ಕರ್ನಾಟಕದಲ್ಲಿ 24X7X365 ಮಳಿಗೆ, ವಾಣಿಜ್ಯ ಸಂಸ್ಥೆ ತೆರೆಯಲು ಒಪ್ಪಿಗೆ; ಷರತ್ತುಗಳು ಅನ್ವಯ
ಯಾವ ಮಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಹತ್ತು ಮತ್ತು ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂಥವು ಮುಂದಿನ ಮೂರು ವರ್ಷಗಳ ಅವಧಿಗೆ ಕೆಲ ಷರತ್ತುಗಳೊಂದಿಗೆ 24X7 ಲೆಕ್ಕಾಚಾರದಂತೆ, ಎಲ್ಲ ದಿನಗಳಲ್ಲೂ ತೆರೆದಿರಬಹುದು ಎಂದು ಕರ್ನಾಟಕ ಸರ್ಕಾರ ಶನಿವಾರ (ಜನವರಿ 2, 2021) ಘೋಷಣೆ ಮಾಡಿದೆ.
ಕೋವಿಡ್ 19 ಬಿಕ್ಕಟ್ಟಿಗೆ ಸಿಲುಕಿರುವ ಕಾಲಘಟ್ಟದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿ ಆಗಲಿ ಎಂಬ ಕಾರಣಕ್ಕೆ ಈ ನಡೆಗೆ ಮುಂದಾಗಿದೆ ರಾಜ್ಯ ಸರ್ಕಾರ. ಪ್ರತಿ ಸಿಬ್ಬಂದಿಗೂ ವಾರದಲ್ಲಿ ಒಂದು ದಿನ ಪಾಳಿ ಮೇಲೆ ರಜಾ ಸಿಗಬೇಕು ಎಂಬ ಕಾರಣಕ್ಕೆ ಉದ್ಯೋಗದಾತರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
ಚಿನ್ನ 65 ಸಾವಿರ ರು., ಬೆಳ್ಳಿ 90 ಸಾವಿರ ರು. ತಲುಪುವ ನಿರೀಕ್ಷೆ
ಮಳಿಗೆ ಅಥವಾ ವಾಣಿಜ್ಯ ಸಂಸ್ಥೆಯ ನಿರ್ದಿಷ್ಟ ಸ್ಥಳದಲ್ಲಿ ಎಲ್ಲ ಉದ್ಯೋಗಿಗಳ ಹೆಸರನ್ನು ಉದ್ಯೋಗದಾತರು ಪ್ರದರ್ಶಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯಾವುದೇ ಸಿಬ್ಬಂದಿಯಿಂದ ದಿನದಲ್ಲಿ ಎಂಟು ಗಂಟೆ ಮತ್ತು ವಾರದಲ್ಲಿ 48 ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡಿಸುವಂತಿಲ್ಲ. ಹೆಚ್ಚುವರಿ ಅವಧಿಯೂ ಒಳಗೊಂಡಂತೆ ಕೆಲಸದ ಅವಧಿಯು ಯಾವುದೇ ದಿನದಲ್ಲಿ 10 ಗಂಟೆ ದಾಟುವಂತಿಲ್ಲ ಮತ್ತು ನಿರಂತರ ಮೂರು ತಿಂಗಳ ಅವಧಿಯಲ್ಲಿ 50 ಗಂಟೆ ದಾಟುವಂತಿಲ್ಲ.
ಒಂದು ವೇಳೆ ಸಿಬ್ಬಂದಿಯು ಯಾವುದೇ ರಜಾ ದಿನಗಳಲ್ಲಿ ಅಥವಾ ಮಾಮೂಲಿ ಕೆಲಸದ ಅವಧಿಯ ಆಚೆಗೂ ಯಾವುದೇ ಓವರ್ ಟೈಮ್ ಪೂರ್ವಾಗತ್ಯ ಇಲ್ಲದೆ ಕೆಲಸ ಮಾಡುತ್ತಿದ್ದಲ್ಲಿ ಉದ್ಯೋಗದಾತರು ಅಥವಾ ಮ್ಯಾನೇಜರ್ ವಿರುದ್ಧ ಕ್ರಮ ಜರುಗಿಸಲಾಗಿಸಲಾಗುವುದು ಎಂದು ತಿಳಿಸಲಾಗಿದೆ.
ಪಗಾರ ಸೇರಿ ಓವರ್ ಟೈಮ್ ಸಂಬಳವನ್ನು ವೇತನ ಪಾವತಿ ಕಾಯ್ದೆ ಅಡಿಯಲ್ಲಿ ತಿಳಿಸಿರುವಂತೆಯೇ ಉದ್ಯೋಗಿಗಳ ಉಳಿತಾಯ ಖಾತೆಗೆ ಜಮಾ ಮಾಡಬೇಕು ಎನ್ನಲಾಗಿದೆ.
ಇನ್ನು ಮಹಿಳಾ ಉದ್ಯೋಗಿಗಳು ರಾತ್ರಿ 8 ಗಂಟೆ ನಂತರ ಸಾಮಾನ್ಯ ಸನ್ನಿವೇಶಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವಂತಿಲ್ಲ. ಒಂದು ವೇಳೆ ಉದ್ಯೋಗದಾತರು ಮಹಿಳಾ ಉದ್ಯೋಗಿಯ ಲಿಖಿತ ಅನುಮತಿ ಪಡೆದು, ರಾತ್ರಿ 8ರಿಂದ ಬೆಳಗ್ಗೆ 6ರ ತನಕ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬಹುದು. ಆದರೆ ಉದ್ಯೋಗಿಯ ಗೌರವ, ಮರ್ಯಾದೆ ಹಾಗೂ ಸುರಕ್ಷತೆಗೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಿ, ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ದೂರುಗಳನ್ನು ನಿರ್ವಹಿಸುವುದಕ್ಕಾಗಿ ಆ ಸಮಿತಿ ಇರಬೇಕು ಎನ್ನಲಾಗಿದೆ.
ಇದರ ಜತೆಗೆ ಸಿಬ್ಬಂದಿಗೆ ವಿಶ್ರಾಂತಿ ಕೋಣೆ ಸೇರಿದಂತೆ, ಲಾಕರ್ ಮತ್ತಿತರ ಮೂಲಸೌಕರ್ಯ ಮಾಡಿಕೊಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.