For Quick Alerts
ALLOW NOTIFICATIONS  
For Daily Alerts

ಆತುರಪಡಬೇಡಿ! ವಿಮಾ ಪಾಲಿಸಿ ಕೊಳ್ಳುವ ಮುನ್ನ ಈ 10 ಅಂಶಗಳು ಗೊತ್ತಿರಲಿ..

ಪಾಲಿಸಿ ಕೊಳ್ಳುವ ಮುನ್ನ ತಮಗೆ ಹೊಂದುವ, ಸರಿಯಾದ ಪಾಲಿಸಿ ಆರಿಸಿಕೊಳ್ಳದಿದ್ದಲ್ಲಿ ಅವು ಪ್ರಯೋಜನಕ್ಕೆ ಬಾರದಂತಾಗುತ್ತವೆ. ಹೀಗಾಗಿ ಜೀವ ವಿಮೆ ಮಾಡಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು

By Siddu Thoravat
|

ಯಾವುದೇ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದಾಗ ಆತನ ಕುಟುಂಬಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಒದಗಿಸಿ, ಆಧಾರ ನೀಡುವ ಜೀವ ವಿಮೆ ಯೋಜನೆಯ ಪರಿಕಲ್ಪನೆಯ ಬಗ್ಗೆ ಬಹುತೇಕ ಭಾರತೀಯ ಸಾಮಾನ್ಯ ಜನರಲ್ಲಿ ತಪ್ಪು ಕಲ್ಪನೆಗಳೇ ಮನೆ ಮಾಡಿವೆ ಎನ್ನುತ್ತಾರೆ ಹಣಕಾಸು ತಜ್ಞರು. ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಉಳಿಸಲು ಅಥವಾ ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ತಮಗೆ ಬೇಕಾಗಿರದ ಜೀವ ವಿಮೆ ಮಾಡಿಸುವ ಅನೇಕರು ನಂತರ ಪರಿತಪಿಸುವುದು ಕಂಡು ಬರುತ್ತದೆ. ಆದರೆ ಅನೇಕ ಮಾದರಿಯ ಜೀವ ವಿಮೆ ಪಾಲಿಸಿಗಳು ರಕ್ಷಣೆ ಹಾಗೂ ಹೂಡಿದ ಹಣಕ್ಕೆ ಆದಾಯ ಹೀಗೆ ಎರಡು ಬಗೆಯ ಪ್ರತಿಫಲ ನೀಡಬಲ್ಲವು ಎಂಬುದನ್ನು ಅರಿಯಬೇಕಿದೆ. ಆದ್ದರಿಂದ ಪಾಲಿಸಿ ಕೊಳ್ಳುವ ಮುನ್ನ ತಮಗೆ ಹೊಂದುವ, ಸರಿಯಾದ ಪಾಲಿಸಿ ಆರಿಸಿಕೊಳ್ಳದಿದ್ದಲ್ಲಿ ಅವು ಪ್ರಯೋಜನಕ್ಕೆ ಬಾರದಂತಾಗುತ್ತವೆ. ಹೀಗಾಗಿ ಜೀವ ವಿಮೆ ಮಾಡಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತಿ ಅವಶ್ಯ. ಇವು 2018-19ರಲ್ಲಿನ ಅತ್ಯುತ್ತಮ ಅವಧಿ ವಿಮಾ ಯೋಜನೆಗಳು (Term Insurance Plans)

ಜೀವ ವಿಮೆಯಲ್ಲಿ ಹಣ ಹೂಡುವ ಮುನ್ನ ಗಣನೆಗೆ ತೆಗೆದುಕೊಳ್ಳಬೇಕಾದ 10 ಪ್ರಮುಖ ಅಂಶಗಳು ಹೀಗಿವೆ:

