ಪ್ರಧಾನ ಮಂತ್ರಿ ವಯ ವಂದನ ಯೋಜನೆ ವಿಸ್ತರಣೆ: ಬಡ್ಡಿ ದರ ಇಳಿಕೆ
ಹಿರಿಯ ವಯಸ್ಕರಿಗಾಗಿಯೇ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯೇ ಪ್ರಧಾನ ಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಯೋಜನೆಯನ್ನು ಮಾರ್ಚ್ 31, 2023ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಆದರೆ ಬಡ್ಡಿ ದರವನ್ನು 8 ಪರ್ಸೆಂಟ್‌ನಿಂದ 7.4 ಪಸೆಂಟ್‌ಗೆ ಇಳಿಕೆ ಮಾಡಲಾಗಿದೆ.
2017ರಲ್ಲಿ ಕಾರ್ಯಗತಗೊಳಿಸಿದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಿರಿಯ ನಾಗರೀಕರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿತು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಅನುಕೂಲವಾಗಲು ಈ ಯೋಜನೆನ್ನು ಪರಿಚಯಿಸಲಾಗಿತ್ತು. ಆದರೆ 2020-21ನೇ ಆರ್ಥಿಕ ಸಾಲಿಗೆ ಸರ್ಕಾರವು 7.40 ಬಡ್ಡಿ ದರ ನೀಡುವ ಖಾತ್ರಿ ನೀಡಿದೆ. ಮತ್ತು ಪ್ರತಿ ವರ್ಷ ಬಡ್ಡಿದರವನ್ನು ಆರ್ಥಿಕ ಬೆಳವಣಿಗೆ ದೃಷ್ಟಿಯಲ್ಲಿರಿಸಿಕೊಂಡು ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದೆ.

2017ರಲ್ಲಿ ಜಾರಿಯಾದ ಈ ಯೋಜನೆಗೆ ವಯಸ್ಸಿನ ಮಿತಿ ಎಷ್ಟು?
ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಹಿರಿಯ ನಾಗರಿಕರು 60 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. 31 ಮಾರ್ಚ್ 2023ರವರೆಗೆ ಈ ಯೋಜನೆಯು ಚಾಲ್ತಿಯಲ್ಲಿದ್ದು ಹಿರಿಯ ವಯಸ್ಕರು ಯಾರು ಬೇಕಾದರೂ ಮಾಡಿಸಬಹುದು.

ಬಡ್ಡಿ ದರ ಎಷ್ಟು ನೀಡಲಾಗುತ್ತದೆ?
ಇಲ್ಲಿಯವರೆಗೆ ಪಿಎಂವಿವಿವೈ ಯೋಜನೆಯಲ್ಲಿ 8 ಪರ್ಸೆಂಟ್‌ವರೆಗೂ ಬಡ್ಡಿದರವನ್ನು ನೀಡಲಾಗುತ್ತಿತ್ತು. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 7.4 ಪಸೆಂಟ್ ಬಡ್ಡಿ ದರವನ್ನು ನೀಡಲಾಗುತ್ತದೆ.

ಗರಿಷ್ಟ ಹೂಡಿಕೆ ಎಷ್ಟು?
2018-19ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹಿರಿಯ ನಾಗರೀಕರ ಹೂಡಿಕೆಯ ಮಿತಿಯನ್ನು 15 ಲಕ್ಷ ರುಪಾಯಿಗೆ ನಿಗದಿಪಡಿಸಿತ್ತು. ಅಂತೆಯೇ ಕನಿಷ್ಟ ಹೂಡಿಕೆ ಮೊತ್ತವನ್ನು 1,56,658 ರುಪಾಯಿಯಿಂದ 1,62,162 ರುಪಾಯಿಗೆ ಪರಿಷ್ಕರಿಸಲಾಗಿದೆ. ಇದರ ಕನಿಷ್ಟ ಪಿಂಚಣಿ ಮೊತ್ತವು ತಿಂಗಳಿಗೆ 1,000 ರುಪಾಯಿಯಷ್ಟಿದೆ.
ಕನಿಷ್ಟ ಮಾಸಿಕ ಪಿಂಚಣಿ ಮೊತ್ತ : 1,000 ರುಪಾಯಿ
ಗರಿಷ್ಟ ಮಾಸಿಕ ಪಿಂಚಣಿ ಮೊತ್ತ: 10,000 ರುಪಾಯಿ
ಕನಿಷ್ಟ ಹೂಡಿಕೆ ಮೊತ್ತ: 1,62,162 ರುಪಾಯಿ

ಯೋಜನೆ ಖರೀದಿ ಹೇಗೆ?
ನೀವು ಪಿಎಂವಿವಿವೈ ಪಿಂಚಣಿ ಯೋಜನೆಯನ್ನು ಭಾರತದ ಜೀವ ವಿಮಾ ನಿಗಮದಿಂದ (ಎಲ್‌ಐಸಿ) ಖರೀದಿಸಬಹುದು. ನೀವು ಸ್ಕೀಮ್ ಅನ್ನು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಖರೀದಿಸಬಹುದು. ನೀವು ಅದನ್ನು ಆಫ್‌ಲೈನ್‌ನಲ್ಲಿ ಖರೀದಿಸಲು ಬಯಸಿದರೆ, ನೀವು ಹತ್ತಿರದ ಎಲ್‌ಐಸಿ ಕಚೇರಿಗೆ ಭೇಟಿ ನೀಡಬೇಕು. ಆದಾಗ್ಯೂ, ನೀವು ವರ್ಷಾಶನ ಯೋಜನೆಯನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸಿದರೆ, ಎಲ್‌ಐಸಿ - www.licindia.in ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ.

ಯೋಜನೆ ಮುಕ್ತಾಯದ ಪ್ರಯೋಜನ
ಪಿಂಚಣಿದಾರನು 10 ವರ್ಷಗಳ ಪಾಲಿಸಿ ಅವಧಿ ಮುಗಿಯುವವರೆಗೂ ಉಳಿದುಕೊಂಡರೆ, ವರ್ಷಾಶನದ ಖರೀದಿ ಬೆಲೆ ಮತ್ತು ಅಂತಿಮ ಪಿಂಚಣಿ ಕಂತು ಪಾಲಿಸಿದಾರರಿಗೆ ಪಾವತಿಸಲಾಗುವುದು.
ಒಂದು ವೇಳೆ 10 ವರ್ಷಗಳ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದರೆ, ವರ್ಷಾಶನ ಯೋಜನೆಯ ಖರೀದಿ ಬೆಲೆಯನ್ನು ಫಲಾನುಭವಿಗೆ/ನಾಮಿನಿಗೆ ಹಿಂದಿರುಗಿಸಲಾಗುತ್ತದೆ. (ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿ)