For Quick Alerts
ALLOW NOTIFICATIONS  
For Daily Alerts

ಭಾರತದ ಇ-ರುಪೀ ಹೇಗಿರುತ್ತೆ? ಡಿಜಿಟಲ್ ಹಣದ ಚಲಾವಣೆ ಹೇಗೆ?

|

ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಯ ಅಬ್ಬರ ಹೆಚ್ಚಾಗುತ್ತಿದ್ದ ಕಾಲದಲ್ಲಿ ಕೇಂದ್ರ ಸರಕಾರ ಭಾರತದ್ದೇ ಆದ ಒಂದು ಡಿಜಿಟಲ್ ಕರೆನ್ಸಿಯನ್ನು ಹೊರತರುವ ಚಿಂತನೆ ತಂದಿತ್ತು. ಎರಡು ವರ್ಷಗಳ ಹಿಂದೆ 2020ರಲ್ಲಿ ಡಿಜಿಟಲ್ ಕರೆನ್ಸಿಯ ರೂಪುರೇಖೆ ಬಗ್ಗೆ ಚರ್ಚಿಸಲು ಆರ್‌ಬಿಐ ಒಂದು ತಂಡ ರಚನೆ ಮಾಡಿತ್ತು. 2022ರ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಬಗ್ಗೆ ಘೋಷಣೆ ಮಾಡಿದರು.

 

ಒಂದು ವಾರದ ಹಿಂದೆ, 2022 ಅಕ್ಟೋಬರ್ 7 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ರೂಪಾಯಿಯ (ಇ-ರುಪೀ) ಕಾನ್ಸೆಪ್ಟ್ ನೋಟ್ ಬಿಡುಗಡೆ ಮಾಡಿತ್ತು. ಡಿಜಿಟಲ್ ರೂಪಾಯಿ ಜಾರಿಗೆ ತರಲು ಹಾದಿ ಸುಗಮವಾಗುವಂತೆ ಮಾಡಲು ಕಾನ್ಸೆಪ್ಟ್ ನೋಟ್ ಬಿಡುಗಡೆ ಮಾಡಲಾಗಿತ್ತು. ಯಾಕೆಂದರೆ ಡಿಜಿಟಲ್ ರೂಪಾಯಿಯ ರೂಪುರೇಖೆ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿ ಇದೆ. ಈ ಪ್ರಯೋಗಗಳ ಪರಿಣಾಮದ ಆಧಾರದ ಮೇಲೆ ಇ-ರೂಪಾಯಿಯ ರೂಪುರೇಖೆ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಡಿಜಿಟಲ್ ರುಪೀ ಏನಿದು?

ಡಿಜಿಟಲ್ ರುಪೀ ಏನಿದು?

ಇ-ರುಪಾಯಿ ಎಂಬುದು ಭಾರತೀಯ ರೂಪಾಯಿ ಕರೆನ್ಸಿಯ ಡಿಜಿಟಲ್ ರೂಪ ಎನ್ನಬಹುದು. ಎರಡು ರೀತಿಯ ಇ-ರುಪಾಯಿಗಳನ್ನು ಚಲಾವಣೆಗೆ ತರುವ ಯೋಜನೆ ಆರ್‌ಬಿಐ ಮುಂದಿದೆ. ಒಂದು, ಬ್ಯಾಂಕುಗಳ ಮಧ್ಯೆ ವಹಿವಾಟಿಗೆ ವೋಲ್‌ಸೇಲ್ ಇ-ರುಪೀ. ಇನ್ನೊಂದು, ಸಾರ್ವಜನಿಕ ಬಳಕೆಗೆ ರೀಟೇಲ್ ಇ-ರುಪೀ. ಬ್ಯಾಂಕ್ ಅಥವಾ ಸರ್ವಿಸ್ ಪ್ರೊವೈಡರ್ ಒದಗಿಸುವ ವ್ಯಾಲಟ್‌ನಲ್ಲಿ ನೀವು ಡಿಜಿಟಲ್ ರೂಪಾಯಿ ಇಟ್ಟುಕೊಳ್ಳಬಹುದು. ವ್ಯಾಲಟ್ ಎಂಬುದು ಭೌತಿಕ ವಸ್ತುವಲ್ಲ. ಪೇಟಿಎಂ ಇತ್ಯಾದಿ ಆ್ಯಪ್‌ಗಳು ಒದಗಿಸುವ ವ್ಯಾಲಟ್ ರೀತಿಯದ್ದಾಗಿರುತ್ತದೆ.

ಬಿಟ್‌ಕಾಯಿನ್‌ನಂತೆ ಮೈನಿಂಗ್ ಮಾಡಲಾಗುತ್ತಾ?

ಬಿಟ್‌ಕಾಯಿನ್‌ನಂತೆ ಮೈನಿಂಗ್ ಮಾಡಲಾಗುತ್ತಾ?