1. ಪ್ರೀಮಿಯಂ

1. ಪ್ರೀಮಿಯಂ

ಜೀವ ವಿಮೆಯ ಕಂತು (ಪ್ರೀಮಿಯಂ) ಗಳನ್ನು ಸುಲಭವಾಗಿ ಕಟ್ಟುವಂತಿರಬೇಕು. ಅಂದರೆ ಕಂತಿನ ಮೊತ್ತ ಯಾವುದೇ ಸಂದರ್ಭದಲ್ಲಿಯೂ ಹೊರೆಯಾಗಬಾರದು. ನಿಗದಿತ ಮನೆ ನಿರ್ವಹಣೆ ವೆಚ್ಚ, ಬಾಡಿಗೆ ಹಾಗೂ ಇನ್ನಿತರ ಸಾಲದ ಕಂತುಗಳನ್ನು ನಿರ್ವಹಿಸಿದ ನಂತರವೂ ಸರಳವಾಗಿ ಪಾವತಿ ಮಾಡುವಂತೆ ಪ್ರೀಮಿಯಂ ಮೊತ್ತ ಇರಬೇಕು. ವಿಮೆಯ ಪ್ರೀಮಿಯಂ ಕಟ್ಟಲು ಪರದಾಡದಂತೆ ನಿರ್ಧಾರ ಕೈಗೊಳ್ಳಬೇಕೆನ್ನುತ್ತಾರೆ ಹಣಕಾಸು ತಜ್ಞರು.
ಪಾಲಿಸಿಯನ್ನು ಮಧ್ಯದಲ್ಲಿ ನಿಲ್ಲಿಸುವುದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ಇತರ ಹಣಕಾಸು ಅಗತ್ಯತೆಗಳನ್ನು ಪೂರೈಸಿದ ನಂತರವೂ ಸುಲಭವಾಗಿ ಪ್ರೀಮಿಯಂ ಪಾವತಿ ಮಾಡುವ ಹಾಗೆ ಪಾಲಿಸಿ ಕೊಳ್ಳುವುದು ಸರಿಯಾದ ಕ್ರಮ ಎನ್ನುತ್ತಾರೆ ಮಹಿಂದ್ರಾ ಇನ್ಸೂರೆನ್ಸ್ ಬ್ರೋಕರ್ಸ್ ಲಿಮಿಟೆಡ್‌ನ MD ಹಾಗೂ CEO ಜೈದೀಪ ದೇವರೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

2. ಉದ್ದೇಶ

2. ಉದ್ದೇಶ

ವಿಮೆ ಕೊಳ್ಳುವ ಉದ್ದೇಶದ ಬಗ್ಗೆ ಎನ್.ಎ. ಶಾ ಅಸೋಸಿಯೇಟ್ಸ್ ಎಲ್‌ಎಲ್‌ಪಿ ಸಂಸ್ಥೆಯ ಪಾರ್ಟನರ್ ಅಶೋಕ ಶಾ ಸಲಹೆ ನೀಡುವುದು ಹೀಗೆ:
ವ್ಯಕ್ತಿಯು ತಾನು ಕೊಳ್ಳುವ ಪಾಲಿಸಿಯ ಪ್ರೀಮಿಯಂ ಪಾವತಿಸುವ ಸಾಮರ್ಥ್ಯದ ಬಗ್ಗೆ ಮೊದಲು ಆಲೋಚಿಸಬೇಕು. ಹಾಗೆಯೇ ಯಾವ ಉದ್ದೇಶಕ್ಕೆ ಪಾಲಿಸಿ ಕೊಳ್ಳುತ್ತಿದ್ದೇನೆ ಹಾಗೂ ಅದರಲ್ಲಿ ಸಿಗುವ ರಿಸ್ಕ್ ಕವರ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಜೀವ ವಿಮೆ ಪಾಲಿಸಿ ಕೊಳ್ಳುವ ಬಹುತೇಕ ಜನ, ತಾವು ಪಾವತಿಸುವ ಪ್ರೀಮಿಯಂನ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ತಿಳಿದುಕೊಂಡಿರುತ್ತಾರೆ. ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ. ಮಾರ್ಚ್ ೩೧, ೨೦೧೨ ರಂದು ಅಥವಾ ಅದಕ್ಕೂ ಮುಂಚೆ ಕೊಂಡ ಪಾಲಿಸಿಗಳಲ್ಲಿ, ಒಟ್ಟು ಪಾಲಿಸಿ ಮೊತ್ತದ ಶೇ. 20 ರಷ್ಟು ಹಾಗೂ ಏಪ್ರಿಲ್ ೧, ೨೦೧೨ ರಂದು ಅಥವಾ ಅದರ ನಂತರ ಕೊಂಡ ಪಾಲಿಸಿಗಳಿಗೆ ಶೇ. 10ರಷ್ಟು ತೆರಿಗೆ ವಿನಾಯಿತಿ ಪಡೆಯಬಹುದು ಎಂಬ ನಿಯಮ ಆದಾಯ ತೆರಿಗೆ ಇಲಾಖೆಯದ್ದಾಗಿದೆ.

