For Quick Alerts
ALLOW NOTIFICATIONS  
For Daily Alerts

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದಲ್ಲಿ ನೀವು ಇಷ್ಟೊತ್ತಿಗೆ ಸೇಲಾಗಿರಬಹುದು!

|

ನಾವು ಏನು ತಿನ್ನಬೇಕು, ಎಂಥ ಬಟ್ಟೆ ಹಾಕಿಕೊಳ್ಳಬೇಕು, ಯಾವ ನ್ಯೂಸ್ ನೋಡಬೇಕು, ಯಾವ ಕಾರು, ಎಂಥ ಬೈಕ್, ಮಕ್ಕಳಿಗೆ ಯಾವ ಸ್ಕೂಲ್, ಯಾವ ಆಸ್ಪತ್ರೆ, ಸಿನಿಮಾ, ನಾಟಕ, ಪುಸ್ತಕ, ಪಾನೀಯ... ಹೀಗೆ ಎಲ್ಲವನ್ನೂ ಬೇರೆ ಯಾರೋ ನಿರ್ದೇಶಿಸುತ್ತಾರಾ? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಈ ಲೇಖನವನ್ನು ಓದಿ. ಖಾಸಗಿಯಾಗಿ ಇರುವಂಥ ಮಾಹಿತಿ ಅದೇನು ನಿಮ್ಮ ಬಳಿ ಇದೆ ಎಂಬುದನ್ನು ಇಲ್ಲಿರುವ ಮಾಹಿತಿಯನ್ನು ಓದಿದ ನಂತರ ತೀರ್ಮಾನಿಸಿ.

 

ಒಂದು ಸ್ಮಾರ್ಟ್ ಫೋನ್ ಇದೆಯೆಂದರೆ ಪ್ರತಿ ಕ್ಷಣವೂ ನಿಮ್ಮ ಬಗೆಗಿನ ಮಾಹಿತಿಯನ್ನು ನೀವೇ ಕೈಯಾರೆ ಒದಗಿಸುತ್ತಿದ್ದೀರಿ ಅಂತಲೇ ಅರ್ಥ. ಸರಿ, ಆ ಮಾಹಿತಿಯನ್ನು ತೆಗೆದುಕೊಂಡು ಯಾರೇನು ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತೀರಾ? ಅಲ್ಲೇ ಇರುವುದು ಸ್ಟೋರಿಯಲ್ಲಿ ಟ್ವಿಸ್ಟ್.

ಒಂದು ಫೇಸ್ ಬುಕ್ ಅಕೌಂಟ್ ನಲ್ಲಿ ಎಷ್ಟೆಲ್ಲ ಇದೆ?

ಒಂದು ಫೇಸ್ ಬುಕ್ ಅಕೌಂಟ್ ನಲ್ಲಿ ಎಷ್ಟೆಲ್ಲ ಇದೆ?

