2020ರ ಜನವರಿ 1ರಿಂದ ಬದಲಾಗಲಿರುವ ಈ ನಿಯಮಗಳ ಬಗ್ಗೆ ಗೊತ್ತಿರಲಿ
ಜನವರಿ 1ನೇ ತಾರೀಕಿನಂದು 2020ರ ಹೊಸ ವರ್ಷಕ್ಕೆ ನಾಂದಿ ಹಾಡಿರುವುದಷ್ಟೇ ಅಲ್ಲ, ಜತೆಗೆ ಹಲವು ನಿಯಮಗಳ ಬದಲಾವಣೆ ಕೂಡ ಇದೆ. ಆರ್ಥಿಕ ಜಗತ್ತಿನ ಬದಲಾವಣೆ ನಿಮ್ಮ ಗಮನಕ್ಕೂ ಇರಲಿ. ಡೆಬಿಟ್ ಕಾರ್ಡ್ ಬಳಕೆದಾರರು, ಪ್ಯಾನ್ ಕಾರ್ಡ್ ಇರುವವರು, ಎಟಿಎಂನಲ್ಲಿ ಹಣ ವಿಥ್ ಡ್ರಾ ಮಾಡುವವರು ಅಥವಾ ಆನ್ ಲೈನ್ ವರ್ಗಾವಣೆ ಮಾಡುವವರು ಈ ಅಂಶಗಳನ್ನು ಗಮನಿಸಿ.
ಡೆಬಿಟ್ ಮತ್ತು ಎಟಿಎಂ ಕಾರ್ಡ್ ಗಳು:
ಜನವರಿ ಒಂದನೇ ತಾರೀಕಿನಿಂದ ಮ್ಯಾಗ್ ಸ್ಟ್ರಿಪ್ ಅಥವಾ ಮ್ಯಾಗ್ನೆಟಿಕ್ ಸ್ಟ್ರಿಪ್ ಇರುವ ಹಳೆಯ ಡೆಬಿಟ್ ಮತ್ತು ಎಟಿಎಂ ಕಾರ್ಡ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ಅದರ ಬದಲಿಗೆ ಯಾವುದೇ ಶುಲ್ಕ ಇಲ್ಲದೆ ನಿಮ್ಮ ಬ್ಯಾಂಕ್ ನಿಂದ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ಪಡೆಯಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಿದ ಮಾರ್ಗದರ್ಶಿ ಸೂತ್ರ ಪ್ರಕಾರ, ಎಲ್ಲ ಬ್ಯಾಂಕ್ ಗಳ ಹಳೇ ಡೆಬಿಟ್ ಕಾರ್ಡ್ ಗಳನ್ನು ಹೊಸ ಇಎಂವಿ ಆಧಾರಿತ ಕಾರ್ಡ್ ಗಳಿಗೆ ಬದಲಿಸಿಕೊಳ್ಳಬೇಕು.
ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಇಎಂವಿ ಚಿಪ್ ಕಾರ್ಡ್ ಇದ್ದರೆ ಅದನ್ನು ಬದಲಿಸಿಕೊಳ್ಳುವ ಅಗತ್ಯ ಇಲ್ಲ. ಒಂದು ವೇಳೆ ಬದಲಿಸದಿದ್ದರೆ ಕಡ್ಡಾಯವಾಗಿ ಹೊಸದನ್ನು ತೆಗೆದುಕೊಳ್ಳಿ. ಮೈಕ್ರೋಚಿಪ್ ಇರುವ ಇಎಂವಿ ಕಾರ್ಡ್ ಗಳು ಇದ್ದಲ್ಲಿ ಖರೀದಿ ವೇಳೆ ನಡೆಯುವ ವಂಚನೆಯನ್ನು ತಡೆಯಬಹುದು. ಈ ಕಾರ್ಡ್ ಗಳನ್ನು ಕ್ಲೋನಿಂಗ್ ಮಾಡಲು ಸಾಧ್ಯವಿಲ್ಲ.