ಒಬ್ಬ ವ್ಯಕ್ತಿ ತನ್ನ ವಾರ್ಷಿಕ ಆದಾಯದ ೫ ರಿಂದ ೬ ಪಟ್ಟು ಕವರ್ ಸಿಗುವ ಹಾಗೆ ವಿಮೆ ಕೊಳ್ಳಬೇಕು. ಈಗಾಗಲೇ ಜೀವ ವಿಮೆ ಪಾಲಿಸಿ ಇದ್ದರೆ, ಎಂಡೋಮೆಂಟ್ ಪ್ಲ್ಯಾನ್ ಅಥವಾ ಯೂಲಿಪ್ (ULIP-Unit Linked Insurance Plans) ಕೊಳ್ಳುವುದು ಸೂಕ್ತ ಎನ್ನುತ್ತಾರೆ ಮಹಿಂದ್ರಾ ಇನ್ಸೂರೆನ್ಸ್ ಬ್ರೋಕರ್ಸ್‌ನ ಜೈದೀಪ ದೇವರೆ.
ಯೂಲಿಪ್ ಯೋಜನೆಯು ಜೀವ ವಿಮೆ ಹಾಗೂ ಮ್ಯುಚುವಲ್ ಫಂಡ್ ಎರಡರ ಪ್ರತಿಫಲಗಳನ್ನು ನೀಡಬಲ್ಲದು. ಈ ಯೋಜನೆಯಲ್ಲಿ ಕೆಲ ಭಾಗವನ್ನು ಇಕ್ವಿಟಿಗಳಲ್ಲಿ ಹೂಡಲಾಗುವುದು ಹಾಗೂ ಇನ್ನುಳಿದ ಹಣವನ್ನು ವಿಮೆಯ ಪ್ರೀಮಿಯಂ ಆಗಿ ಬಳಸಲಾಗುವುದು. ಚಂದಾದಾರರು ಮಾಸಿಕ ಅಥವಾ ವಾರ್ಷಿಕ ಕಂತುಗಳಲ್ಲಿ ಪ್ರೀಮಿಯಂ ಕಟ್ಟಬಹುದಾಗಿದೆ.

3. ಅವಧಿ

3. ಅವಧಿ

ನಿರ್ದಿಷ್ಟ ಅವಧಿಯ ಜೀವ ವಿಮೆ ಪಾಲಿಸಿಗಳನ್ನು ವಾರ್ಷಿಕ ನವೀಕರಣದ ಆಧಾರದಲ್ಲಿ ಕೊಳ್ಳಲಾಗುತ್ತದೆ. ಅಂದರೆ ಪಾಲಿಸಿಯನ್ನು ವರ್ಷಕ್ಕೊಮ್ಮೆ ಮತ್ತೊಂದು ವರ್ಷದ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಆದರೆ ಎಂಡೋಮೆಂಟ್ ಪ್ಲ್ಯಾನ್ ವಿಷಯದಲ್ಲಿ ಅವಧಿ ಹೆಚ್ಚು ಕಡಿಮೆ ಆಗಬಹುದಾಗಿದೆ. ಆದರೂ ವಿಮೆ ಕೊಳ್ಳುವ ಮುನ್ನ ಅವಧಿಯ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳುವುದು ಅಗತ್ಯ ಎಂಬುದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ.

ಟರ್ಮ್ ಇನ್ಸೂರೆನ್ಸ್‌ನಲ್ಲಿ ಕೈಗೆಟುಕುವ ದರದಲ್ಲಿ ಪ್ರೀಮಿಯಂ ಪಾವತಿಸಬಹುದಾಗಿದೆ. ಜೊತೆಗೆ ಪಾಲಿಸಿ ಅವಧಿಯುದ್ದಕ್ಕೂ ಯಾವುದೇ ಪ್ರೀಮಿಯಂ ಬದಲಾವಣೆ ಇಲ್ಲದೆ ನಾಮಿನಿಗಳಿಗೆ ರಕ್ಷಣೆಯ ಭರವಸೆ ಸಿಗುತ್ತದೆ ಎನ್ನುತ್ತಾರೆ ಎಕ್ಸೈಡ್ ಲೈಫ್ ಇನ್ಸೂರೆನ್ಸ್ ಸಂಸ್ಥೆಯ ಪ್ರಾಡಕ್ಟ್ ಮ್ಯಾನೇಜಮೆಂಟ್‌ನ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಸಂಜಯ ತಿವಾರಿ.

4. ಅಪಾಯ ನಿರ್ವಹಣೆ (Risk Covered)

4. ಅಪಾಯ ನಿರ್ವಹಣೆ (Risk Covered)

ಪಾಲಿಸಿ ಕೊಳ್ಳುವ ಮುನ್ನ ವಿಮೆಯ ಒಟ್ಟು ಮೊತ್ತ, ಅದರಲ್ಲಿನ ಸೌಲಭ್ಯಗಳು, ವಿಶೇಷ ಅನುಕೂಲತೆಗಳು, ರಿಸ್ಕ್ ಕವರ್ ಹಾಗೂ ಪ್ರೀಮಿಯಂ ಮೊತ್ತ ಮುಂತಾದುವುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ಜೊತೆಗೆ ಇತರ ವಿಮಾ ಕಂಪನಿಗಳ ಇದೇ ರೀತಿಯ ಪಾಲಿಸಿಗಳಲ್ಲಿನ ಸೌಲಭ್ಯಗಳನ್ನು ಸಹ ಅಭ್ಯಸಿಸಬೇಕು ಎನ್ನುತ್ತಾರೆ ಅಶೋಕ ಶಾ.

5. ಹೆಚ್ಚುವರಿ ಸೌಲಭ್ಯಗಳು

5. ಹೆಚ್ಚುವರಿ ಸೌಲಭ್ಯಗಳು

ತಮ್ಮ ಬಾಧ್ಯತೆಗಳಿಗೆ ಸಂಪೂರ್ಣ ಸುರಕ್ಷತೆ ಬಯಸುವವರಿಗೆ ಟರ್ಮ್ ಇನ್ಸೂರೆನ್ಸ್ ಪಾಲಿಸಿ ಅತ್ಯಂತ ಸೂಕ್ತವಾಗಿವೆ. ಟರ್ಮ್ ಇನ್ಸೂರೆನ್ಸ್‌ಗೆ ಹೋಲಿಸಿದರೆ ಎಂಡೋಮೆಂಟ್ ಹಾಗೂ ಯೂಲಿಪ್ ಯೋಜನೆಗಳು ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ. ಆದರೆ ತುಸು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುವುದು ಹಾಗೂ ಕಡಿಮೆ ವಿಮೆಯ ಕವರ್ ಸಿಗುವುದು.

ಟರ್ಮ್ ಇನ್ಸೂರೆನ್ಸ್ ಹಾಗೂ ಎಂಡೋಮೆಂಟ್ ಪಾಲಿಸಿ ಎರಡನ್ನೂ ಸಮತೋಲಿತವಾಗಿ ಕೊಂಡಲ್ಲಿ ಭವಿಷ್ಯದಲ್ಲಿ ಹಣಕಾಸು ಭದ್ರತೆ ನಿಮ್ಮದಾಗುತ್ತದೆ. ಏನೇ ಆದರೂ ವೃತ್ತಿ ಜೀವನದ ಆರಂಭದಲ್ಲಿ ಎರಡರಲ್ಲಿ ಒಂದನ್ನಾದರೂ ಕೊಂಡುಕೊಳ್ಳಲೇಬೇಕು ಎನ್ನುತ್ತಾರೆ ಸಂಜಯ ತಿವಾರಿ.

6. ವಿಮೆ ಮಾಡಿಸಿದ ಮೊತ್ತ (ಸಮ್ ಅಶ್ಯುರ್ಡ್)

6. ವಿಮೆ ