For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮುತ್ತಿನಂಥ 10 ಮಾತು

By Siddu
|

ಹಣ ಸಂಪಾದನೆಯ ಅಭಿಲಾಷೆಯ ಕಾರಣಕ್ಕೆ ಹೂಡಿಕೆದಾರರು ತಮ್ಮ ಚಿತ್ತವನ್ನು ಷೇರು ಮಾರುಕಟ್ಟೆಯತ್ತ ಹರಿಸಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಪ್ರಮುಖ ಲಕ್ಷಣವಾಗಿದೆ. ಹಾಗೆಂದ ಮಾತ್ರಕ್ಕೆ ಈಕ್ವಿಟಿಗಳಿಂದ ಹಣ ಗಳಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಪಾರ ತಾಳ್ಮೆ ಮತ್ತು ಶಿಸ್ತಿನ ಜೊತೆಗೆ ಮಾರುಕಟ್ಟೆಯ ಕುರಿತಾದ ಆಮೂಲಾಗ್ರ ತಿಳುವಳಿಕೆ ಮತ್ತು ಸಂಶೋಧನೆಗಳ ನೆರವಿನಿಂದ ಮಾತ್ರವೇ ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವುದು ಸುಲಭವಾಗುತ್ತದೆ.

ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?

ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಸಂಪಾದಿಸಲು ಇದಮಿತ್ಥಂ ಎಂಬ ಸೂತ್ರವನ್ನು ಇಲ್ಲಿಯವರೆಗೆ ಯಾರೂ ಅನ್ವೇಷಿಸಿಲ್ಲ ಎಂಬುದು ನಿಜವೇ ಆದರೂ ಕೆಲ ರೂಪಿತ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ಹೂಡಿಕೆಗೆ ಉತ್ತಮ ರಿಟರ್ನ್ಸ್ ಪಡೆಯುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು. ಆ ನಿಯಮಗಳನ್ನು ಅರಿಯುವ ಮತ್ತು ಪರಿಪಾಲಿಸಲು ಪ್ರಯತ್ನಿಸುವ ಕಡೆಗೆ ಒಂದು ಹೆಜ್ಜೆಯನ್ನು ಇರಿಸುವ ಭಾಗವಾಗಿ ಅವುಗಳನ್ನು ಒಮ್ಮೆ ಅರ್ಥ ಮಾಡಿಕೊಳ್ಳುವ ಯತ್ನ ನಡೆಸೋಣ..

ಬೇರೆಯವರ ಪ್ರಭಾವದಿಂದ ದೂರ ಉಳಿಯಿರಿ
 

ಬೇರೆಯವರ ಪ್ರಭಾವದಿಂದ ದೂರ ಉಳಿಯಿರಿ

ಷೇರು ಮಾರುಕಟ್ಟೆಯ ವ್ಯವಹಾರದ ಕುರಿತಾದ ತಿಳುವಳಿಕೆ ಜನಸಾಮಾನ್ಯರಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಕೂಡ ಈ ಕುರಿತಾದ ಪ್ರಾಥಮಿಕ ಅರಿವನ್ನು ಗಳಿಸಿಕೊಳ್ಳುವ ಅವಕಾಶವಿಲ್ಲ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಬಯಸುವ ಸಾಮಾನ್ಯ ಖರೀದಿದಾರ ಸಹಜವಾಗಿ ತನ್ನ ಸಹೋದ್ಯೋಗಿಗಳ, ಅಥವಾ ನೆರೆಹೊರೆಯವರ, ಸ್ನೇಹಿತರ, ಬಂಧುಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಹಾಗಾಗಿಯೆ ತಮ್ಮ ಸುತ್ತಮುತ್ತಲಿನವರು ಯಾವುದಾದರೂ ನಿರ್ದಿಷ್ಟ ಸ್ಟಾಕ್ ಮೇಲೆ ಹಣ ಹೂಡಿಕೆ ಮಾಡಿದ್ದರೆ ಅವರೂ ಸಹ ಅದರ ಮೇಲೆ ಭರವಸೆ ಇರಿಸಿ ತಮ್ಮ ದುಡಿಮೆಯ ಹಣವನ್ನು ತೊಡಗಿಸುವುದು ಕಂಡುಬರುತ್ತದೆ. ಇದು ದೀರ್ಘಾವಧಿಯಲ್ಲಿ ತಿರುಗುಬಾಣವಾಗುವ ಸಂಭವವೇ ಅಧಿಕ

ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

ಮಾಹಿತಿ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಿ

ಮಾಹಿತಿ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಿ

ಷೇರುಗಳಲ್ಲಿ ಹಣ ತೊಡಗಿಸುವ ಮುನ್ನ ಸೂಕ್ತ ಬಗೆಯ ಅಧ್ಯಯನ ಮತ್ತು ಸಂಶೋಧನೆ ನಡೆಸುವುದು ಅತ್ಯಗತ್ಯ. ವಿಪರ್ಯಾಸವೆಂದರೆ ಈ ನಿಟ್ಟಿನಲ್ಲಿ ಯಾರೂ ಗಂಭೀರವಾಗಿ ಪ್ರಯತ್ನ ನಡೆಸುವುದಿಲ್ಲ. ಸಂಸ್ಥೆಯ ಕಾರ್ಯಚಟುವಟಿಕೆಯ ಕ್ಷೇತ್ರ ಅಥವಾ ಆ ಸಂಸ್ಥೆಗಿರುವ ಹೆಸರನ್ನು ಆಧರಿಸಿ ಅದರ ಮೇಲೆ ಹಣ ತೊಡಗಿಸುತ್ತಾರೆ. ಇದು ಯಾವ ಕಾರಣದಿಂದಲೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಸರಿಯಾದ ವಿಧಾನ ಅಲ್ಲವೇ ಅಲ್ಲ.

ನಿಮ್ಮ ಇಷ್ಟದ/ತಿಳುವಳಿಕೆಯ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ

ನಿಮ್ಮ ಇಷ್ಟದ/ತಿಳುವಳಿಕೆಯ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ

ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವ ಬದಲಿಗೆ ಒಂದು ವ್ಯವಹಾರ ಅಥವಾ ವಹಿವಾಹಿಟನಲ್ಲಿ ತೊಡಗಿಸುವುದು ಸಾಧ್ಯವಿದೆಯಾ ಎನ್ನುವುದನ್ನು ಆಲೋಚಿಸಿ. ನಿಮ್ಮ ತಿಳುವಳಿಕೆಯ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಇದನ್ನು ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಯಾವುದೇ ಸಂಸ್ಥೆ ಅಥವಾ ಕಂಪೆನಿಯಲ್ಲಿ ಹಣ ತೊಡಗಿಸುವ ಮುನ್ನ ಆ ಸಂಸ್ಥೆಯ ಪೂರ್ವ ಇತಿಹಾಸ ಮತ್ತು ಆ ಸಂಸ್ಥೆಯ ವ್ಯವಹಾರದ ಸ್ವರೂಪದ ಬಗ್ಗೆ ಪೂರ್ಣ ತಿಳುವಳಿಕೆ ಹೊಂದಬೇಕಾದದ್ದು ಅತೀ ಅವಶ್ಯಕ.

ಪದೇ ಪದೇ ಷೇರುಗಳ ವಿಕ್ರಯ ಮತ್ತು ಮರು ಖರೀದಿಯ ಪ್ರವೃತ್ತಿ ಕೈಬಿಡಿ
 

ಪದೇ ಪದೇ ಷೇರುಗಳ ವಿಕ್ರಯ ಮತ್ತು ಮರು ಖರೀದಿಯ ಪ್ರವೃತ್ತಿ ಕೈಬಿಡಿ

ಕೆಲವರು ದೈನಂದಿನ ಲೆಕ್ಕದಲ್ಲಿ ಮತ್ತು ಕೆಲವೊಮ್ಮೆ ಪ್ರತಿಗಂಟೆಗಳಿಗೆ ಎಂಬಂತೆ ಮಾರುಕಟ್ಟೆಯಲ್ಲಿನ ಬೆಳವಣಿಗೆಯನ್ನು ಆಧರಿಸಿ ನಮ್ಮ ಷೇರುಗಳ ಮಾರಾಟ ಮತ್ತು ಮರುಖರೀದಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದು ಶ್ರಮದಾಯಕ ಮಾತ್ರವಲ್ಲದೆ, ಆರೋಗ್ಯದ ಮೇಲೆ ತೀವ್ರತರದ ದುಷ್ಪರಿಣಾಮಗಳನ್ನು ಉಂಟು ಮಾಡಬಲ್ಲದು. ಈ ಬಗೆಯ ಚಂಚಲ ಸ್ವಭಾವದಿಂದ ಹೊರಬರಬೇಕು.

