For Quick Alerts
ALLOW NOTIFICATIONS  
For Daily Alerts

ಬಾಡಿಗೆ ಮನೆಯೋ ಅಥವಾ ಸ್ವಂತ ಮನೆಯೋ? ಆಯ್ಕೆ ಯಾವುದಿರಬೇಕು?

|

ಸ್ವಂತ ಮನೆ ಇರಬೇಕು. ಅದು ನಾವು ಅಂದುಕೊಂಡಂತೆ, ಅಭಿರುಚಿಗೆ ತಕ್ಕಂತೆ ಇರಬೇಕು. - ಹೀಗೆ ಯಾರಿಗೆ ಅನ್ನಿಸುವುದಿಲ್ಲ? ಆ ಕಾರಣಕ್ಕೆ ಅಲ್ಲವಾ ಹೊಟ್ಟೆ- ಬಟ್ಟೆ ಕಟ್ಟಿಯಾದರೂ ಸ್ವಂತ ಮನೆ ಮಾಡಿಕೊಳ್ಳುತ್ತಾರೆ. ತಮ್ಮ ಎಷ್ಟೋ ಆಸೆಗಳನ್ನು ತ್ಯಾಗ ಮಾಡುತ್ತಾರೆ. ಶಕ್ತಿ ಮೀರಿ, ಕೆಲಸ ಮಾಡುತ್ತಾರೆ. ಹೀಗೆ ಸ್ವಂತ ಮನೆ ಎಂಬುದು ಭಾವನಾತ್ಮಕ ಸಂಗತಿ.

 

ಆದರೆ, ಸ್ವಂತ ಮನೆಯನ್ನು ಯಾವಾಗ ಕಟ್ಟಬೇಕು ಎಂಬ ಅಂಶ ಗಮನದಲ್ಲಿ ಇರಬೇಕು. ಈ ಹಿಂದಿನ ಲೇಖನದಲ್ಲಿ ಸ್ವಂತ ಮನೆ ಕಟ್ಟಬೇಕಾದಾಗ ಗಮನಿಸಬೇಕಾದ ಅಂಶಗಳನ್ನು ಪ್ರಸ್ತಾವ ಮಾಡಲಾಗಿತ್ತು. ಈ ಲೇಖನದಲ್ಲಿ ಸ್ವಂತ ಮನೆಯನ್ನು ಯಾವಾಗ ಕಟ್ಟಬೇಕು ಅಥವಾ ಖರೀದಿಸಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಆರ್ಥಿಕ ಹಿಂಜರಿತದ ತನಕ ಕಾಯಿರಿ

