿಕ ಹಣಕಾಸು ಮೇಲೆ ಪ್ರಭಾವ ಬೀರುವ ಬ್ಯಾಂಕಿಂಗ್ ಸಂಬಂಧಿತ ನಿಯಮಗಳು ಬದಲಾವಣೆಯಾಗಲಿದೆ. ಇನ್ನು ಕೆಲವು ಕಾರ್ಯಗಳನ್ನು ಮಾಡಲು ಈ ತಿಂಗಳೇ ಕೊನೆಯ ದಿನಾಂಕವಾಗಿದೆ. ಇನ್ನು ಮುಂದೆ ತೆರಿಗೆ ಪಾವತಿದಾರರು ಅಟಲ್ ಪಿಂಚಣಿಯನ್ನು ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಮ್ಯೂಚುವಲ್ ಫಂಡ್ ಗೆ ನಾಮಿನೇಷನ್ ಕಡ್ಡಾಯವಾಗಿದೆ. ಅಕ್ಟೋಬರ್‌ನಿಂದ ಯಾವೆಲ್ಲಾ ಹಣಕಾಸು ನಿಯಮಗಳು ಬದಲಾವಣೆಯಾಗಲಿದೆ ಎಂದು ತಿಳಿಯೋಣ ಮುಂದೆ ಓದಿ....

ತೆರಿಗೆದಾರರಿಗೆ ಇಲ್ಲ ಅಟಲ್ ಪಿಂಚಣಿ
ಅಟಲ್ ಪಿಂಚಣಿ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರ್ಕಾರ ಬದಲಾವಣೆ ಮಾಡಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಈ ಯೋಜನೆಯು 60 ವರ್ಷ ವಯಸ್ಸಿನ ನಂತರ ಚಂದಾದಾರರಿಗೆ ತಿಂಗಳಿಗೆ 1 ಸಾವಿರ ರೂಪಾಯಿಯಿಂದ ರೂ 5 ಸಾವಿರ ರೂಪಾಯಿವರೆಗೆ ಕನಿಷ್ಠ ಪಿಂಚಣಿಯನ್ನು ನೀಡುವ ಯೋಜನೆ ಆಗಿದೆ. ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಥವಾ ತೆರಿಗೆ ಪಾವತಿಸುವ ವ್ಯಕ್ತಿಗಳು ಅಕ್ಟೋಬರ್ 1, 2022ರಿಂದ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಅವಕಾಶವಿಲ್ಲ. "1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿದಾರರಾಗಿರುವ ಅಥವಾ ಹೊಂದಿರುವ ಯಾವುದೇ ನಾಗರಿಕರು ಎಪಿವೈಗೆ ಸೇರಲು ಅರ್ಹರಾಗಿರುವುದಿಲ್ಲ," ಎಂದು ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯು 10 ಆಗಸ್ಟ್ 2022 ದಿನಾಂಕದ ಅಧಿಸೂಚನೆಯಲ್ಲಿ ತಿಳಿಸಿದೆ.

ಕಾರ್ಡ್ ಬದಲಾಗಿ ಟೋಕನ್ ಮೂಲಕ ಪಾವತಿ
ಅಕ್ಟೋಬರ್ 1ರಿಂದ ಕಾರ್ಡ್ ಬದಲಾಗಿ ಟೋಕನ್ ಮೂಲಕ ಪಾವತಿ ಮಾಡುವುದು ಜಾರಿಗೆ ಬರಲಿದೆ. ಆನ್‌ಲೈನ್ ಶಾಂಪಿಂಗ್ ವ್ಯವಸ್ಥೆಯನ್ನು ಸುಲಭ ಹಾಗೂ ಸರಳ ಮಾಡುವ ವ್ಯವಸ್ಥೆಯೇ ಟೋಕನೈಜೇಶನ್ ಆಗಿದೆ. ನಿಮ್ಮ ನೆಚ್ಚಿನ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಾದ ಅಮೆಜಾನ್, ಮಿಂತ್ರಾ, ಫ್ಲಿಫ್‌ಕಾರ್ಟ್, ಬಿಗ್ ಬಾಸ್ಕೆಟ್‌ನಲ್ಲಿ ಸುಲಭವಾಗಿ ಶಾಪಿಂಗ್ ಮಾಡುವ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಆರ್‌ಬಿಐ ಹೊಸ ನಿಯಮವನ್ನು ಜಾರಿ ಮಾಡಿದೆ. ಈ ಹೊಸ ವಿಧಾನವು ನಿಮ್ಮ ಆನ್‌ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಸುಲಭ ಮಾಡುವುದು ಮಾತ್ರವಲ್ಲದೆ ನಿಮ್ಮ ಗುಪ್ತ ಮಾಹಿತಿಯನ್ನು ಕೂಡಾ ಸುರಕ್ಷಿತವಾಗಿರಿಸುತ್ತದೆ.

ಮ್ಯೂಚುವಲ್ ಫಂಡ್‌ಗೆ ನಾಮಿನೇಷನ್
ಅಕ್ಟೋಬರ್ ಒಂದರಿಂದ ಮ್ಯೂಚುವಲ್ ಫಂಡ್‌ಗೆ ನಾಮಿನೇಷನ್ ಕಡ್ಡಾಯವಾಗಿದೆ. ಸೆಬಿಯ ಹೊಸ ನಿಯಮದ ಪ್ರಕಾರ ಮ್ಯೂಚುವಲ್ ಫಂಡ್‌ನಲ್ಲಿ ನಾಮಿನೇಷನ್ ಕಡ್ಡಾಯವಾಗಿದೆ. ಇನ್ನು ಯಾರು ನಾಮಿನೇಷನ್ ಬಳಕೆ ಮಾಡಲು ಇಚ್ಛಿಸುವುದಿಲ್ಲವೋ ಅವರು ಡಿಕ್ಲೆರೇಷನ್ ನೀಡಬೇಕಾಗುತ್ತದೆ.