ಒಂದು ಫೇಸ್ ಬುಕ್ ಅಕೌಂಟ್ ತೆಗೆಯುತ್ತೀರಲ್ಲಾ ಅದಕ್ಕೆ ಏನೆಲ್ಲಾ ಮಾಹಿತಿ ಒದಗಿಸುತ್ತೀರಿ? ಹೆಸರು, ವಯಸ್ಸು, ಗಂಡು ಅಥವಾ ಹೆಣ್ಣು, ಹುಟ್ಟಿದ ದಿನ, ಶಿಕ್ಷಣ, ಸ್ಥಳ, ಇಷ್ಟದ ಹೋಟೆಲ್, ಆಹಾರ ಖಾದ್ಯ, ಫೋನ್ ನಂಬರ್, ನೆಚ್ಚಿನ ನಟ, ಲೇಖಕ, ಪುಸ್ತಕ, ಟೀವಿ ಷೋ, ಸಿನಿಮಾ, ಗಾಯಕ ಅಥವಾ ಗಾಯಕಿ, ಇಷ್ಟವಾದ ಸ್ಥಳ, ಕೆಲಸ ಮಾಡುತ್ತಿದ್ದರೆ ಆ ಬಗ್ಗೆ ಮಾಹಿತಿ... ಜತೆಗೆ ಫೋಟೋ, ವಿಡಿಯೋ ಇತ್ಯಾದಿ. ಇಷ್ಟೆಲ್ಲ ಮಾಹಿತಿ ಮೂಲಕ ಏನು ಮಾಡಬಹುದು ಗೊತ್ತಾ? ಒಂದು ಮಾರುಕಟ್ಟೆಯ ಬೇಕುಗಳನ್ನೇ ನಿರ್ಧರಿಸಬಹುದು. ಈಗೆಲ್ಲ ಸೆಲ್ಫಿ ಫೋನ್ ಗಳಿಗೆ ಆ ಪರಿಯ ಡಿಮ್ಯಾಂಡ್ ಸೃಷ್ಟಿಸಿಕೊಟ್ಟಿದ್ದೇ ಈ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್. ಯುವಜನಾಂಗವೇ ಹೆಚ್ಚಾಗಿ ಇವುಗಳನ್ನು ಬಳಕೆ ಮಾಡುವುದು ಎಂಬುದು ಮಾಹಿತಿ ಮೂಲಕ ಗೊತ್ತಾಯಿತು. ಒಬ್ಬ ವ್ಯಕ್ತಿ ಹೇಗಿರುತ್ತಾರೋ ಅದಕ್ಕಿಂತ ಬೆಳ್ಳಗೆ, ಮುದ್ದಾಗಿ ಕಾಣಿಸುವಂತೆ ಪ್ರಚೋದನೆ ನೀಡುವ ವೇದಿಕೆಯೊಂದು ಮೊದಲಿಗೆ ಸೃಷ್ಟಿ ಆಯಿತು. ಅದರಲ್ಲಿ ಸಿಗುವ ಲೈಕ್, ಕಾಮೆಂಟ್ ಗಳಿಗೆ ಬಲಿ ಬಿದ್ದು, ಸೆಲ್ಫಿ ಫೋನ್ ಗಳಿಗೆ ಭಾರತದಂಥ ಜನಸಂಖ್ಯೆಯಲ್ಲಿ ಗಿಜಿಗುಡುವ ದೇಶವು ಮಾರುಕಟ್ಟೆ ಆಯಿತು. ಸರಿ, ಆ ಲೈಕ್- ಕಾಮೆಂಟ್ ಗಳಿಂದ ಏನು ಸಿಕ್ಕಿತು? ಕೀಳರಿಮೆ ಇರುವವರಿಗೆ ಒಂದು ಕಾಲ್ಪನಿಕವಾದ ಆತ್ಮವಿಶ್ವಾಸ ಸಿಕ್ಕಿತು. ಕ್ರಮೇಣ ಅದು ಗೀಳಾಗಿ ಪರಿವರ್ತನೆ ಆಯಿತು. ಮೊಬೈಲ್ ಫೋನ್ ಗಳ ತಯಾರಕರಿಗೆ ಇನ್ನು ನೂರೆಂಟು ಮೆಗಾಪಿಕ್ಸೆಲ್ ನ ಕ್ಯಾಮೆರಾ, ಇಪ್ಪತ್ನಾಲ್ಕು ಮೆಗಾಪಿಕ್ಸೆಲ್ ನ ಸೆಲ್ಫಿ ಕ್ಯಾಮೆರಾ ಎಲ್ಲವೂ ಮಾರಾಟಕ್ಕೆ ಸಲೀಸು.