ಆರ್ಥಿಕ ಹಿಂಜರಿತದ ತನಕ ಕಾಯಿರಿ

ಈಗ ಎಲ್ಲೆಲ್ಲೂ ಆರ್ಥಿಕ ಹಿಂಜರಿತದ ಮಾತು ಕೇಳಿಬರುತ್ತದೆ. ಜನರ ಬಳಿ ಹಣ ಇಲ್ಲ ಎಂಬುದೇ ಬೇಡಿಕೆ ಕುಸಿತಕ್ಕೆ ಕಾರಣ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಒಂದು ಕಡೆ ಷೇರು ಮಾರುಕಟ್ಟೆ, ಚಿನ್ನ ಗಗನಕ್ಕೆ ಏರಿದ್ದರೆ, ರಿಯಲ್ ಎಸ್ಟೇಟ್ ವ್ಯವಹಾರ ಪಾತಾಳಕ್ಕೆ ಕಚ್ಚಿದೆ. ಸಾಲ ವಾಪಸ್ ಮಾಡಲಾಗದೆ ಅದೆಷ್ಟೋ ಮನೆ- ಅಪಾರ್ಟ್ ಮೆಂಟ್ ಗಳನ್ನು ದೊಡ್ಡ ಲಾಭದ ನಿರೀಕ್ಷೆ ಮಾಡದೆ ಮಾರುತ್ತಿರುವವರು ಹೆಚ್ಚಾಗಿದ್ದಾರೆ. ನೆನಪಿಡಿ, ಇದೊಂದು ವೃತ್ತ. ರಿಯಲ್ ಎಸ್ಟೇಟ್ ಬಹಳ ಚೆನ್ನಾಗಿದ್ದಾಗ ಷೇರು ಮಾರುಕಟ್ಟೆ ಹಾಗೂ ಚಿನ್ನದ ದರ ಅಂಥ ಏರಿಕೆ ಆಗಿರಲಿಲ್ಲ. ಅಂದರೆ ಆರ್ಥಿಕ ಹಿಂಜರಿತದ ವೃತ್ತ ಒಂದು ಸುತ್ತು ತಿರುಗಿ ಬಂದಾಗ ಯಾರ ಬಳಿ ನಗದು ಇರುತ್ತದೋ ಅಂಥವರಿಗೆ ಚೌಕಾಶಿ ಮಾಡಿ, ಆಸ್ತಿ ಖರೀದಿ ಮಾಡುವ ಅವಕಾಶ ಇರುತ್ತದೆ. ಅಲ್ಲಿಯವರಿಗೆ ಹಣವನ್ನು ಉಳಿತಾಯ ಮಾಡಿ, ಒಂದು ಕಡೆ ಸರಿಯಾದ ಹೂಡಿಕೆ ಮಾಡಿಟ್ಟಿರಬೇಕು. ಉದಾಹರಣೆಗೆ ಷೇರು, ಮ್ಯೂಚುವಲ್ ಫಂಡ್, ಚಿನ್ನ ಇತ್ಯಾದಿ. ಯಾವಾಗ ರಿಸೆಷನ್ ಬರುತ್ತದೋ ಅಂಥ ಸಮಯದಲ್ಲಿ ಮನೆ ಖರೀದಿಗೆ ಕೈ ಹಾಕಬೇಕು.

ಶೇಕಡಾ 1ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರುವಂತೆ ನೋಡಿಕೊಳ್ಳಿ
 

ಶೇಕಡಾ 1ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರುವಂತೆ ನೋಡಿಕೊಳ್ಳಿ

ಎಲ್ಲ ಸಂದರ್ಭದಲ್ಲೂ ರಿಸೆಷನ್ ಗೆ ಕಾಯ್ತಾ ಕೂರುವುದಕ್ಕೆ ಆಗುತ್ತಾ? ಈ ಪ್ರಶ್ನೆ ನಿಮಗೆ ಬಂದಿರಬಹುದು. ಅಂಥ ಸಂದರ್ಭದಲ್ಲಿ ಸೈಟು ಖರೀದಿ ಹಾಗೂ ಮನೆ ನಿರ್ಮಾಣ ಒಟ್ಟೊಟ್ಟಿಗೆ ಮಾಡದಿರಿ. ಸೈಟು ಖರೀದಿಗಾಗಿ, ಅದರಲ್ಲೂ ನೀವು ಎಷ್ಟು ಅಳತೆಯಲ್ಲಿ ಮನೆ ಖರೀದಿ ಮಾಡಬೇಕು ಅಂದುಕೊಂಡಿರುತ್ತೀರಿ ಅದಕ್ಕಿಂತ ಸ್ವಲ್ಪ ದೊಡ್ಡ ಅಳತೆಯ ಸೈಟು ಖರೀದಿಸಿರಿ. ಸೈಟು ಖರೀದಿ ಮತ್ತು ಮನೆ ಕಟ್ಟುವ ಮಧ್ಯೆ ಐದು ವರ್ಷದ ಸಮಯ ಇಟ್ಟುಕೊಂಡು, ಹಣ ಕೂಡಿಟ್ಟುಕೊಳ್ಳಿ. ಅಗತ್ಯ ಬಿದ್ದಲ್ಲಿ ಸೈಟಿನಲ್ಲಿ ಸ್ವಲ್ಪ ಭಾಗ ಮಾರಾಟ ಮಾಡಿ. ಆದಷ್ಟು ಕಡಿಮೆ ಸಾಲ ಮಾಡಿ ಮನೆ ಕಟ್ಟಿಕೊಳ್ಳಿ. ಸಂಬಳದ 40 ಭಾಗಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗದಂತೆ ಪ್ಲ್ಯಾನಿಂಗ್ ಮಾಡಿಕೊಳ್ಳಿ. ಈ ಮೊತ್ತದಲ್ಲೇ ಬಾಡಿಗೆಗೆ ಮನೆಯೊಂದನ್ನು ಕಟ್ಟುವ ಸಾಧ್ಯತೆ ಇದ್ದಲ್ಲಿ ಕಟ್ಟಿ. ಆದರೆ ಸಾಲ ಮಾಡಿಕೊಂಡು ಮನೆ ಕಟ್ಟಿ, ಬಾಡಿಗೆ ಬರುವುದಕ್ಕೆ ಪ್ರಯತ್ನಿಸುವುದಾದರೆ ಶೇಕಡಾ 1ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರುವಂತೆ ನೋಡಿಕೊಳ್ಳಿ.

ಸೈಟುಗಳ ದಾಖಲೆ- ಪತ್ರಗಳು ಸರಿ ಇರಬೇಕು

ಸೈಟುಗಳ ದಾಖಲೆ- ಪತ್ರಗಳು ಸರಿ ಇರಬೇಕು

ದಿನಪತ್ರಿಕೆ ಅಥವಾ ಮತ್ತೆಲ್ಲಾದರೂ ಬ್ಯಾಂಕ್ ಗಳ ಮೂಲಕ ಸೈಟು, ಮನೆ ಹರಾಜಿಗೆ ಬಂದಿರುತ್ತದೆ. ಅಂಥದ್ದರ ಬಗ್ಗೆ ಗಮನ ಇರಲಿ. ಏಕೆಂದರೆ, ದಾಖಲಾತಿಗಳನ್ನು ಅದಾಗಲೇ ಪರಿಶೀಲನೆ ಮಾಡಿಯಾಗಿರುತ್ತದೆ. ಬ್ರೋಕರೇಜ್ ನೀಡುವ ಅಗತ್ಯ ಇರುವುದಿಲ್ಲ. ಸಾಲ ಪಡೆದಿರುತ್ತಾರಾದ್ದರಿಂದ ತೆರಿಗೆ ಮತ್ತಿತರ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲಾಗಿರುತ್ತದೆ. ಸಾಲ ಕೂಡ ನಿಮ್ಮ ಅರ್ಹತೆಗೆ ತಕ್ಕಂತೆ ಸುಲಭವಾಗಿ ದೊರೆಯುತ್ತದೆ. ಮಾರುಕಟ್ಟೆ ಮೌಲ್ಯವನ್ನು ಅಂದಾಜು ಮಾಡುವುದು ಕಷ್ಟವಾಗುವುದಿಲ್ಲ. ಆದ್ದರಿಂದ ಹರಾಜಿಗೆ ಬಂದಂಥ ಆಸ್ತಿಗಳ ಕಡೆಗೆ ಲಕ್ಷ್ಯ ನೀಡಿ. ಅದೇ ರೀತಿ ಬಿಡಿಎ, ಮೂಡಾದಂಥ ಅಭಿವೃದ್ಧಿ ಪ್ರಾಧಿಕಾರಗಳು ಹರಾಜು ಹಾಕುವಂಥ ಸೈಟುಗಳ ಖರೀದಿ ಮಾಡಿದರೆ ದಾಖಲಾತಿಗಳ ಸಮಸ್ಯೆ ಆಗುವುದಿಲ್ಲ. ದಾಖಲೆಗಳು ಉತ್ತಮವಾಗಿರುವ ಸೈಟುಗಳ ಮೌಲ್ಯ ಯಾವಾಗಲೂ ಚೆನ್ನಾಗಿರುತ್ತದೆ ಹಾಗೂ ರೀಸೇಲ್ ಕೂಡ ಸಲೀಸಾಗಿರುತ್ತದೆ.

ಎಷ್ಟು ಸಾಲ, ಬಡ್ಡಿ ಎಷ್ಟು?

