RBI MPC Meet : ಎಂಪಿಸಿ ಸಭೆ: ಆರ್‌ಬಿಐ ಮತ್ತೆ ಬಡ್ಡಿದರ ಹೆಚ್ಚಿಸುವ ಸಾಧ್ಯತೆ, ಎಷ್ಟು ಏರಿಕೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂದಿನಿಂದ (ಡಿಸೆಂಬರ್ 5, 2022) ಡಿಸೆಂಬರ್ 7, 2022ರವರೆಗೆ ಮಾನೆಟರಿ ಪಾಲಿಸಿ ಮೀಟಿಂಗ್ (ಎಂಪಿಸಿ) ನಡೆಯುತ್ತಿದೆ. ಈ ಸಭೆಯ ಕೊನೆಯ ದಿನವಾದ ಡಿಸೆಂಬರ್ 7ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆಯ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ. ಇದು ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡಲಿದೆ.
ಈ ಬಾರಿ ಕೊಂಚ ಕಡಿಮೆ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆಯಿದೆ. ಅಂದರೆ ಈ ಹಿಂದೆ ಆರ್‌ಬಿಐ ಸುಮಾರು 50 ಮೂಲಾಂಕ ಬಡ್ಡಿದರ ಏರಿಕೆ ಮಾಡಿದೆ. ಆದರೆ ಈ ಬಾರಿ ಹಣದುಬ್ಬರ ಕೊಂಚ ಹತೋಟಿಗೆ ಬರುತ್ತಿರುವ ಕಾರಣದಿಂದಾಗಿ ಆರ್‌ಬಿಐ 25-35 ಮೂಲಾಂಕ ಬಡ್ಡಿದರ ಹೆಚ್ಚಿಸುವ ನಿರೀಕ್ಷೆಯಿದೆ.
ಆರ್‌ಬಿಐ ಈ ಹಿಂದೆ ಸುಮಾರು ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಮೇ ತಿಂಗಳಲ್ಲಿ ಮೊದಲ ಬಾರಿಗೆ ದರ ಏರಿಕೆ ಮಾಡಿದಾಗ 40 ಮೂಲಾಂಕ ಹೆಚ್ಚಳ ಮಾಡಿದೆ. ಇದಾದ ಬಳಿಕ ಸತತ ಮೂರು ಬಾರಿ 50 ಮೂಲಾಂಕ ಏರಿಕೆ ಮಾಡುತ್ತಾ ಬಂದಿದೆ. ಆದರೆ ತಜ್ಞರ ಪ್ರಕಾರ ಈ ಎಂಪಿಸಿ ಸಭೆಯ ಬಳಿಕ 25-35 ಮೂಲಾಂಕ ಬಡ್ಡಿದರ ಹೆಚ್ಚಾಗುವ ನಿರೀಕ್ಷೆಯಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಎಂಪಿಸಿ ಸಭೆಯಲ್ಲಿ ನಿರ್ಧಾರ
ಮೇ ತಿಂಗಳಿನಲ್ಲಿ 40 ಬಿಪಿಎಸ್ ಹಾಗೂ ಜೂನ್, ಆಗಸ್ಟ್, ಸೆಪ್ಟೆಂಬರ್‌ನಲ್ಲಿ 50 ಬಿಪಿಎಸ್ ಹೆಚ್ಚಿಸಿದೆ. ಮೇ ತಿಂಗಳಿನಿಂದ ಆರ್‌ಬಿಐ ಒಟ್ಟಾಗಿ ಶೇಕಡ 1.90ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಅಂದರೆ 190 ಮೂಲಾಂಕ ಅಧಿಕ ಮಾಡಿದೆ. ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯಲ್ಲಿನ ಆರು ಜನ ಸದಸ್ಯರು ಕೂಡಾ ಒಪ್ಪಿಗೆ ಸೂಚಿಸಿದ ಬಳಿಕ ರೆಪೋ ದರ ಏರಿಕೆ ಘೋಷಣೆಯನ್ನು ಆರ್‌ಬಿಐ ಮಾಡಿದೆ. ಈ ಸಭೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಹಿಸಿದ್ದರು. ಇನ್ನು ಈಗಾಗಲೇ ಆರ್‌ಬಿಐ ವಾರ್ಷಿಕ ನಿಗದಿತ ಆರು ಸಭೆಯನ್ನು ಹೊರತುಪಡಿಸಿ ಅಧಿಕ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಚರ್ಚಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಈ ವರದಿಯಲ್ಲಿ ಹಣದುಬ್ಬರದ ನಿಯಂತ್ರಣಕ್ಕೆ ಸಂಬಂಧಿಸಿದ ಸಲಹೆ, ಸೂಚನೆಗಳು ಇರಲಿದೆ. ಇನ್ನು ಮುಂದಿನ ಸಭೆಯಲ್ಲಿ ಆರ್‌ಬಿಐ 30 ಬಿಪಿಎಸ್‌ನಷ್ಟು ರೆಪೋ ದರ ಹೆಚ್ಚಿಸಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಈ ಬಾರಿ ಎಷ್ಟು ಬಡ್ಡಿದರ ಏರಿಕೆ ನಿರೀಕ್ಷೆ
ಯುಎಸ್ ಫೆಡರಲ್ ರಿಸರ್ವ್ ಈ ಬಾರಿ 50 ಮೂಲಾಂಕಕ್ಕಿಂತ ಕಡಿಮೆ ಫೆಡ್ ದರವನ್ನು ಏರಿಕೆ ಮಾಡುವ ಸಾಧ್ಯತೆಯಿದೆ. ಹೀಗೆಯೇ ಆರ್‌ಬಿಐ ಕೂಡಾ ಈ ಬಾರಿ ಕಡಿಮೆ ಬಡ್ಡಿದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಇನ್ನು ಯುಎಸ್ ಫೆಡರಲ್ ಈಗಾಗಲೇ ಸುಮಾರು ನಾಲ್ಕು ಬಾರಿ ಫೆಡ್ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಯುಎಸ್ ಫೆಡರಲ್ 75 ಬಿಪಿಎಸ್ ದರ ಏರಿಕೆ ಮಾಡಿದೆ. ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬರುತ್ತಿರುವ ಕಾರಣದಿಂದಾಗಿ ಮುಂದಿನ ಬಾರಿ ಕೊಂಚ ಕಡಿಮೆ ದರ ಏರಿಕೆ ಸಾಧ್ಯತೆಯಿದೆ. ದೇಶದ ಕೇಂದ್ರ ಬ್ಯಾಂಕ್ ಸುಮಾರು 25ರಿಂದ 35 ಮೂಲಾಂಕ ದರ ಏರಿಕೆ ಮಾಡುವ ನಿರೀಕ್ಷೆಯಿದೆ.

ತಜ್ಞರುಗಳು ಹೇಳುವುದು ಏನು?
"ಈ ಬಾರಿಯೂ ಎಂಪಿಸಿ ದರ ಏರಿಕೆಯನ್ನು ಮಾಡಲಿದೆ. ಆದರೆ ಕೊಂಚ ಕಡಿಮೆ ದರ ಏರಿಸುವ ಸಾಧ್ಯತೆ ಇದೆ. 25-35 ಮೂಲಾಂಕ ರೆಪೋ ದರ ಹೆಚ್ಚಳ ಮಾಡಬಹುದು. ಈ ಹಣಕಾಸು ವರ್ಷದಲ್ಲಿ ರೆಪೋ ದರ ಶೇಕಡ 6.5ರ ಮಟ್ಟಿಗೆ ಏರಿಕೆಯಾಗಬಹುದು. ಅಂದರೆ ಮುಂದಿನ ವರ್ಷದ ಫೆಬ್ರವರಿಯಲ್ಲಿಯೂ ಆರ್‌ಬಿಐ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಫೆಡ್ ದರದಲ್ಲೂ ಏರಿಕೆಯಾಗುತ್ತಿರುವಾಗ ಭಾರತದಲ್ಲಿ ರೆಪೋ ದರ ಏರಿಕೆಯಲ್ಲಿ ಯಾವ ಆಶ್ಚರ್ಯವೂ ಇಲ್ಲ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ಹೇಳಿದ್ದಾರೆ.