ಇದು ಕ್ರಿಪ್ಟೋಕರೆನ್ಸಿಯಾ ಎಂಬ ಪ್ರಶ್ನೆಗೆ ಉತ್ತರ ಭಾಗಶಃ ಹೌದು. ಕ್ರಿಪ್ಟೋಕರೆನ್ಸಿಯ ಪ್ರಮುಖ ತಂತ್ರಜ್ಞಾನವನ್ನು ಡಿಜಿಟಲ್ ರೂಪಾಯಿ ವ್ಯವಸ್ಥೆಗೆ ಅಳವಡಿಸಲಾಗುವುದು. ಆದರೆ, ಬಿಟ್‌ಕಾಯಿನ್ ಇತ್ಯಾದಿ ಖಾಸಗಿ ಕ್ರಿಪ್ಟೋಕರೆನ್ಸಿಯ ರೀತಿಯಲ್ಲೇ ಇದು ಇರುವುದಿಲ್ಲ. ಆರ್‌ಬಿಐನಿಂದ ನೀಡಲ್ಪಡುವ ಮತ್ತು ಅದರ ನಿಯಂತ್ರಣದಲ್ಲೇ ಇರುವ ಒಂದು ಡಿಜಿಟಲ್ ಹಣವಾಗಿರುತ್ತದೆ.

ಬಿಟ್‌ಕಾಯಿನ್ ಇತ್ಯಾದಿ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಮೈನ್ ಮಾಡುವ ಬಗ್ಗೆ ಗೊತ್ತಿರಬಹುದು. ಆರ್‌ಬಿಐನ ಇ-ರುಪೀಗೂ ಕ್ರಿಪ್ಟೋಕರೆನ್ಸಿಯ ತಂತ್ರಜ್ಞಾನ ಇರುವುದರಿಂದ ಇಲ್ಲಿಯೂ ಮೈನಿಂಗ್ ಮಾಡಬಹುದಾ ಎಂಬ ಪ್ರಶ್ನೆ ಬರುತ್ತದೆ. ಆದರೆ, ಆರ್‌ಬಿಐನ ಕಾನ್ಸೆಪ್ಟ್ ನೋಟ್ ಪ್ರಕಾರ ಬಿಟ್‌ಕಾಯಿನ್‌ನಂತೆ ಇ-ರುಪೀ ಅನ್ನು ಮೈನ್ ಮಾಡಲಾಗುವುದಿಲ್ಲ.

ಇ-ರುಪೀ ವಹಿವಾಟು ಹೇಗೆ?
 

ಇ-ರುಪೀ ವಹಿವಾಟು ಹೇಗೆ?

ಕಾನ್ಸೆಪ್ಟ್ ನೋಟ್ ಪ್ರಕಾರ, ಸಿಬಿಡಿಸಿಯನ್ನು ಆರ್‌ಬಿಐ ತರುತ್ತದೆ. ಈ ಡಿಜಿಟಲ್ ಕರೆನ್ಸಿಯನ್ನು ಸಾರ್ವಜನಿಕರಿಗೆ ಬ್ಯಾಂಕುಗಳು ವಿತರಿಸುತ್ತವೆ. ರೀಟೇಲ್ ಇ-ರುಪೀ ಟೋಕನ್ ಆಧಾರಿತವಾಗಿ ಚಲಾವಣೆ ಆಗುತ್ತದೆ. ಯುಪಿಐ ಆ್ಯಪ್‌ಗಳಲ್ಲಿ ಮೊಬೈಲ್ ನಂಬರ್ ಇತ್ಯಾದಿ ಗುರುತಿನ ಆಧಾರದಲ್ಲಿ ಹಣ ಚಲಾವಣೆ ಆಗುತ್ತದೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಯೂನಿಕ್ ಆದ ಐಡಿಗಳಿದ್ದು ಅವುಗಳಿಗೆ ಹಣದ ರವಾನೆ ಮಾಡಬಹುದು.

ಅಜ್ಞಾತ ವಹಿವಾಟು ಸಾಧ್ಯವಾ?

ಅಜ್ಞಾತ ವಹಿವಾಟು ಸಾಧ್ಯವಾ?

ಸದ್ಯದ ಮಾಹಿತಿ ಪ್ರಕಾರ, ಬ್ಯಾಂಕ್‌ನಲ್ಲಿ ಹಣದ ಠೇವಣಿ ಇಟ್ಟರೆ ಬಡ್ಡಿ ಸಿಗುವ ರೀತಿಯಲ್ಲಿ ಡಿಜಿಟಲ್ ರೂಪಾಯಿಗೆ ಬಡ್ಡಿ ಸಿಗುವುದಿಲ್ಲ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗಿ ಹೋಗುವ ಸಂಭವ ಇರುವುದರಿಂದ ಆರ್‌ಬಿಐ ಇ-ರುಪಾಯಿಯನ್ನು ಬಡ್ಡಿಯಿಂದ ಹೊರತುಪಡಿಸಿದೆ.

