For Quick Alerts
ALLOW NOTIFICATIONS  
For Daily Alerts

ಇಂಟರ್ ವ್ಯೂಗಳಲ್ಲಿ ಯಶಸ್ಸು ಪಡೆಯುವುದಕ್ಕೆ ಅಡ್ಡಿ ಬರುವ ಆ ಅಂಶಗಳು ಯಾವುವು?

|

ಇಬ್ಬರು ಪಾಸಾಗುವಷ್ಟು ಮಾರ್ಕ್ಸ್ ಬಂದಿದ್ದರೂ ಕೆಲವರು ಖಾಸಗಿ ಕಂಪೆನಿಗಳ ಇಂಟರ್ ವ್ಯೂಗಳಲ್ಲಿ ಪದೇ ಪದೇ ಫೇಲಾಗುತ್ತಾರೆ ಯಾಕೆ? ಅಲ್ಲಿ ಗಮನಿಸುವಂಥ ಅಂಶಗಳು ಯಾವುವು? ಅದಕ್ಕೆ ಸಿದ್ಧತೆ ಹೇಗಿರಬೇಕು? ಇನ್ನು ಉದ್ಯೋಗ ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಮಾಡುವಾಗ ಒಳ್ಳೆ ಅವಕಾಶಗಳು ಬರುವುದಿಲ್ಲ ಏಕೆ?

 

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಬೆಂಗಳೂರಿನ ಪ್ರಮುಖ ಕಂಪೆನಿಗಳ ಮ್ಯಾನೇಜರ್ ಗಳನ್ನು ಮಾತನಾಡಿಸಿ, ಈ ಲೇಖನ ನಿಮ್ಮ ಮುಂದೆ ಇಡಲಾಗುತ್ತಿದೆ. ಇದರಿಂದ ಉದ್ಯೋಗ ಹುಡುಕುವವರಿಗೆ ಖಂಡಿತಾ ಸಹಾಯ ಆಗುತ್ತದೆ. ಆ ಮ್ಯಾನೇಜರ್ ಗಳು ತಮ್ಮ ಹೆಸರು ಹಾಗೂ ಕಂಪೆನಿ ಯಾವುದು ಎಂಬುದನ್ನು ಬಹಿರಂಗ ಪಡಿಸಬಾರದು ಎಂದು ಷರತ್ತು ಹಾಕಿರುವುದರಿಂದ ಅವರ ಹಾಗೂ ಕಂಪೆನಿ ಹೆಸರನ್ನು ಪ್ರಸ್ತಾವ ಮಾಡುತ್ತಿಲ್ಲ.

ಇಂಟರ್ ವ್ಯೂಗಳಲ್ಲಿ ಯಶಸ್ಸು ನೀಡುವ ಆ ಅಂಶಗಳು ಯಾವುವು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ...