ಎಷ್ಟು ಸಾಲ, ಬಡ್ಡಿ ಎಷ್ಟು?

ಈಗ ಮುಖ್ಯ ವಿಚಾರಕ್ಕೆ ಬರೋಣ. ಮನೆ ಕಟ್ಟುವ ಸಲುವಾಗಿ ಒಂದು ಲಕ್ಷ ರುಪಾಯಿ ಸಾಲ ಮಾಡಿದರೆ 1 ಲಕ್ಷಕ್ಕೆ ವರ್ಷಕ್ಕೆ 9 ಸಾವಿರ ರುಪಾಯಿ ಬಡ್ಡಿ ಕಟ್ಟಬೇಕು. ಅದು ಕೂಡ ಇಪ್ಪತ್ತು- ಮೂವತ್ತು ವರ್ಷದ ಅವಧಿಗೆ. ಅದೇ 30 ಲಕ್ಷ ಅಥವಾ 50 ಲಕ್ಷ ರುಪಾಯಿ ಸಾಲ ಪಡೆದಲ್ಲಿ 2.70 ಲಕ್ಷದಿಂದ 4.50 ಲಕ್ಷ ರುಪಾಯಿ ಬಡ್ಡಿಗೇ ಹೋಗುತ್ತದೆ. ಈ ಮೊತ್ತವನ್ನು ಹನ್ನೆರಡರಿಂದ ಭಾಗ ಮಾಡಿದರೆ ತಿಂಗಳಿಗೆ ಎಷ್ಟು ಮೊತ್ತ ಬಡ್ಡಿಯಾಗಿ ಕಟ್ಟಿರುತ್ತೀರಿ ಲೆಕ್ಕ ಹಾಕಿಕೊಳ್ಳಿ. ತುಂಬ ಹೆಸರಾಂತ ಬಡಾವಣೆಗಳಲ್ಲಿ ಎರಡು- ಮೂರು ಕೋಟಿ ಬಂಡವಾಳ ಹಾಕಿ ಕಟ್ಟಿದ ಮನೆಗೆ 30 ಸಾವಿರ ರುಪಾಯಿ ಬಾಡಿಗೆ ಬರುವುದು ಕಷ್ಟ. ಇನ್ನು ಕೆಲಸ ಮಾಡುವ ಸ್ಥಳದಿಂದ ಬಹಳ ದೂರ ಮನೆ ಕಟ್ಟಿದರೆ ಓಡಾಟಕ್ಕೂ ಸಮಸ್ಯೆ. ಇನ್ನು ಮಕ್ಕಳ ಶಾಲೆ ಇತ್ಯಾದಿಗೂ ಕಷ್ಟ. ಸಾಲದ ಸುಳಿಗೆ ಸಿಲುಕಿಕೊಂಡು, ಕಷ್ಟ ಅನುಭವಿಸುವುದಕ್ಕಿಂತ ಬಾಡಿಗೆ ಮನೆಯಲ್ಲಿ ಇದ್ದರೂ ತೊಂದರೆ ಇಲ್ಲ. ಸಾಲ ಮಾಡಿಕೊಂಡು, ಸ್ವಂತ ಮನೆ ಕಟ್ಟಿಕೊಂಡು ಕಷ್ಟಕ್ಕೆ ಸಿಲುಕಿಕೊಳ್ಳಬೇಡಿ. ಎಷ್ಟು ಸಾಲ ಪಡೆಯುತ್ತೀರಿ, ಎಷ್ಟು ಬಡ್ಡಿ ಕಟ್ಟುತ್ತೀರಿ, ಈಗ ಮನೆ ಕಟ್ಟುವುದಕ್ಕೆ ಅಥವಾ ಖರೀದಿಸುವುದಕ್ಕೆ ಸೂಕ್ತ ಸಮಯವೇ ಇತ್ಯಾದಿ ಯೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.

English summary

When To Purchase Or Construct A House? Here Is An Explainer

Purchase or construction of house is a big dream. What are the points to consider before house construction or purchase?
Story first published: Thursday, February 20, 2020, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X