ಮಾರುಕಟ್ಟೆಯ ಆಗುಹೋಗುಗಳ ಕುರಿತು ಅತ್ಯಂತ ನಿಖರ ಮಾಹಿತಿಗೊಳನ್ನು ತಿಳಿಯುವ ಸುಸಜ್ಜಿತ ವ್ಯವಸ್ಥೆ ಹೊಂದಿರುವ ವಾರೆನ್ ಬಫೆಟ್ ರಂತಹ ದೈತ್ಯ ಉದ್ಯಮಿಯೂ ಕೂಡ ಈ ಬಗೆಯನ್ನು ಅನುಸರಿಸುವುದಿಲ್ಲ,

ಇದು ಆರ್ಥಿಕ ಸಲಹೆಗಾರರ ಕಿವಿಮಾತೂ ಹೌದು. ವಸ್ತುಸ್ಥಿತಿ ಹೀಗಿದ್ದರೂ ಬಹುತೇಕ ಹೂಡಿಕೆದಾರರು ಅದಕ್ಕೆ ವ್ಯತಿರಿಕ್ತವಾದ ನಿರ್ಧಾರ ಕೈಗೊಂಡು ತಮ್ಮ ಪರಿಶ್ರಮದ ಹಣವನ್ನು ಕಳೆದುಕೊಳ್ಳುತ್ತಾರೆ.

ಮಾರುಕಟ್ಟೆಯ ಏರಿಳಿತಗಳು ಹಲವು ಬಾರಿ ಸ್ಥಳೀಯ ಮತ್ತು ಜಾಗತಿಕ ರಾಜಕೀಯ, ಆರ್ಥಿಕ, ಸಾಮಾಜಿಕ ಬೆಳವಣಿಗೆಗಳು ಹಾಗು ಸ್ಥಿತ್ಯಂತರಗಳ ಮೇಲೆ ಬೆಸೆದುಕೊಂಡಿರುತ್ತವೆ. ಈ ಎಲ್ಲವುಗಳನ್ನು ಅರಿತು ಅವುಗಳ ಆಧಾರದ ಮೇಲೆ ಅದು ಮಾರುಕಟ್ಟೆಯ ಮೇಲೆ ಮೂಡಿಸಬಹುದಾದ ಪರಿಣಾಮಗಳನ್ನು ಅಂದಾಜಿಸುವುದು ಸುಲಭಸಾಧ್ಯ ವಿಚಾರ ಖಂಡಿತ ಅಲ್ಲ

ಮಾರುಕಟ್ಟೆಯ ಏರುಪೇರುಗಳ ಟ್ರೆಂಡ್ ಅನ್ನು ಯಶಸ್ವಿಯಾಗಿ ಮತ್ತು ನಿರಂತರವಾಗಿ ಅರ್ಥ ಮಾಡಿಕೊಂಡಿರುವವರು ದೊರಕುವುದು ದುರ್ಲಭ. ಮಾರುಕಟ್ಟೆಯಲ್ಲಿ ತಳ ಮತ್ತು ಉತ್ತುಂಗ ಹಿಂದೆಯೂ ಇದ್ದವು ಮತ್ತು ಮುಂದೆಯೂ ಇರುತ್ತವೆ. ಸರ್ವಕಾಲದಲ್ಲೂ ಈ ರಹಸ್ಯವನ್ನು ಭೇದಿಸಬಲ್ಲೆವು ಎಂದು ಯಾರಾದರೂ ಭಾವಿಸಿದ್ದರೆ ಅದು ಭ್ರಮೆಯಷ್ಟೇ. ಇಂತಹ ಅವಾಸ್ತವಿಕ ನಂಬಿಕೆಯಿಂದ ಹಣ ಗಳಿಸಿರುವವರಿಗಿಂತ ಹಣ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು ಅನ್ನುವುದು ಬಜಾಜ್ ಕ್ಯಾಪಿಟಲ್ ನ ಗ್ರೂಪ್ ಸಿ.ಇ.ಓ ಮತ್ತು ನಿರ್ದೇಶಕರಾದ ಅನಿಲ್ ಚೊಪ್ರಾರವರ ಅನುಭವದ ವಿಶ್ಲೇಷಣೆಯ ನುಡಿಗಳು.