ಕಂಪೆನಿಯಿಂದ ನಮಗೇನು ಲಾಭ ಎಂಬ ಆಲೋಚನೆ

ಕಂಪೆನಿಯಿಂದ ನಮಗೇನು ಲಾಭ ಎಂಬ ಆಲೋಚನೆ

ಒಂದು ಡಿಗ್ರಿ ಪಡೆದ ನಂತರ ಮುಂದಿನ ಓದಿಗೆ ಅನುಕೂಲ ಆಗಲಿ. ಓದಿಗೆ ಹಣ ಸಂಪಾದಿಸೋಣ ಎಂದು ಆಲೋಚಿಸುವವರು ಈಚೆಗೆ ಹೆಚ್ಚಾಗುತ್ತಿದ್ದಾರೆ. ಈ ರೀತಿ ಯೋಜನೆ ಇರುವುದು ಖಂಡಿತಾ ತಪ್ಪಲ್ಲ. ಅಂಥ ಸನ್ನಿವೇಶದಲ್ಲಿ ಮುಂದಿನ ವ್ಯಾಸಂಗಕ್ಕೆ ಪ್ರಾಯೋಜಕತ್ವ ನೀಡುವಂಥ ಕಂಪೆನಿಗಳನ್ನು ಆರಿಸಿಕೊಳ್ಳಬೇಕು. ಬಹುತೇಕರು ಇಂಟರ್ ವ್ಯೂ ಸಂದರ್ಭದಲ್ಲೇ ತಮ್ಮ ಉದ್ದೇಶ ಹೇಳುತ್ತಾರೆ. ಒಂದೆರಡು ವರ್ಷವಷ್ಟೇ ಕೆಲಸ ಮಾಡಿ, ಹಣ ಕೈಲಿಟ್ಟುಕೊಂಡು ಕೆಲಸ ಬಿಡುವುದು ಉದ್ದೇಶ ಅಥವಾ ಇದು ತುಂಬ ಒಳ್ಳೆ ಹೆಸರಿರುವ ಸಂಸ್ಥೆ. ಇಲ್ಲಿ ಅನುಭವ ಇದ್ದರೆ ಮುಂದೆ ತುಂಬ ಒಳ್ಳೆ ಸಂಬಳಕ್ಕೆ ಬೇರೆ ಕಡೆ ಬೇಡಿಕೆ ಇಡಬಹುದು. ಅದಕ್ಕಾಗಿಯೇ ಇಲ್ಲಿ ಕೆಲಸಕ್ಕೆ ಪ್ರಯತ್ನಿಸಿದೆ ಎಂದು ಹೇಳಿಬಿಡುತ್ತಾರೆ. ಇನ್ನೂ ಕೆಲವರು ಇದೇ ಮಾತುಗಳನ್ನು ಆಡದಿದ್ದರೂ ಅವರ ಧ್ವನಿ, ಬಾಡಿ ಲಾಂಗ್ವೇಜ್ ಹಾಗಿರುತ್ತದೆ. ಅಂಥವರಿಗೆ ಅವಕಾಶ ನೀಡಲು ಕಂಪೆನಿಗಳು ಹಿಂಜರಿಯುತ್ತವೆ. ಹೇಗೆ ಒಂದು ಕಂಪೆನಿ ಅಥವಾ ಸಂಸ್ಥೆಯಿಂದ ವೈಯಕ್ತಿಕವಾಗಿ ಏನು ಲಾಭ ಎಂದು ಯೋಚಿಸುವವರಿದ್ದಾರೋ, ಅದೇ ರೀತಿ ಆ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಂಡ ಮೇಲೆ ಎಷ್ಟು ಸಮಯ ಕಂಪೆನಿಯಲ್ಲಿ ಇರುತ್ತಾರೆ ಎಂಬುದನ್ನು ನೋಡುತ್ತಾರೆ. ಏಕೆಂದರೆ, ಕೆಲವು ಕಂಪೆನಿಗಳಲ್ಲಿ ಉದ್ಯೋಗಕ್ಕೆ ಒಬ್ಬ ವ್ಯಕ್ತಿಯನ್ನು ಸಿದ್ಧ ಮಾಡುವುದಕ್ಕೇ ಒಂದರಿಂದ ಒಂದೂವರೆ ವರ್ಷದ ತನಕ ಸಮಯ ಬೇಕಾಗುತ್ತದೆ. ಅಷ್ಟು ಸಮಯ ಹಾಗೂ ಹಣವನ್ನು ಉದ್ಯೋಗಿ ಮೇಲೆ ಸಂಸ್ಥೆಯು ಹೂಡಿಕೆ ಮಾಡಿರುತ್ತದೆ. ಆದ್ದರಿಂದ ಇಂಥ ಯೋಜನೆ ಇರುವವರನ್ನು ಆಯ್ಕೆ ಮಾಡುವುದಿಲ್ಲ.