ಸಣ್ಣ ಉಳಿತಾಯ ಖಾತೆಗೆ ಅಧಿಕ ಬಡ್ಡಿದರ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಈಗಾಗಲೇ ಹಲವಾರು ಬ್ಯಾಂಕುಗಳು ಉಳಿತಾಯ ಖಾತೆಯ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಆರ್‌ಡಿ, ಕೆಸಿಸಿ, ಪಿಪಿಎಫ್ ಹಾಗೂ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಸೆಪ್ಟೆಂಬರ್ 30ರಂದು ಹಣಕಾಸು ಸಚಿವಾಲಯ ಘೋಷಣೆ ಮಾಡುವ ಸಾಧ್ಯತೆ ಇದೆ.

ಡಿಮ್ಯಾಟ್ ಖಾತೆ ಡಬಲ್ ವೆರಿಫಿಕೇಷನ್
ಡಿಮ್ಯಾಟ್ ಖಾತೆಯ ಮಾಲೀಕರ ಸುರಕ್ಷತೆಯ ನಿಟ್ಟಿನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಅಕ್ಟೋಬರ್ ಒಂದರಿಂದ ಡಿಮ್ಯಾಟ್ ಖಾತೆಯ ಡಬಲ್ ವೆರಿಫಿಕೇಷನ್ ಕಡ್ಡಾಯ ಮಾಡಿದೆ. ಡಿಮ್ಯಾಟ್ ಖಾತೆ ಹೊಂದಿರುವವರು ಮಾತ್ರ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗಲಿದೆ.

ಗ್ಯಾಸ್ ಸಿಲಿಂಡರ್ ಅಗ್ಗವಾಗುವ ಸಾಧ್ಯತೆ
ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಪ್ರಸ್ತುತ ಕಚ್ಚಾ ತೈಲ ದರ ಹಾಗೂ ನೈಸರ್ಗಿಕ ಅನಿಲ ದರವು ಕಡಿಮೆಯಾಗುತ್ತಿದೆ. ಇದರಿಂದಾಗಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ. ಕಳೆದ ಎರಡು ಮೂರು ತಿಂಗಳುಗಳಿಂದ ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆ ಮಾಡಲಾಗಿದೆ. ಆದರೆ ಈಗ ಗೃಹ ಹಾಗೂ ವಾಣಿಜ್ಯ ಬಳಕೆ ಎರಡು ಸಿಲಿಂಡರ್‌ಗಳ ಬೆಲೆ ಇಳಿಕೆ ಸಾಧ್ಯತೆ ಇದೆ.

ಎನ್‌ಪಿಎಸ್ ಇ-ದಾಖಲಾತಿ ಕಡ್ಡಾಯ
ಸಾರ್ವಜನಿಕ ಹಾಗೂ ಖಾಸಗಿ ಸೆಕ್ಟರ್‌ಗಳಿಗೆ ಪಿಎಫ್‌ಆರ್‌ಡಿಎ ಇ ನಾಮಿನೇಷನ್ ಪ್ರಕ್ರಿಯೆಯನ್ನು ಬದಲಾವಣೆ ಮಾಡಿದೆ. ಈ ನೂತನ ನಿಯಮವು ಅಕ್ಟೋಬರ್ 1, 2022ರಿಂದ ಜಾರಿಗೆ ಬರುತ್ತದೆ. ಎನ್‌ಪಿಎಸ್ ಖಾತೆದಾರರ ಇ ನಾಮಿನೇಷನ್ ಮನವಿಯನ್ನು ಅನುಮೋದಿಸುವ ಅಥವಾ ತಿರಸ್ಕಾರ ಮಾಡುವ ಕೆಲಸ ನೋಡಲ್ ಅಧಿಕಾರಿಗಳಿಗೆ ಇರುತ್ತದೆ. ಎನ್‌ಪಿಸಿ ನಾಮಿನೇಷನ್ ಪ್ರಕ್ರಿಯೆಯನ್ನು ನೋಡಿಕೊಂಡು ಈ ಕಾರ್ಯವನ್ನು ಮಾಡಬೇಕಾಗುತ್ತದೆ.

ಸಿಎನ್‌ಜಿ ದರ ಹೆಚ್ಚಳ
ನೈಸರ್ಗಿಕ ಅನಿಲ ದರವು ಸಾರ್ವಕಾಲಿಕ ಏರಿಕೆಯಾಗುವ ಸಾಧ್ಯತೆ ಇದೆ. ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುವ ಇಂಧನ ದರವನ್ನು ಸರ್ಕಾರ ನಿರ್ಧಾರ ಮಾಡುತ್ತದೆ. ಅಕ್ಟೋಬರ್ ಒಂದರಿಂದ ಸರ್ಕಾರ ದರವನ್ನು ಪರಿಷ್ಕರಣೆ ಮಾಡುತ್ತದೆ. ಈ ವೇಳೆ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರ ಆರು ತಿಂಗಳಿಗೊಮ್ಮೆ ದರ ನಿಗದಿ ಮಾಡುತ್ತದೆ.