ಸೆಪ್ಟೆಂಬರ್ 1ರಿಂದ ವಿಮಾನ ಪ್ರಯಾಣ ದರ ಏರಿಕೆ ಸಾಧ್ಯತೆ
ನಾಗರಿಕ ವಿಮಾನ ಯಾನ ಸಚಿವಾಲಯವು ಸೆಪ್ಟೆಂಬರ್ 1ನೇ ತಾರೀಕಿನಿಂದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ (ASF) ಹೆಚ್ಚಿಸಲು ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ವಿಮಾನ ಪ್ರಯಾಣ ದರ ಹೆಚ್ಚಳ ಆಗಲಿದೆ.
ಸದ್ಯಕ್ಕೆ ದೇಶೀಯ ಪ್ರಯಾಣಿಕರಿಗೆ ಇರುವ ಎಎಸ್ ಎಫ್ 150 ರುಪಾಯಿ ಇದ್ದು, ಮುಂದಿನ ತಿಂಗಳಿಂದ 160 ರುಪಾಯಿಗೆ ಏರಿಕೆ ಆಗಲಿದೆ. ಇನ್ನು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ $ 4.85ರಷ್ಟಿರುವ ಎಎಸ್ ಎಫ್ $ 5.2ಕ್ಕೆ ಹೆಚ್ಚಳ ಆಗಲಿದೆ. ಇದು ಸೆಪ್ಟೆಂಬರ್ 1ರಿಂದ ಅನ್ವಯ ಆಗಲಿದೆ ಎನ್ನಲಾಗಿದೆ.
ಭಾರತೀಯ ಪ್ರಯಾಣಿಕರು ಯುಕೆ, ಯುಎಸ್, ಕೆನಡಾ, ಯುಎಇಗೆ ತೆರಳಲು ಅವಕಾಶ
ಪ್ರಯಾಣಿಕರು ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಎಎಸ್ ಎಫ್ ಸಂಗ್ರಹಿಸುವ ವಿಮಾನ ಯಾನ ಸಂಸ್ಥೆಗಳು, ಅದನ್ನು ಸರ್ಕಾರಕ್ಕೆ ನೀಡುತ್ತವೆ. ಈ ಮೂಲಕ ಸಂಗ್ರಹ ಆಗುವ ಹಣವನ್ನು ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆ ನಿರ್ವಹಿಸುವುದಕ್ಕೆ ಬಳಸಲಾಗುತ್ತದೆ. ಕಳೆದ ವರ್ಷ ಕೂಡ ಸಚಿವಾಲಯದಿಂದ ASF ಹೆಚ್ಚಿಸಲಾಗಿತ್ತು.

ಭಾರತ ಹಾಗೂ ಇತರ ದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ವಿಮಾನಯಾನ ವಲಯದ ಮೇಲೆ ಪರಿಣಾಮ ಆಗಿದೆ. ಭಾರತದಲ್ಲಿನ ಎಲ್ಲ ವಿಮಾನ ಯಾನಗಳು ಸಂಬಳ ಕಡಿತ, ವೇತನ ರಹಿತ ರಜೆ, ಉದ್ಯೋಗ ಕಡಿತ ಮತ್ತಿತರ ಕ್ರಮಗಳ ಮೂಲಕ ವೆಚ್ಚ ಕಡಿತಕ್ಕೆ ಮುಂದಾಗಿವೆ.
ಎರಡು ತಿಂಗಳ ನಂತರ ಮೇ 25ರಿಂದ ದೇಶೀಯ ವಿಮಾನ ಯಾನ ಮತ್ತೆ ಆರಂಭವಾಗಿದೆ. ಆದರೆ ಅಲ್ಲಿಂದ ಆಚೆಗೆ ಪ್ರಯಾಣಿಕರ ಪ್ರಮಾಣ 50ರಿಂದ 60 ಪರ್ಸೆಂಟ್ ಮಾತ್ರ ಇದೆ. ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಅಮಾನತು ಮಾಡಲಾಗಿದೆ. ಆದರೆ, ಡಿಜಿಸಿಎ ಅನುಮತಿಯೊಂದಿಗೆ ವಿಶೇಷ ವಿಮಾನಗಳ ಹಾರಾಟ ನಡೆಯುತ್ತಿದೆ.