ಪ್ರಾಮಾಣಿಕತೆ ಉತ್ತರ ಹೇಳಬೇಕು
 

ಪ್ರಾಮಾಣಿಕತೆ ಉತ್ತರ ಹೇಳಬೇಕು

ಇಂಟರ್ ವ್ಯೂ ಸಂದರ್ಭದಲ್ಲಿ ವ್ಯಕ್ತಿಯ ಧೋರಣೆಯನ್ನು ಗಮನಿಸಲಾಗುತ್ತದೆ. ಕೆಲವರು ತಮ್ಮ ಮೇಲೆ ವಿಪರೀತ ಅನುಕಂಪ ಬರುವಂತೆ ಕುಟುಂಬದ ಹಾಗೂ ತಮ್ಮ ಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಮಾತುಗಳಲ್ಲಿ ತಮಗೆ ಎಲ್ಲವೂ ಗೊತ್ತು ಎಂಬ ಧೋರಣೆ ಇಣುಕುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಕೂಡ ಇಂಟರ್ ವ್ಯೂಗಳಲ್ಲಿ ಆಯ್ಕೆ ಆಗುವುದಿಲ್ಲ. ಕೇಳಿದ ಪ್ರಶ್ನೆಗೆ ಒಂದು ವೇಳೆ ಉತ್ತರ ಗೊತ್ತಿಲ್ಲದಿದ್ದಲ್ಲಿ, ನೇರವಾಗಿ ಹಾಗೂ ಸೌಮ್ಯ ಧ್ವನಿಯಿಂದ 'ಗೊತ್ತಿಲ್ಲ' ಎಂದು ಪ್ರಾಮಾಣಿಕವಾಗಿ ಹೇಳುವುದನ್ನೇ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಗೊತ್ತಿಲ್ಲದಿದ್ದರೂ ಅಥವಾ ತಾವು ತಪ್ಪಾದ ಮಾಹಿತಿಯನ್ನೇ ಹೇಳುತ್ತಿದ್ದರೂ ಅದೇ ಸರಿ ಎಂದು ವಾದಿಸುವುದನ್ನು ಇಷ್ಟ ಪಡುವುದಿಲ್ಲ. ತಮಗೆ ಗೊತ್ತಿಲ್ಲ ಅಂದರೆ ಏನೆಂದುಕೊಂಡಾರು ಎಂಬ ಭಯದಲ್ಲಿ ಕೆಲವರು, ತಪ್ಪು ತಪ್ಪಾದ ಉತ್ತರ ನೀಡುತ್ತಾರೆ. ಅದಕ್ಕೆ ಸಬೂಬು ನೀಡಲು ಮತ್ತಷ್ಟು ತಪ್ಪುಗಳನ್ನು ಮಾಡುತ್ತಾರೆ ಹಾಗಾಗದಂತೆ ನೋಡಿಕೊಳ್ಳಬೇಕು. ಇಂಟರ್ ವ್ಯೂ ಸಂದರ್ಭದಲ್ಲಿ ಮಾನಸಿಕವಾಗಿ ದೃಢವಾಗಿ, ಮಾಹಿತಿಯನ್ನು ಪ್ರಾಮಾಣಿಕತೆಯಿಂದ ನೀಡಬೇಕು. ಇನ್ನು ಇಂಟರ್ ವ್ಯೂಗೆ ತೆರಳುವ ಕಂಪೆನಿ ಅಥವಾ ಸಂಸ್ಥೆ ಬಗ್ಗೆ ಪ್ರಾಥಮಿಕವಾದ ಮಾಹಿತಿಯನ್ನು ತಿಳಿದುಕೊಂಡಿರಲೇ ಬೇಕು. ನಿಮ್ಮ ಇವತ್ತಿನ ತಪ್ಪಿಗೆ ಓದಿದ ಕಾಲೇಜು, ಪಾಠ ಮಾಡಿದ ಉಪನ್ಯಾಸಕರು, ನೀವಿದ್ದ ಊರು, ಪೋಷಕರನ್ನು ದೂಷಿಸಬಾರದು.