ಬಿಟ್‌ಕಾಯಿನ್‌ನಂಥ ಖಾಸಗಿ ಕ್ರಿಪ್ಟೋಕರೆನ್ಸಿಯಲ್ಲಿ ಹಣದ ವಹಿವಾಟು ಅಜ್ಞಾತವಾಗಿ ಇರುತ್ತದೆ. ನಗದು ಹಣದ ವಹಿವಾಟಿನಲ್ಲಂತೂ ಹಣ ಯಾರ್ಯಾರ ಕೈ ಬದಲಾಯಿಸಿದೆ ಎಂಬುದು ಗೊತ್ತೇ ಆಗುವುದಿಲ್ಲ. ಬ್ಯಾಂಕ್ ವಹಿವಾಟಿನಲ್ಲಿ ಪ್ರತಿಯೊಂದೂ ಟ್ರ್ಯಾಕ್ ಆಗುತ್ತದೆ. ಆದರೆ, ಆರ್‌ಬಿಐನ ಸಿಬಿಡಿಸಿಯಲ್ಲಿ ಸಣ್ಣ ಮೊತ್ತದ ಹಣದ ವಹಿವಾಟನ್ನು ಅಜ್ಞಾತವಾಗಿರುವಂತೆ ಮಾಡಬಹುದು. ದೊಡ್ಡ ಮೊತ್ತದ ಹಣದ ವಹಿವಾಟನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಇಂಟರ್ನೆಟ್ ಅಗತ್ಯವಿರುತ್ತಾ?

ಇಂಟರ್ನೆಟ್ ಅಗತ್ಯವಿರುತ್ತಾ?

ಇ-ರುಪಾಯಿ ಆದ್ದರಿಂದ ಇಂಟರ್ನೆಟ್ ಕನೆಕ್ಟಿವಿಟಿ ಅನಿವಾರ್ಯ ಎನಿಸಬಹುದು. ಆದರೆ, ಆರ್‌ಬಿಐನ ಡಿಜಿಟಲ್ ಕರೆನ್ಸಿಗೆ ಆಫ್‌ಲೈನ್ ಫೀಚರ್ ಇದೆ. ಇಂಟರ್ನೆಟ್ ಇಲ್ಲದೆಯೇ ನೀವು ಇ-ರುಪೀ ಚಲಾವಣೆ ಮಾಡಬಹುದು. ಆದರೆ, ಆಫ್‌ಲೈನ್‌ನಲ್ಲಿ ಚಲಾವಣೆ ಮಾಡುವಾಗ ಡೂಪ್ಲಿಕೇಶನ್ ಆಗುವ ಸಂಭವ ಇರುವುದರಿಂದ ಆಫ್‌ಲೈನ್ ವಹಿವಾಟಿಗೆ ಒಂದು ಮಿತಿ ನಿಗದಿ ಮಾಡುವ ಸಾಧ್ಯತೆ ಇರುತ್ತದೆ.

ಇ-ರುಪಾಯಿಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದು

ಇ-ರುಪಾಯಿಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದು

ಇ-ರುಪಾಯಿಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದು. ನಿರ್ದಿಷ್ಟ ಕಾಲಾವಧಿಗೆ ಮಾತ್ರ ಸೀಮಿತವಾಗಿರುವ ವೋಚರ್‌ನಂತೆ ಇ-ರುಪಾಯಿಯ ಚಲಾವಣೆ ಮಾಡಬಹುದು. ಇದರಿಂದ ಬೇಡಿಕೆಗೆ ತಕ್ಕಂತೆ ಇ-ರುಪೀ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ, ನಿರ್ದಿಷ್ಟ ವಲಯಕ್ಕೆ ಮಾತ್ರ ಉಪಯೋಗವಾಗುವ ರೀತಿಯಲ್ಲಿ ಇ-ರುಪೀಯಲ್ಲಿ ಪ್ರೋಗ್ರಾಮಿಂಗ್ ಮಾಡಬಹುದು. ಹೀಗೆ ನಾನಾ ರೀತಿಯ ಅವಕಾಶಗಳು ಸಿಬಿಡಿಸಿಯಲ್ಲಿವೆ.

ಇನ್ನೊಂದು ವಿಷಯ ಎಂದರೆ, ಡಿಜಿಟಲ್ ಹಣವನ್ನು ಭಾರತದಲ್ಲಿ ಮಾತ್ರವಲ್ಲ, ಇತರ ಹಲವು ದೇಶಗಳಲ್ಲಿ ತರಲಾಗುತ್ತಿದೆ. ಕೆಲ ದೇಶಗಳಲ್ಲಿ ಈಗಾಗಲೇ ಚಲಾವಣೆಯಲ್ಲುಂಟು. ಈಗಿನ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಹಣದ ಮಾರುಕಟ್ಟೆಗೆ ಪೂರಕವಾಗಿರುವ ರೀತಿಯಲ್ಲಿ ಆರ್‌ಬಿಐ ಇ-ರುಪೀಯ ರೂಪುರೇಖೆ ರಚಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary

Know What Is RBI's e-Rupee, How Its Transaction, Details In Kannada

According to the RBI concept note, the central bank will commence pilot launches of the digital rupee in India. Here we explain what the proposed digital rupee can mean for you.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X