LIC ಷೇರು ಮಾರಾಟ ಎಲ್ಲಿಯವರೆಗೆ ಬಂತು? ಐಪಿಒ ಪೂರ್ಣ ಮಾಹಿತಿ
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್ ಐಸಿ) ಈ ವರ್ಷದೊಳಗೆ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ತರಲು ಸರ್ಕಾರವು ಪ್ರಕ್ರಿಯೆ ಆರಂಭವಾಗಿದೆ. ಇದು ದೇಶದಲ್ಲೇ ಅತಿ ದೊಡ್ಡ ಐಪಿಒ ಆಗುವ ಸಾಧ್ಯತೆ ಇದೆ. ಅಂದ ಹಾಗೆ ಎಲ್ ಐಸಿಯು ದೇಶದ ಅತ್ಯಂತ ಹಳೆಯ ಹಾಗೂ ಅತಿ ದೊಡ್ಡ ಜೀವ ವಿಮಾ ಕಂಪೆನಿ.
ಕಳೆದ ವಾರ ಹಣಕಾಸು ಸಚಿವಾಲಯವು ಐಪಿಒ ಪ್ರಕ್ರಿಯೆಗಾಗಿ ನೆರವು ನೀಡಲು ಇನ್ವೆಸ್ಟ್ ಮೆಂಟ್ ಬ್ಯಾಂಕರ್ಸ್, ಹಣಕಾಸು ಸಂಸ್ಥೆಗಳು, ಕನ್ಸಲ್ಟಿಂಗ್ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಿದೆ. ಸರ್ಕಾರವು ಒಂದು ವೇಳೆ 5- 10 ಪರ್ಸೆಂಟ್ ಪಾಲನ್ನು ಮಾರಲು ನಿರ್ಧರಿಸಿದರೂ ಐಪಿಒ ಅತಿ ದೊಡ್ಡದಾಗುತ್ತದೆ.

ಎಲ್ ಐಸಿ ಆಸ್ತಿ, ಲಾಭ ಮತ್ತಿತರ ವಿವರ
1956ರಲ್ಲಿ ಆರಂಭವಾದ ಜೀವ ವಿಮಾ ನಿಗಮದ ಒಟ್ಟು ಆಸ್ತಿ 2018-19ರ ಹೊತ್ತಿಗೆ ಸಾರ್ವಕಾಲಿಕ ದಾಖಲೆಯ 31.1 ಲಕ್ಷ ಕೋಟಿ ರುಪಾಯಿ ತಲುಪಿತ್ತು. ಅದೇ ಸಾಲಿನಲ್ಲಿ ಈಕ್ವಿಟಿ ಹೂಡಿಕೆ ಮೂಲಕ 23,621 ಕೋಟಿ ರುಪಾಯಿ ಲಾಭ ಪಡೆದಿತ್ತು. ಅಂದ ಹಾಗೆ ಸರ್ಕಾರದಿಂದ ಇಬ್ಬರು ಐಪಿಒ ಪೂರ್ವ ಸಲಹೆಗಾರರ ಭೇಟಿಗೆ ಅವಕಾಶ ಕೇಳಲಾಗಿದೆ. ಅದರಲ್ಲಿ ಒಂದು ವ್ಯವಹಾರ ಕನಿಷ್ಠ 5 ಸಾವಿರ ಕೋಟಿ ಗಾತ್ರದ ಐಪಿಒ ಅಥವಾ ಬಂಡವಾಳ ಮಾರುಕಟ್ಟೆಯ ಕನಿಷ್ಠ 15 ಸಾವಿರ ಕೋಟಿಯ ವ್ಯವಹಾರ ಯಶಸ್ಚಿಯಾಗಿ ಪೂರೈಸಿರಬೇಕು.

ಷೇರು ಮಾರಾಟದ ಮೂಲಕ 90 ಸಾವಿರ ಕೋಟಿ ಸಂಗ್ರಹ
ಸರ್ಕಾರವು ಎಲ್ ಐಸಿ ಹಾಗೂ ಐಡಿಬಿಐನಲ್ಲಿನ ಷೇರು ಮಾರಾಟದ ಮೂಲಕ 90 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಇತರ ಬಂಡವಾಳ ಹಿಂತೆಗೆತದ ಮೂಲಕ 1.2 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇದೆ. ಐಡಿಬಿಐ ಬ್ಯಾಂಕ್ ನಲ್ಲಿ ಎಲ್ ಐಸಿ ಕೂಡ ಪ್ರಮುಖ ಷೇರುದಾರ ಆಗಿದೆ. ಮೂರು ವರ್ಷಗಳ ಹಿಂದೆ ಸರ್ಕಾರವು ಜನರಲ್ ಇನ್ಷೂರೆನ್ಸ್ ಕಾರ್ಪೊರೇಷನ್ ಹಾಗೂ ನ್ಯೂ ಇಂಡಿಯಾ ಅಶ್ಯೂರೆನ್ಸ್ ಷೇರುಗಳನ್ನು ಐಪಿಒ ಮೂಲಕ ಲಿಸ್ಟ್ ಮಾಡಿದೆ.

ಅಂತಿಮ ಹಂತದ ಅಗತ್ಯ ಅನುಮತಿ ಪಡೆಯಲಾಗುತ್ತಿದೆ
ಎಲ್ ಐಸಿಯಲ್ಲಿನ ಈಕ್ವಿಟಿ ಮಾರಾಟಕ್ಕೆ ಈವರೆಗೆ ಸರ್ಕಾರಕ್ಕೆ ಯಾವ ಪ್ರತಿರೋಧ ವ್ಯಕ್ತವಾಗಿಲ್ಲ. ಆದರೆ ಈ ಷೇರು ಮಾರಾಟದ ಮೇಲೆ ಮಾರುಕಟ್ಟೆ ಸನ್ನಿವೇಶದ ಪ್ರಭಾವ ಇರುತ್ತದೆ. ಹಣಕಾಸು ಸಚಿವಾಲಯ ಇನ್ನೇನು ಅಂತಿಮ ಹಂತದ ಅಗತ್ಯ ಅನುಮತಿಗಳನ್ನು ಪಡೆಯುತ್ತಿದೆ. ಈ ಷೇರು ಮಾರಾಟವು ಎಲ್ ಐಸಿಯ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ತರುತ್ತದೆ ಎಂಬ ನಿರೀಕ್ಷೆ ಇದೆ.

ಷೇರು ಖರೀದಿದಾರರಿಗೆ ಲಾಭ
ಈಗ ಷೇರು ಮಾರಾಟ ಮಾಡುವುದರಿಂದ ಹಣಕಾಸು ಲೆಕ್ಕಾಚಾರ ಹಾಗೂ ಮಾರುಕಟ್ಟೆ ಸಂಬಂಧಿ ಬೆಳವಣಿಗೆಗಳನ್ನು ಸ್ಟಾಕ್ ಎಕ್ಸ್ ಚೇಂಜ್ ಗೆ ತಿಳಿಸಬೇಕಾಗುತ್ತದೆ. ಷೇರು ಖರೀದಿದಾರರಿಗೆ ಲಾಭವಾಗಲಿದೆ. ಎಲ್ ಐಸಿಯಿಂದ ಮಾಡಿರುವ ವಿವಿಧ ಈಕ್ವಿಟಿ ಹಾಗೂ ಬಾಂಡ್ ಹೂಡಿಕೆ ಬಗ್ಗೆ ಸೂಕ್ತ ನಿಗಾ ವಹಿಸಲಾಗುತ್ತದೆ. ಇದರಿಂದ ಅನುಕೂಲ ಆಗಲಿದೆ.