ರಜೆಯಲ್ಲಿರುವ ಸಹೋದ್ಯೋಗಿಗೆ ಕೆಲಸ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ದಂಡ!
ನಮ್ಮ ಜೀವನದಲ್ಲಿ ಆಗುವ ಅತೀ ಕೋಪ ತರುವ ವಿಚಾರಗಳಲ್ಲಿ ಒಂದು ರಜೆಯಲ್ಲಿರುವ ನಮಗೆ ತುರ್ತಾಗಿ ಆಫೀಸ್‌ನಿಂದ ಕರೆ, ಇಮೇಲ್ ಬರುವುದು. ಇತ್ತ ರಜೆಯನ್ನು ಸಂತೋಷವಾಗಿ ಕಳೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಈ ಸಂಸ್ಥೆಯಲ್ಲಿ ರಜೆಯಲ್ಲಿರುವ ಉದ್ಯೋಗಿಗೆ ಕೆಲಸದ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಹೌದು ಆಫೀಸ್‌ನಿಂದ ಬರುವ ವರ್ಕ್ ಕರೆ ಅಥವಾ ಅದಕ್ಕೆ ಸಂಬಂಧಿಸಿ ನಿಮ್ಮಲ್ಲಿ ಕೇಳಲು ಕರೆ ಬಂದರೆ ಹೇಗಿರುತ್ತೆ ಅಲ್ವ? ಆದರೆ ಭಾರತದ ಈ ಒಂದು ಕಂಪನಿ ತಮ್ಮ ಉದ್ಯೋಗಿಗಳು ರಜೆಯಲ್ಲಿರುವ ಇತರೆ ಉದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಿ ಕರೆ ಮಾಡುವಂತೆ ಇಲ್ಲ. ಕರೆ ಮಾಡಿದರೆ ಭಾರೀ ದಂಡವನ್ನು ವಿಧಿಸಲಾಗುತ್ತದೆ.
ಭಾರತದ ಪ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್ 11 ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮಕ್ಕೆ Dream 11 Unplug ಅಥವಾ ಡ್ರೀಮ್ 11 ಅನ್‌ಪ್ಲಗ್ ಎಂದು ಕರೆಯಲಾಗುತ್ತದೆ. ಹಾಗಾದರೆ ಏನಿದು ನಿಮಯ ಎಂದು ತಿಳಿಯೋಣ ಮುಂದೆ ಓದಿ...

ಡ್ರೀಮ್ 11 ಅನ್‌ಪ್ಲಗ್ ಪಾಲಿಸಿ ಎಂದರೇನು?
ಡ್ರೀಮ್ 11 ಅನ್‌ಪ್ಲಗ್ ಪಾಲಿಸಿಯು ಒಬ್ಬ ಉದ್ಯೋಗಿಯು ರಜೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ಕೆಲಸದಿಂದ ಅನ್‌ಪ್ಲಗ್ ಆಗುವುದು ಆಗಿದೆ. ಅಂದರೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆ ರಜೆಯಲ್ಲಿರುವ ಉದ್ಯೋಗಿಯೊಂದಿಗೆ ಇರುವುದಿಲ್ಲ. ಕರೆ, ಇಮೇಲ್, ವಾಟ್ಸಾಪ್ ಗ್ರೂಪ್, ಗ್ರೂಪ್ ಚಾಟ್ ಯಾವುದರಲ್ಲೂ ಕೆಲಸದ ವಿಚಾರ ಕೇಳುವಂತಿಲ್ಲ.
ಇನ್ನು ಯಾವುದೇ ಉದ್ಯೋಗಿ ರಜೆಯಲ್ಲಿರುವ ಅಂದರೆ ಅನ್‌ಪ್ಲಗ್ ಉದ್ಯೋಗಿಯೊಂದಿಗೆ ಕೆಲಸದ ವಿಚಾರದಲ್ಲಿ ಮಾತನಾಡಿದರೆ, ಯಾವುದೇ ಮಾತುಕತೆ ನಡೆಸಿದರೆ ಆ ಉದ್ಯೋಗಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಡ್ರೀಮ್ 11 ಸಂಸ್ಥಾಪಕರಾದ ಹರ್ಷ ಜೈನ್ ಹಾಗೂ ಭವಿತ್ ಸೇಟ್ ಹೇಳಿದ್ದಾರೆ.
ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ಸಂಸ್ಥೆಯು ಅನ್‌ಪ್ಲಗ್ ಪಾಲಿಸಿ ಬಗ್ಗೆ ಉಲ್ಲೇಖಿಸಿದೆ, "ನಮ್ಮ ಸಮಯವನ್ನು ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ಅತೀ ಮುಖ್ಯ ಎಂದು ನಾವು ನಂಬಿದ್ದೇವೆ. ಇದು ನಮ್ಮ ಮನಸ್ಥಿತಿ ಹಾಗೂ ಜೀವನದ ಗುಣಮಟ್ಟವನ್ನು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದಾಗಿ ರಜೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಸ್ಥೆಯು ಕೆಲಸದ ವಿಚಾರದಲ್ಲಿ ಮಾತನಾಡುವುದಿಲ್ಲ," ಎಂದು ತಿಳಿಸಲಾಗಿದೆ.