ಶಿಸ್ತುಬದ್ಧ ಹೂಡಿಕಾ ಕ್ರಮವನ್ನು ರೂಢಿಸಿಕೊಳ್ಳಿ

ಶಿಸ್ತುಬದ್ಧ ಹೂಡಿಕಾ ಕ್ರಮವನ್ನು ರೂಢಿಸಿಕೊಳ್ಳಿ

ಐತಿಹಾಸಿಕವಾಗಿ ನಾವು ಈ ಬಗೆಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದೀವಿ. ಷೇರು ಮಾರುಕಟ್ಟೆಯ ದೈತ್ಯ ಏರಿಳಿತಗಳ ದೆಸೆಯಿಂದ ಒಂದು ಬಗೆಯ ಭೀತಿಯುಕ್ತ ಸನ್ನಿವೇಶ ಹಲವು ಬಾರಿ ನಿರ್ಮಾಣಗೊಂಡು ಆರ್ಥಿಕ ವ್ಯವಸ್ಥೆಯ ತಲ್ಲಣಕ್ಕೆ ಕಾರಣ ಆಗಿರುವುದನ್ನು ಗಮನಿಸಿದ್ದೀವಿ. ಈ ಬಗೆಯ ಅನಿರೀಕ್ಷಿತ ಹಾಗೂ ಅನಪೇಕ್ಷಿತ ಏರಿಳಿತಗಳಿಂದಾಗಿ ಹೂಡಿಕೆದಾರರು ಅಪಾರ ನಷ್ಟಕ್ಕೀಡಾಗಿದ್ದಾರೆ.

ಈ ಬಗೆಯ ಅಪಾಯ ಷೇರು ಮಾರುಕಟ್ಟೆಯ ಪ್ರಮುಖ ಲಕ್ಷಣ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಇದರಲ್ಲಿ ಹಣ ತೊಡಗಿಸಿ ನಷ್ಟ ಹೊಂದುವ ಬದಲಿಗೆ ಅತ್ಯಂತ ಯೋಜನಾಬದ್ಧವಾಗಿ ಸೂಕ್ತ ಷೇರುಗಳಲ್ಲಿ ಹಣ ತೊಡಗಿಸಿ ಪಕ್ವ ಕಾಲದ ತನಕ ಅವುಗಳನ್ನು ತಮ್ಮಲ್ಲಿ ಉಳಿಸಿಕೊಂಡು ಬಂದ ಹೂಡಿಕೆದಾರರಿಗೆ ಈ ಷೇರುಗಳು ಅಪಾರ ಪ್ರಮಾಣದ ಲಾಭ ತಂದುಕೊಟ್ಟಿರುವುದು ಇಲ್ಲಿ ಉಲ್ಲೇಖಾರ್ಹ. ಹಾಗಾಗಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡುವುದರ ಜೊತೆಗೆ ಸಂಯಮದಿಂದ ಅವುಗಳನ್ನು ಜತನ ಮಾಡುವ ಮೂಲಕ ದೀರ್ಘಕಾಲೀನ ನೆಲೆಗಟ್ಟಿನಲ್ಲಿ ನಮ್ಮ ಹೂಡಿಕೆ ಸೂಕ್ತ ಬಗೆಯ ಲಾಭ ತಂದು ಕೊಡುತ್ತದೆ ಎನ್ನುವ ಥಿಯರಿ ನಿರ್ವಿವಾದ.