NEFT ಆನ್ ಲೈನ್ ವರ್ಗಾವಣೆ ಶುಲ್ಕ ಮನ್ನಾ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ NEFT ಆನ್ ಲೈನ್ ವರ್ಗಾವಣೆಯನ್ನು 24X7 ಮಾಡಲಾಗಿದೆ. ಡಿಸೆಂಬರ್ 16ನೇ ತಾರೀಕಿನಿಂದಲೇ ಈ ನಿಯಮ ಬಂದಿದೆ. ಜನವರಿ 1ರಿಂದ ಅನ್ವಯ ಆಗುವಂತೆ ಆನ್ ಲೈನ್ NEFT ಶುಲ್ಕವನ್ನು ಉಳಿತಾಯ ಖಾತೆದಾರರಿಗೆ ತೆಗೆಯಲಾಗಿದೆ. ಈಗಾಗಲೇ ಹಲವು ಬ್ಯಾಂಕ್ ಗಳು NEFT ಅನ್ನು ಉಚಿತ ಮಾಡಿವೆ. ಆದರೆ ಬ್ಯಾಂಕ್ ಶಾಖೆಯಲ್ಲಿ ಮಾಡುವ NEFT ವರ್ಗಾವಣೆಗೆ ಮುಂಚಿನಂತೆಯೇ ಶುಲ್ಕ ಇರುತ್ತದೆ.
ರುಪೇ, ಯುಪಿಐ ಶುಲ್ಕ:
ಇನ್ನು ರುಪೇ ಮತ್ತು ಯುಪಿಐ ಬಳಸಿ ಮಾಡುವ ವ್ಯವಹಾರಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ಇರುವುದಿಲ್ಲ. ಐವತ್ತು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಇರುವ ಎಲ್ಲ ಕಂಪೆನಿಗಳು ರುಪೇ ಡೆಬಿಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ತಮ್ಮ ಗ್ರಾಹಕರಿಗೆ ಕಡ್ಡಾಯವಾಗಿ ನೀಡಬೇಕು.
ಎಸ್ ಬಿಐ ಎಟಿಎಂ ವಿಥ್ ಡ್ರಾ:
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಾರ್ಡ್ ಹೊಂದಿದ್ದಲ್ಲಿ ಹಣ ವಿಥ್ ಡ್ರಾಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬೇಕಾಗುತ್ತದೆ. ಜನವರಿ ಒಂದನೇ ತಾರೀಕಿನಿಂದಲೇ ಎಸ್ ಬಿಐನಿಂದ ಒಟಿಪಿ ಆಧಾರಿತ ಎಟಿಎಂ ವಿಥ್ ಡ್ರಾ ಪರಿಚಯಿಸಿದೆ. ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆ ಮಧ್ಯೆ ಹತ್ತು ಸಾವಿರ ರುಪಾಯಿ ಮೇಲ್ಪಟ್ಟು ವಿಥ್ ಡ್ರಾ ಮಾಡುವುದಕ್ಕೆ ಇದನ್ನು ಪರಿಚಯಿಸಲಾಗಿದೆ. ಒಂದು ವೇಳೆ ನೀವು ಎಸ್ ಬಿಐ ಎಟಿಎಂ ಬಿಟ್ಟು ಬೇರೆಡೆ ನಗದು ವಿಥ್ ಡ್ರಾ ಮಾಡಿದರೆ ಅದಕ್ಕೆ ಒಟಿಪಿ ಅಗತ್ಯ ಇಲ್ಲ.
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲಿಂಗ್:
ನೀವು ಒಂದು ವೇಳೆ ಆಗಸ್ಟ್ ಮೂವತ್ತೊಂದರ ಗಡುವಿನೊಳಗೇ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲಿಂಗ್ ಮಾಡದಿದ್ದಲ್ಲಿ, ಆರ್ಥಿಕ ವರ್ಷದ ಕೊನೆಯೊಳಗೆ ಮಾಡಬಹುದು. ಆದರೆ ಐಟಿಆರ್ ವಿಳಂಬವಾಗಿ ಫೈಲ್ ಮಾಡಿದ್ದಕ್ಕೆ ಜನವರಿ ಒಂದನೇ ತಾರೀಕಿನಿಂದ ಹತ್ತು ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ.
ಪ್ಯಾನ್ ಕಾರ್ಡ್:
ಒಂದು ವೇಳೆ ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸದೆ ಇರುವುದಿಲ್ಲ. ಏಕೆಂದರೆ, ಡಿಸೆಂಬರ್ ಮೂವತ್ತೊಂದರ ತನಕ ಇದ್ದ ಗಡುವು ಮಾರ್ಚ್ ಮೂವತ್ತೊಂದನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ.