ದೇಶದಾದ್ಯಂತ ಮಾರ್ಚ್ 11ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಬಂದ್ ಅನ್ನು ವಿವಿಧ ಒಕ್ಕೂಟಗಳು ಮುಂದೂಡಿವೆ. ಶನಿವಾರದಂದು ಮುಂಬೈನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ 'ಸಕಾರಾತ್ಮಕ' ಬೆಳವಣಿಗೆಗಳು ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಎಐಬಿಇಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಸೇರಿ ಈ ಬಂದ್ ಗೆ ಕರೆ ನೀಡಿದ್ದವು. ಬ್ಯಾಂಕಿಂಗ್ ವಲಯದ ನೌಕರರ ಒಕ್ಕೂಟಗಳು ಸೇರಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಎಂದು ಮಾಡಿಕೊಂಡಿವೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಈ ಬಗ್ಗೆ ಹೇಳಿಕೆ ನೀಡಿದೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಜತೆ ದ್ವಿಪಕ್ಷೀಯ ಚರ್ಚೆ ನಡೆದಿದೆ. 15 ಪರ್ಸೆಂಟ್ ವೇತನ ಹೆಚ್ಚಳ, ಐದು ದಿನ ಬ್ಯಾಂಕಿಂಗ್ ಕೆಲಸ ಇತ್ಯಾದಿ ವಿಚಾರಗಳು ಅವುಗಳಲ್ಲಿ ಒಳಗೊಂಡಿದ್ದವು. ಒಕ್ಕೂಟಗಳು ಪ್ರಸ್ತಾಪಿಸಿದ್ದ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಐಬಿಎ ಒಪ್ಪಿಕೊಂಡಿದೆ ಎಂದು ತಿಳಿಸಲಾಗಿದೆ.