ಮೇಲ್, ಮೆಸೇಜ್ ಬರಲು ಆರಂಭ
 

ಮೇಲ್, ಮೆಸೇಜ್ ಬರಲು ಆರಂಭ

ಬರೀ ಫೋನ್ ಅಷ್ಟೇನಾ ಅಂತೀರಾ? ಈಗ ನಿಮ್ಮ ಬರ್ತ್ ಡೇಗೆ ಕೆಲವೇ ದಿನಗಳ ಮುಂಚೆ ಮೇಲ್, ಮೆಸೇಜ್ ಗಳು ಬರಲು ಆರಂಭಿಸಿರುತ್ತವೆ. ಎರಡು ಷರ್ಟ್ ಖರೀದಿಸಿದರೆ ಮೂರನೆಯದು ಫ್ರೀ. ಮದುವೆ ವಾರ್ಷಿಕೋತ್ಸವಕ್ಕೆ ಸ್ವಲ್ಪ ದಿನ ಮೊದಲು ವಿದೇಶ ಪ್ರಯಾಣ, ದೇಶೀಯ ಪ್ಯಾಕೇಜ್ ಬಗ್ಗೆ ಜಾಹೀರಾತು ನಿಮಗೆ ಮಾತ್ರ ಬಂದಿರುತ್ತದೆ. ಅದು ಕೂಡ ಆಯಾ ವ್ಯಕ್ತಿಯ ಆದಾಯದ ಮೇಲೆ ಮತ್ತು ಸಾರ್ವಜನಿಕವಾಗಿ ಯಾವ ಮಾಹಿತಿಯನ್ನು ಹಂಚಿಕೊಂಡಿರುತ್ತಾರೋ ಅದರ ಕುರಿತಾಗಿಯೇ ಇರುತ್ತದೆ. ಕ್ರೆಡಿಟ್ ಸ್ಕೋರ್ ಪುಕ್ಕಟೆ ಚೆಕ್ ಮಾಡಬಹುದು ಎಂದು ಮಾಹಿತಿ ನೀಡುತ್ತೀರಲ್ಲಾ, ಅದರಲ್ಲಿ ನಿಮ್ಮ ಆದಾಯ, ಈಗಿರುವ ಸಾಲ, ಕ್ರೆಡಿಟ್ ಕಾರ್ಡ್ ಹೀಗೆ ಸಕಲೆಂಟು ಹಣಕಾಸಿನ ಮಾಹಿತಿ ಕೂಡ ಕೈಯಾರೆ ನೀಡಿರುತ್ತೀರಿ. ಫ್ರೀಯಾಗಿ ಕ್ರೆಡಿಟ್ ಸ್ಕೋರ್ ನೋಡಿದೆವು ಎಂಬು ಹೆಮ್ಮೆ ನಿಮ್ಮದು. ಆದರೆ ಅದಕ್ಕಿಂತ ದೊಡ್ಡದನ್ನೇ ಕೊಟ್ಟಿರುತ್ತೀರಿ. ಯಾವುದೋ ಕಂಪೆನಿಯ ಬಳಿ ಕ್ರೆಡಿಟ್ ಕಾರ್ಡ್ ಬಗ್ಗೆ ವಿಚಾರಣೆ ಮಾಡಿದ್ದರೆ ಅಥವಾ ಕಾರ್ಪೆಂಟರ್ ನಿಂದ, ಕಂಪ್ಯೂಟರ್ ತನಕ ಯಾವುದಾದರ ಮಾಹಿತಿಯನ್ನು ವಿಚಾರಿಸಿದ್ದರೆ ಆ ಕೂಡಲೇ ನಿಮ್ಮ ಮೇಲ್ ಐಡಿಗೆ ಅಥವಾ ಫೋನ್ ಬಗ್ಗೆ ಹತ್ತಾರು ಕಂಪೆನಿಗಳಿಂದ ಮೇಲ್, ಮೆಸೇಜ್ ಬರಲು ಆರಂಭಿಸುತ್ತವೆ.

ಸರ್ಚ್ ಮಾಡಿದ್ದರ ಸುತ್ತವೇ ಸಜೆಸ್ಟ್ ಮಾಡುತ್ತದೆ

ಸರ್ಚ್ ಮಾಡಿದ್ದರ ಸುತ್ತವೇ ಸಜೆಸ್ಟ್ ಮಾಡುತ್ತದೆ

ಮಾಲ್ ಗೆ ಹೋಗಿ ಬಟ್ಟೆ, ಒಡವೆ ಮತ್ತೊಂದು ಖರೀದಿಸಿ, ಅಲ್ಲಿ ನೀಡುವ ಕೆಲವು ಅರ್ಜಿಯಲ್ಲಿ ಮಾಹಿತಿ ತುಂಬಿ ಬರುತ್ತೀರಲ್ಲಾ ಅದನ್ನೇ ಡೇಟಾ ಎನ್ನುವುದು. ನಿಮಗೆ ಇಷ್ಟದ ಬಣ್ಣ ಯಾವುದು, ಬಟ್ಟೆಯ ಪೈಕಿ ಜೀನ್ಸ್, ಫಾರ್ಮಲ್ಸ್ ಯಾವುದು ಖರೀದಿಸಿದಿರಿ? ಕ್ರೆಡಿಟ್ ಕಾರ್ಡ್ ಬಳಸಿದರೋ ಅಥವಾ ನಗದು ಕೊಟ್ಟರೋ ಎಲ್ಲ ಮಾಹಿತಿಯೂ ಒಂದು ಕಡೆ ಸಂಗ್ರಹವಾಗುತ್ತದೆ. ಈಗ ಕೆಲವು ಫುಡ್ ಆರ್ಡರ್ ಮಾಡುವ ಆಪ್ ಅಥವಾ ವೆಬ್ ಸೈಟ್ ಇದೆಯಲ್ಲಾ ಅದರಲ್ಲಿ ನೀವು ಆರ್ಡರ್ ಮಾಡಿದ ಆಹಾರ ಖಾದ್ಯಗಳ ಮಾಹಿತಿ ಹಾಗೇ ಸಂಗ್ರಹ ಆಗಿರುತ್ತದೆ. ಮತ್ತೊಮ್ಮೆ ನೀವು ಅದೇ ಐಡಿಯಲ್ಲಿ ಲಾಗಿನ್ ಆದರೆ ಮತ್ತೆ ಆ ಆಹಾರ ಖಾದ್ಯಗಳನ್ನೇ ನಿಮ್ಮ ಆಯ್ಕೆಗೆ ತೋರಿಸುತ್ತದೆ. ಇನ್ನು ಗೂಗಲ್ ನಲ್ಲಿ ನೀವೇನು ಸರ್ಚ್ ಮಾಡಿರುತ್ತೀರೋ ಮುಂದಿನ ಸಲ ಬ್ರೌಸ್ ಮಾಡುವಾಗ ಅದರ ಸುತ್ತಮುತ್ತಲ ಮಾಹಿತಿಯೇ ನಿಮಗೆ ಕಾಣುತ್ತದೆ ಹಾಗೂ ಅಂಥವುಗಳನ್ನೇ ಕ್ಲಿಕ್ ಮಾಡಲು ಸಜೆಸ್ಟ್ ಮಾಡುತ್ತದೆ. ಯೂ ಟ್ಯೂಬ್ ಕೂಡ ಅದೇ ರೀತಿ ಕೆಲಸ ಮಾಡುತ್ತದೆ. ಓಲಾ, ಉಬರ್ ಗಳಲ್ಲಿ ಬುಕ್ ಮಾಡುವಾಗ ನಿಮ್ಮ ಮನೆ ಯಾವುದು, ಕೆಲಸ ಎಲ್ಲಿ ಇವೆಲ್ಲ ಮಾಹಿತಿಯನ್ನು ನೀವೇ ನೀಡಿರುತ್ತೀರಿ.