ಭಾವನಾತ್ಮಕ ಅಂಶಗಳು ನಿಮ್ಮ ನಿರ್ಧಾರವನ್ನು ನಿರ್ಣಯಿಸಲು ಅವಕಾಶ ಕೊಡಬೇಡಿ

ಭಾವನಾತ್ಮಕ ಅಂಶಗಳು ನಿಮ್ಮ ನಿರ್ಧಾರವನ್ನು ನಿರ್ಣಯಿಸಲು ಅವಕಾಶ ಕೊಡಬೇಡಿ

ತಮ್ಮ ಭಾವನೆಗಳನ್ನು ನಿಯಂತ್ರಿಸಲು ಅಶಕ್ಯರಾಗಿ ಆ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುವವರ ಹೇರಳ ಉದಾಹರಣೆಗಳು ನಮಗೆ ದೊರಕುತ್ತವೆ. ಗೂಳಿ ಓಟದ ಈ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಮಾಡುವ ಚಪಲವನ್ನು ನಿಯಂತ್ರಿಸುವುದು ಸುಲಭ ಸಾಧ್ಯವಲ್ಲ. ಅತಿ ಕಡಿಮೆ ಅವಧಿಯಲ್ಲಿ ಯಥೇಚ್ಛ ರಿಟರ್ನ್ಸ್ ದೊರಕಿದ ಪ್ರಸಂಗಗಳನ್ನು ಹೂಡಿಕೆದಾರರು ವಿವಿಧ ಮೂಲಗಳಿಂದ ತಿಳಿದುಕೊಂಡಾಗ ಹಣದ ಲೋಭ ಅವರನ್ನು ಆವರಿಸಿಕೊಳ್ಳುತ್ತದೆ. ಈ ಊಹಾಪೋಹಗಳ ಸತ್ಯಾಸತ್ಯತೆಯನ್ನು ಅರಿಯಲು ಯತ್ನಿಸದೇ ಜನಸಾಮಾನ್ಯರು ಅಪರಿಚಿತ ಸಂಸ್ಥೆಗಳ ಷೇರುಗಳನ್ನು ಖರೀದಿಸಲು ಮುನ್ನುಗ್ಗುತ್ತಾರೆ. ಮುಂದೆ ಎರಗಬಹುದಾದ ಸಂಭಾವ್ಯ ಅಪಾಯವನ್ನು ಪರಿಗಣಿಸದೆ ಅವರು ತಮ್ಮನ್ನು ಇಂಥದ್ದೊಂದು ರಿಸ್ಕ್ ಗೆ ಒಡ್ಡಿಕೊಳ್ಳುತ್ತಾರೆ.

ಸಂಪತ್ತಿನ ಸೃಜನೆಯ ಬದಲಿಗೆ, ಈ ಹೂಡಿಕೆದಾರರು ಮಾರುಕಟ್ಟೆಯ ಪರಿಸ್ಥಿತಿ ಧನಾತ್ಮಕ ಸ್ವರೂಪ ಪಡೆದಾಗ ತಮ್ಮ ಕೈ ಸುಟ್ಟುಕೊಳ್ಳುತ್ತಾರೆ. ಷೇರು ಮಾರುಕಟ್ಟೆಯ ಸೂಚ್ಯಂಕ ತಳಮುಟ್ಟಿದಾಗ ಹೂಡಿಕೆದಾರರು ಗಾಭರಿಗೆ ಒಳಗಾಗಿ ತಮ್ಮ ಪಾಲಿನ ಷೇರುಗಳನ್ನು ಕನಿಷ್ಟ ದರಕ್ಕೆ ಮಾರುತ್ತಾರೆ. ಹೀಗಾಗಿ ಭಯ ಮತ್ತು ಲೋಭಗಳು ಹೂಡಿಕೆದಾರರ ಅತಿ ದೊಡ್ಡ ಶತ್ರುಗಳು ಎಂದೇ ಪರಿಗಣಿಸಲ್ಪಡುತ್ತವೆ ಹಾಗಾಗಿ ಹೂಡಿಕೆದಾರರು ಈ ಎರಡು ಅಂಶಗಳಿಂದ ವಿಮುಕ್ತರಾಗಿ ಅವುಗಳ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರ ತಳೆಯಬೇಕು.

ವೈವಿಧ್ಯಮಯ ಬಂಡವಾಳ ಸೃಷ್ಟಿಸಿ

ವೈವಿಧ್ಯಮಯ ಬಂಡವಾಳ ಸೃಷ್ಟಿಸಿ

ನಮ್ಮ ಸಂಪೂರ್ಣ ಹಣವನ್ನು ಒಂದು ಸಂಸ್ಥೆಯ ಮೇಲೆ ಹೂಡುವುದರ ಬದಲಿಗೆ ವಿವಿಧ ಬಗೆಯ ಇನ್ಸ್ಟ್ರುಮೆಂಟ್ ಗಳ ಮೇಲೆ ನಮ್ಮ ಹೂಡಿಕೆಯನ್ನು ಹರಡುವುದು ಕ್ರಮ ಅತ್ಯುತ್ತಮವಾದದ್ದು. ಇದು ಲಾಭ ಪಡೆಯುವ ಮತ್ತು ಮಾರುಕಟ್ಟೆಯ ಅಪಾಯದ ತೀವ್ರತೆಯನ್ನು ತಗ್ಗಿಸುವ ಸರಳ ಉಪಾಯ. ರಿಸ್ಕ್ ನಿಭಾಯಿಸಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಆಧರಿಸಿ ಈ ವೈವಿಧ್ಯತೆಯ ಮಟ್ಟವನ್ನು ನಿರ್ಧರಿಸಬಹುದು.

ನಿರೀಕ್ಷೆಗಳು ವಾಸ್ತವ ಅಂಶಗಳನ್ನು ಆಧರಿಸಿರಲಿ

ನಿರೀಕ್ಷೆಗಳು ವಾಸ್ತವ ಅಂಶಗಳನ್ನು ಆಧರಿಸಿರಲಿ

ತಮ್ಮ ಹೂಡಿಕೆಗೆ ಅತ್ಯುತ್ತಮ ರಿಟರ್ನ್ಸ್ ದೊರಕಬೇಕು ಎಂಬ ಹೂಡಿಕೆದಾರರ ಹಂಬಲ ನ್ಯಾಯೋಚಿತವಾದುದು. ಅದರಲ್ಲಿ ಯಾರೂ ತಪ್ಪು ಹುಡುಕಲಾರರು. ಆದರೆ ಈ ಹಂಬಲಕ್ಕೆ ವಾಸ್ತವಿಕ ನೆಲೆಗಟ್ಟು ಇಲ್ಲದೇ ಹೋದರೆ ಅದರಿಂದ ತೊಂದರೆಗೆ ಒಳಗಾಗುವ ಸ್ಥಿತಿ ಬಂದೆರಗುವುದರಿಂದ ತಪ್ಪಿಸಿಕೊಳ್ಳಲಾಗದು. ಉದಾಹರಣೆಗೆ ಸಾಕಷ್ಟು ಷೇರುಗಳು ಇತ್ತೀಚಿನ ವರ್ಷಗಳ ಗೂಳಿಓಟದ ಸಮಯದಲ್ಲಿ ಶೇ. ೫೦ ರಷ್ಟು ರಿಟರ್ನ್ಸ್ ದೊರಕಿಸಿಕೊಟ್ಟಿವೆ. ಆದರೆ ಇದನ್ನೇ ಮಾದರಿಯಾಗಿಸಿಕೊಂಡು ಪ್ರತಿಬಾರಿಯೂ ಇಷ್ಟೇ ಪ್ರಮಾಣದ ರಿಟರ್ನ್ಸ್ ದೊರಕಿಯೇ ತೀರುತ್ತದೆ ಎನ್ನುವ ಅತಿರೇಕದ ನಿರೀಕ್ಷೆಗಳನ್ನು ಷೇರು ಮಾರುಕಟ್ಟೆಯ ಕುರಿತು ಇರಿಸಿಕೊಳ್ಳಬಾರದು.

ಷೇರು ಮಾರುಕಟ್ಟೆಯಲ್ಲಿ ಶೇ.12 ರ ಗತಿಯಲ್ಲಿ ಲಾಭ ಗಳಿಸುವುದು ನಮ್ಮ ಅದೃಷ್ಟವನ್ನು ಮಾತ್ರವೇ ಅವಲಂಬಿಸಿದೆ ಎನ್ನುವ ವಾರೆನ್ ಬಫೆಟ್ ರ ಹೇಳಿಕೆಯನ್ನು ಅಪಹಾಸ್ಯ ಮಾಡಲಾಗದು. ಒಂದು ವೇಳೆ ಆ ಮಾತುಗಳನ್ನು ಕಡೆಗಣಿಸಿದ್ದೇ ಆದರೆ ಅದು ತೊಂದರೆಗಳನ್ನು ಆಹ್ವಾನಿಸಿಕೊಂಡಂತೆ.

ಹೆಚ್ಚುವರಿ ಹಣವನ್ನು ಮಾತ್ರವೇ ಹೂಡಿಕೆ ಮಾಡಿ

ಹೆಚ್ಚುವರಿ ಹಣವನ್ನು ಮಾತ್ರವೇ ಹೂಡಿಕೆ ಮಾಡಿ

ಈಗಾಗಲೇ ಚರ್ಚಿಸಿದಂತೆ ಷೇರು ಮಾರುಕಟ್ಟೆಯ ಏರಿಳಿತಗಳು ಸಾಮಾನ್ಯ. ಇದರ ಅರಿವಿದ್ದೂ ರಿಸ್ಕ್ ತೆಗೆದುಕೊಳ್ಳಲು ಬಯಸುವ ಸಾಹಸೀ ಪ್ರವೃತ್ತಿ ನಿಮ್ಮದಾಗಿದ್ದರೆ ಈ ನಿಟ್ಟಿನಲ್ಲಿ ಖಂಡಿತವಾಗಿಯೂ ಮುಂದುವರೆಯಬಹುದು. ಆದರೂ ಈ ಬಗೆಯ ಸಾಹಸಕ್ಕೆ ಮುಂದಾಗುವ ಮುನ್ನ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುವುದು ಅತ್ಯಂತ ಅಪೇಕ್ಷಣೀಯ. ನಿಮ್ಮ ಜೀವನ ನಿರ್ವಹಣೆಗೆ ಸಾಕಾಗಿ ಅದರ ಬಳಿಕವೂ ಹೆಚ್ಚುವರಿ ಹಣವಿದ್ದರೆ ಅದನ್ನು ಇಲ್ಲಿ ತೊಡಗಿಸಬಹುದು. ಒಂದು ವೇಳೆ ನಿಮ್ಮ ಈ ನಿರ್ಧಾರದಿಂದ ನಷ್ಟ ಉಂಟಾದರೂ ಕೂಡ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಿಲ್ಲ.

ಒಂದು ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳುವುದು ಉತ್ತಮ, ಈ ರೀತಿ ನೀವು ತೊಡಗಿಸಿದ ಹಣ ಖಚಿತವಾಗಿ ನಷ್ಟವಾಗುತ್ತದೆ ಎನ್ನುವುದು ಇದರ ಅರ್ಥವಲ್ಲ. ಭವಿಷ್ಯದ ದಿನಗಳಲ್ಲಿ ಇದು ನಿಮಗೆ ಅಧಿಕ ಇಳುವರಿ ನೀಡಬಲ್ಲ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಹಾಗೆಯೇ ಇವು ಲಾಭ ದೊರಕಿಸಿಯೇ ತೀರುತ್ತವೆ ಎಂದೂ ಸಹ ಖಚಿತವಾಗಿ ಯಾರೂ ಹೇಳಲಾಗದು. ಹಾಗಾಗಿಯೇ ನಿಮ್ಮಲ್ಲಿ ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಇದ್ದರೆ ಮಾತ್ರವೇ ಮುಂದುವರೆಯಬೇಕು. ಅಧಿಕ ಹಣ ನಿಮ್ಮ ಬಳಿ ಇದ್ದಾಗ ಮಾತ್ರವೇ ಈ ಬಗೆಯ ರಿಸ್ಕ್ ಗೆ ನೀವು ಕೈಹಾಕಬೇಕು ಎಂಬ ಮಾತನ್ನು ಯಾವ ಕಾರಣಕ್ಕೂ ಮರೆಯಕೂಡದು.

ತೀವ್ರ ಎಚ್ಚರಿಕೆಯಿಂದ ಪರಾಮರ್ಶೆ ನಡೆಸಿ

ತೀವ್ರ ಎಚ್ಚರಿಕೆಯಿಂದ ಪರಾಮರ್ಶೆ ನಡೆಸಿ

ಪ್ರಸ್ತುತ ದಿನಗಳ ತಾಂತ್ರಿಕ ಸವಲತ್ತಿನ ದೆಸೆಯಿಂದ ಇಂದು ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿಯಂತಾಗಿದೆ. ಪ್ರಪಂಚದ ಒಂದು ಮೂಲೆಯಲ್ಲಿ ಜರುಗುವ ಪ್ರಮುಖ ಘಟನೆಯ ಸುದ್ದಿ ಕ್ಷಣಮಾತ್ರದಲ್ಲಿ ಎಲ್ಲೆಡೆಯೂ ತಲುಪಿ ನಮ್ಮ ಆರ್ಥಿಕ ಮಾರುಕಟ್ಟೆಯನ್ನು ಅವಶ್ಯವಾಗಿ ಪ್ರಭಾವಿಸಬಲ್ಲದು. ಹೀಗಾಗಿ ನಾವು ನಿರಂತರವಾಗಿ ನಮ್ಮ ಪೋರ್ಟ್ಫೋಲಿಯೋ ವನ್ನು ಗಮನಿಸುತ್ತಿರಬೇಕಾಗುತ್ತದೆ ಮತ್ತು ಬದಲಾವಣೆಗಳ ಕಡೆಗೆ ಕಣ್ಣಿಟ್ಟಿರಬೇಕು.