ಬಾಡಿ ಲಾಂಗ್ವೇಜ್, ಸಿದ್ಧತೆ

ಬಾಡಿ ಲಾಂಗ್ವೇಜ್, ಸಿದ್ಧತೆ

ಬಾಡಿ ಲಾಂಗ್ವೇಜ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇದರ ಜತೆಗೆ ದಿರಿಸು ಧರಿಸುವಾಗ ಹೋಗುವ ಸ್ಥಳದಲ್ಲಿ ನಿರೀಕ್ಷೆ ಮಾಡುವುದು ಎಂಥ ಗೌರವಯುತ ದಿರಿಸು ಎಂಬ ಗಮನ ಇರಬೇಕು. ಬ್ಯಾಂಕ್, ಬಿಪಿಒ, ಐಟಿ ಹೀಗೆ ಒಂದೊಂದು ಕಡೆ ಒಂದೊಂದು ರೀತಿಯ ಸಿದ್ಧತೆ ಬೇಕಾಗುತ್ತದೆ. ಇನ್ನು ಗ್ರಾಹಕರ ಜತೆ ನೇರ ಸಂವಹನ ಇರುವ ಕಡೆ, ಗ್ರಾಹಕರು ಇರುವ ಕಡೆ ಪದೇ ಪದೇ ಹೋಗುವಂಥ ಕೆಲಸಗಳು... ಹೀಗೆ ಆಯಾ ಉದ್ಯೋಗದ ಅಗತ್ಯಗಳನ್ನು ಅರಿತು ಸಿದ್ಧತೆ ನಡೆಸಿಕೊಂಡಿರಬೇಕು. ಬಹುತೇಕ ಕಡೆ ಇಂಗ್ಲಿಷ್ ನಲ್ಲೇ ಸಂವಹನ ಇರುತ್ತದಾದ್ದರಿಂದ ಸರಳವಾಗಿ ಮಾತನಾಡುವುದನ್ನು ರೂಢಿಸಿಕೊಂಡಿರಬೇಕು. ಅದೇ ರೀತಿ ಕಂಪ್ಯೂಟರ್ ಪ್ರಾಥಮಿಕ ಜ್ಞಾನವನ್ನು ಹೊಂದಿರಬೇಕು. ನಿಮ್ಮ ಬಗ್ಗೆ ಪರಿಚಯ, ವೈಯಕ್ತಿಕ ಮಾಹಿತಿ, ಶಿಕ್ಷಣ ಮತ್ತಿತರ ವಿಚಾರಗಳನ್ನು ತಿಳಿಸಿಕೊಡುವಂಥ ಕರಿಕ್ಯುಲಮ್ ವೀಟೆ (C.V) ಸುಳ್ಳು- ಉತ್ಪೇಕ್ಷಿತ ಮಾಹಿತಿಯನ್ನು ಒಳಗೊಂಡಿರಬಾರದು. ಸಂಬಳದ ವಿಚಾರವನ್ನು ಮಾತನಾಡುವಾಗ ಸ್ಪಷ್ಟವಾದ ನಿಲುವಿರಲಿ. ಅನುಭವ ಇರುವವರು ಹಾಗೂ ಯಾವುದೇ ಉದ್ಯೋಗಕ್ಕೆ ಹೊಸಬರಿಗೆ ಈ ವಿಚಾರದಲ್ಲಿ ವ್ಯತ್ಯಾಸ ಇರುತ್ತದೆ. ಈ ಬಗ್ಗೆ ಮಾಹಿತಿಗೆ ಅನುಭವಿಗಳ ಮಾರ್ಗದರ್ಶನ ಪಡೆಯಿರಿ.

ಅನುಭವಿಗಳು ಹೇಗೆ ಸಿದ್ಧರಾಗಬೇಕು?

ಅನುಭವಿಗಳು ಹೇಗೆ ಸಿದ್ಧರಾಗಬೇಕು?