ರಾಜಕೀಯ ಪಕ್ಷಗಳ ಪ್ರಣಾಳಿಕೆ ಸಿದ್ಧವಾಗುವುದಕ್ಕೂ ಅನುಕೂಲ

ರಾಜಕೀಯ ಪಕ್ಷಗಳ ಪ್ರಣಾಳಿಕೆ ಸಿದ್ಧವಾಗುವುದಕ್ಕೂ ಅನುಕೂಲ

ನೀವೇ ನೀಡಿದ ಮಾಹಿತಿಯು ಹೊಸದಾಗಿ ಮೊಬೈಲ್ ಫೋನ್ ಲಾಂಚ್ ಮಾಡುವವರಿಂದ ಹಿಡಿದು ಕಾರು, ಬೈಕ್, ಕ್ರೆಡಿಟ್ ಕಾರ್ಡ್, ಹಾಸಿಗೆ ತಯಾರಿಸುವವರ ತನಕ ಎಲ್ಲರಿಗೂ ಉಪಯೋಗ ಆಗುತ್ತದೆ. ನಿಮ್ಮ ಮಾಹಿತಿ ಎಲ್ಲೆಲ್ಲಿ ಲಭ್ಯವಿದೆಯೋ ಅಂಥಲ್ಲಿಂದ ಖರೀದಿ ಮಾಡಿ, ನಿಮ್ಮ ಅಭಿರುಚಿಯನ್ನೇ ಜಾಹೀರಾತು ಮೂಲಕ ಪದೇ ಪದೇ ಎದುರಿಗೆ ತರುತ್ತಾರೆ. ಪ್ರಲೋಭನೆ ಒಡ್ಡುತ್ತಾರೆ. ಆಫರ್ ಗಳಿಗೆ ಬೀಳುವವರಿಗೆ ಆಫರ್, ಬ್ರ್ಯಾಂಡ್ ಗೆ ಬೀಳುವವರಿಗೆ ಬ್ರ್ಯಾಂಡ್. ರಾಜಕೀಯ ಪಕ್ಷಗಳ ಪ್ರಣಾಳಿಕೆ ಸಿದ್ಧವಾಗುವುದಕ್ಕೆ ಸಹ ಈ ಮಾಹಿತಿಯಿಂದ ದೊಡ್ಡ ಅನುಕೂಲ ಆಗುತ್ತದೆ. ಯಾವ ರೀತಿಯ ಸುದ್ದಿಯನ್ನು ಓದಲು ಬಯಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು, ಅಂಥದ್ದನ್ನೇ ಹೆಚ್ಚೆಚ್ಚು ನೀಡಿ, ಅಭಿಪ್ರಾಯ ರೂಪಿಸುವ ಕೆಲಸ ಆಗುತ್ತದೆ. ಆದ್ದರಿಂದ ಯಾವುದೇ ವೆಬ್ ಸೈಟ್ ಬಳಸುವಾಗ ಮೊಬೈಲ್ ನಲ್ಲಾದರೆ ಪ್ರೈವೇಟ್ ಅನ್ನುವ ಆಯ್ಕೆಯನ್ನು ಮಾಡಿಕೊಳ್ಳಿ. ಯಾವುದೇ ಮಳಿಗೆ, ರೆಸ್ಟೋರೆಂಟ್ ಮತ್ತೊಂದು ಕಡೆ ಹೋದಾಗ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ. ಫೇಸ್ ಬುಕ್, ಟ್ವಿಟ್ಟರ್ ಇಂಥ ಸೋಷಿಯಲ್ ಮೀಡಿಯಾಗಳಿಗೆ ನಿಮ್ಮ ಮಾಹಿತಿಯನ್ನು ಈಗಾಗಲೇ ನೀಡಿಯಾಗಿದೆ ಅಂದರೆ ಏನೂ ಮಾಡಲು ಸಾಧ್ಯವಿಲ್ಲ. ನೀವು ಒಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಿ ಅಂದರೆ ಒಂದು ದಿನಕ್ಕೆ ನೀವು ಎಲ್ಲೆಲ್ಲಿ ಹೋಗುತ್ತೀರಿ, ಯಾವ ಹಾಡು ಕೇಳುತ್ತೀರಿ, ಎಂಥ ಸಿನಿಮಾ ನೋಡುತ್ತೀರಿ ಎಂದೆಲ್ಲ ನಡುರಸ್ತೆಯಲ್ಲಿ ನಿಂತುಕೊಂಡು ಹೇಳಿಕೊಂಡಂತೆಯೇ ಸರಿ.

ಚೀನಾದಲ್ಲಿ ಸರ್ಕಾರವೇ ನಿಗಾ ಮಾಡುತ್ತದೆ

ಚೀನಾದಲ್ಲಿ ಸರ್ಕಾರವೇ ನಿಗಾ ಮಾಡುತ್ತದೆ

ಚೀನಾದಲ್ಲಿ ಹೇಗೆ ಗೊತ್ತಾ? ಪ್ರತಿ ವ್ಯಕ್ತಿಗೂ ಒಂದು ವಿಶಿಷ್ಟವಾದ ಸಂಖ್ಯೆ ಇರುತ್ತದೆ. ಆ ವ್ಯಕ್ತಿಯ ನಡವಳಿಕೆ, ಗುಣ- ಸ್ವಭಾವದ ಆಧಾರದ ಮೇಲೆ ಸರ್ಕಾರಿ ಸವಲತ್ತುಗಳು ಏನು ದೊರೆಯಬೇಕು ಎಂಬುದು ನಿರ್ಧಾರ ಆಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಸಂಚಾರ ನಿಯಮ ಪಾಲಿಸದೆ ಸಿಕ್ಕಿಬಿದ್ದಿದ್ದಾನೆ, ಸರ್ಕಾರದ ವಿರುದ್ಧ ಧೋರಣೆ ಹೊಂದಿದ್ದಾನೆ, ಮಹಾನ್ ತಂಟೆಕೋರ ಇಂಥ ಸ್ವಭಾವದವನಿಗೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚು, ಆತನ ಮಕ್ಕಳಿಗೆ ಒಳ್ಳೆ ಶಾಲೆಯಲ್ಲಿ ಪ್ರವೇಶ ಸಿಕ್ಕಲ್ಲ. ವಿಮಾನ- ರೈಲು ಪ್ರಯಾಣ ದುಬಾರಿ, ಸರ್ಕಾರಿ ಸವಲತ್ತುಗಳಿಗೆ ಕತ್ತರಿ ಬೀಳುತ್ತದೆ. ಅದೇ ಇದಕ್ಕೆ ವ್ಯತಿರಿಕ್ತವಾಗಿ ಶಿಸ್ತುಗಾರ ಪುಟ್ಟಸ್ವಾಮಿಯಂತೆ ಬದುಕುತ್ತಿದ್ದು, ಸರ್ಕಾರದ ವಿರುದ್ಧ ಧ್ವನಿ ಎತ್ತಲ್ಲ, ಎಲ್ಲೂ ಕಿರಿಕ್ ಮಾಡಲ್ಲ ಅಂದರೆ ಅಂಥವರಿಗೆ ಸಕಲ ಸವಲತ್ತು ದೊರೆಯುತ್ತದೆ. ಇದಕ್ಕಾಗಿ ಪ್ರತಿ ವ್ಯಕ್ತಿಯ ಮೇಲೂ ಸರ್ಕಾರವೇ ಕಣ್ಣಿಟ್ಟಿರುತ್ತದೆ. ಅದಕ್ಕಾಗಿ ಸೋಷಿಯಲ್ ಕ್ರೆಡಿಟ್ ಸಿಸ್ಟಮ್ ನ ಸಂಖ್ಯೆ ನೆರವಾಗುತ್ತದೆ. ಆ ಸಂಖ್ಯೆಯನ್ನು ಎಲ್ಲ ಕಡೆಗೂ ಕಡ್ಡಾಯ ಮಾಡಲಾಗಿದೆ. ಕೊರೊನಾ ವೈರಸ್ ಕಾಣಿಸಿಕೊಂಡಾಗ ಆ ತಕ್ಷಣವೇ ಚೀನಾ ಮಾಡಿದ್ದೇನು ಗೊತ್ತಾ? ವುಹಾನ್ ಸುತ್ತಮುತ್ತ ವಾಸವಿರುವವರಲ್ಲಿ ಯಾರು ಎಲ್ಲೆಲ್ಲಿ ಹೋಗಿದ್ದಾರೆ, ಜ್ವರ ಮತ್ತೊಂದು ಎಂದು ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಅಂಥವರನ್ನು ಪ್ರತ್ಯೇಕವಾಗಿ ಇರಿಸಿತ್ತು. ಭಾರತದಲ್ಲಿ ಸರ್ಕಾರ ಹೀಗೆ ಮಾಡುತ್ತಿದೆ ಅಂತಲ್ಲ. ನಾವೆಲ್ಲ ಬಳಸುವ ಮೊಬೈಲ್, ಕಂಪ್ಯೂಟರ್ ಅಪ್ಲಿಕೇಷನ್ ಗಳು ಹೀಗೆಲ್ಲ ಮಾಡಬಲ್ಲವು, ಮಾಡುತ್ತಿವೆ ಎಂಬುದು ಗಮನದಲ್ಲಿ ಇರಬೇಕಾದ ಸಂಗತಿ.

English summary

How Smartphone Users Individual Data Sold?

How smartphone users individual data sold to corporate world? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X