ಒಂದು ವೇಳೆ ಸಮಯದ ಅಭಾವದಿಂದ ಅಥವಾ ಸಂಬಂಧಿಸಿದ ಆರ್ಥಿಕ ಕ್ಷೇತ್ರದ ತಿಳುವಳಿಕೆಯ ಕೊರತೆಯಿಂದ ಪೋರ್ಟ್ಫೋಲಿಯೋದ ಸ್ಥಿತಿಗತಿಯನ್ನು ಪರಾಮರ್ಶೆ ಮಾಡಲಾಗದಿದ್ದರೆ ಆ ಕೆಲಸಕ್ಕೆ ಒಬ್ಬ ನುರಿತ ಹಾಗು ಸಮರ್ಥ ಆರ್ಥಿಕ ಯೋಜಕನ ನೆರವು ಪಡೆಯಬಹುದು. ಈ ಸೇವೆಯನ್ನು ಸ್ಫರ್ಧಾತ್ಮಕ ವೆಚ್ಚದಲ್ಲಿ ಪೂರೈಸಲು ಹಲವು ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ವೇಳೆ ಇದೂ ಸಹ ಸಾಧ್ಯವಾಗದೆ ಹೋದರೆ ಆಗ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವುದರ ಕುರಿತು ಮರು ಚಿಂತನೆ ನಡೆಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹೂಡಿಕೆಗೆ ಕೈಹಾಕದಿರುವುದು ಉತ್ತಮ. ಇದರ ಬದಲಿಗೆ ನಿಮ್ಮ ಹಣವನ್ನು ಸುರಕ್ಷಿತ ಇಲ್ಲವೇ ಕಮ್ಮಿ ರಿಸ್ಕ್ ನ ಉತ್ಪನ್ನಗಳಲ್ಲಿ ತೊಡಗಿಸುವುದು ಕ್ಷೇಮಕರ ಎನ್ನುವುದು ಪಂಡಿತರ ಸಲಹೆ.

ಕೊನೆಯ ಮಾತು

ಕೊನೆಯ ಮಾತು

ಇತರೆ ಬಹುತೇಕ ಕ್ಷೇತ್ರಗಳಂತೆ ಷೇರು ಮಾರುಕಟ್ಟೆಯಲ್ಲಿಯೂ ಅದರದ್ದೇ ಲಾಭ ನಷ್ಟ ಮತ್ತು ಮಿತಿಗಳಿವೆ. ಹೂಡಿಕೆದಾರರು ಯಾವುದೇ ಪ್ರಲೋಭನೆಗೆ ಅಥವಾ ಆಮಿಷಗಳಿಗೆ ಈಡಾಗಿ ಇದರಲ್ಲಿ ತೊಡಗುವ ಬದಲಿಗೆ ಸೂಕ್ತ ರೀತಿಯ ಅಧ್ಯಯನ ಮಾಡಿ ಇದು ತಮ್ಮ ಜೀವನಶೈಲಿ, ಮನಸ್ಥಿತಿ ಮತ್ತು ಅಭಿರುಚಿಗೆ ಒಗ್ಗುವುದನ್ನು ಖಾತರಿಪಡಿಸಿಕೊಂಡು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸತತ ಅಧ್ಯಯನ, ಪರಿಣಿತರ ಮಾರ್ಗದರ್ಶನ ಮತ್ತು ನಿರುದ್ವಿಗ್ನ ಮನಸ್ಥಿತಿಯ ಜೊತೆಗೆ ಸಂಯಮದಿಂದ ವ್ಯವಹರಿಸಿದರೆ ಈ ಕ್ಷೇತ್ರದಲ್ಲಿ ಯಶಸ್ಸನ್ನು ಹೊಂದುವುದು ಖಂಡಿತ ಸಾಧ್ಯ. ಹೊಸದಾಗಿ ಹೂಡಿಕೆ ಮಾಡಲು ಬಯಸುವವರಿಗೆ ಈ ಲೇಖನದಿಂದ ಅಗತ್ಯ ಮಾಹಿತಿ ಲಭ್ಯವಾದರೆ ಮತ್ತು ಹಾಲಿ ಹೂಡಿಕೆದಾರರಿಗೆ ಇದು ಉಪಯುಕ್ತ ಮಾಹಿತಿ ಎನಿಸಿದರೆ ನಮ್ಮ ಈ ಪುಟ್ಟ ಪ್ರಯತ್ನ ಸಾರ್ಥಕ.

ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ..

English summary

10 golden rules of investing in stock markets

The lure of big money has always thrown investors into the lap of stock markets. However, making money in equities is not easy. It not only requires oodles of patience and discipline, but also a great deal of research and a sound understanding of the market, among others.
Story first published: Saturday, March 3, 2018, 12:36 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more