ಈಗಾಗಲೇ ಕೆಲಸದ ಅನುಭವ ಇರುವವರಿಗೆ ಇಂಟರ್ ವ್ಯೂ ಎಂಬುದು ವಿಭಿನ್ನವಾಗಿರುತ್ತದೆ. ಪ್ರಸ್ತುತ ಮಾಡುತ್ತಿರುವ ಉದ್ಯೋಗ ಬಿಡುವುದಕ್ಕೆ ಕಾರಣ ಏನು ಎಂಬುದಕ್ಕೆ ಸರಿಯಾದ ಉತ್ತರ ಇರಲಿ. ಹಿಂದಿನ ಕಂಪೆನಿ, ಮೇಲಧಿಕಾರಿಗಳು, ಶಿಫ್ಟ್... ಹೀಗೆ ಯಾವುದನ್ನು ದೂರಿದರೂ ಒಳ್ಳೆ ಅಭಿಪ್ರಾಯ ಮೂಡುವುದಿಲ್ಲ. ಒಂದೇ ಕಂಪೆನಿಯಲ್ಲಿ ದೀರ್ಘಾವಧಿ ಇದ್ದರೂ ಪದೇಪದೇ ಕಂಪೆನಿಗಳನ್ನು ಬದಲಾಯಿಸಿದ್ದರೂ ಎರಡಕ್ಕೂ ಕಾರಣವನ್ನು ಕೇಳಲಾಗುತ್ತದೆ. ಅದೇ ರೀತಿ ದೀರ್ಘ ಕಾಲ ಒಂದು ಕಡೆ ಉದ್ಯೋಗ ಮಾಡಿಯೂ ಯಾವುದೇ ಪ್ರಮೋಷನ್ ಸಿಕ್ಕದಿದ್ದರೂ ಅದಕ್ಕೆ ಕಾರಣ ಏನು ಎಂದು ಹೇಳಬೇಕಾಗುತ್ತದೆ. ಈಗಿನ ಕಂಪೆನಿಯಲ್ಲಿ ನಿರ್ವಹಿಸುತ್ತಿರುವ ಜವಾಬ್ದಾರಿಯ ಹೊರತಾಗಿ ಕಲಿತ ಹೊಸ ವಿಷಯಗಳು, ಇತರ ತಂಡಕ್ಕೆ ಮಾಡಿದ ಸಹಾಯ ಹಾಗೂ ಸಾಧನೆ, ಅದಕ್ಕೂ ಮುಂಚಿನ ವೇತನ ಹೆಚ್ಚಳ, ಬಡ್ತಿ, ಗ್ರಾಹಕರು- ಟೀಮ್ ಮುನ್ನಡೆಸುವವರು ಹಾಗೂ ಜತೆಯಲ್ಲಿ ಕೆಲಸ ಮಾಡುವವರಿಂದ ಪಡೆದ ಮೆಚ್ಚುಗೆ ಮುಂತಾದವುಗಳ ಬಗ್ಗೆಯೂ ಕೇಳಲಾಗುತ್ತದೆ. ಇನ್ನು ಈ ಹಿಂದಿನ ಸಂಸ್ಥೆಗಿಂತ ಈಗ ಎಷ್ಟು ವೇತನ ಹೆಚ್ಚಳ ನಿರೀಕ್ಷೆ ಮಾಡುತ್ತೀರಿ ಎಂಬುದನ್ನು ಕೇಳಲಾಗುತ್ತದೆ. ಬಹಳ ಮಂದಿಗೆ ವ್ಯತ್ಯಾಸ ಬರುವುದು ಹಾಗೂ ಉದ್ಯೋಗ ಸಿಗದಂತೆ ಆಗುವುದು ಈ ವಿಷಯ ಬಂದಾಗಲೇ. ಆದ್ದರಿಂದ ವೇತನ ವಿಚಾರದಲ್ಲಿ ಸ್ಪಷ್ಟತೆ ಇರಲಿ.

English summary

How To Get Success In Job Interviews?

Tips to job seekers: How to get success in job interviews? What are the points interviewers consider? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X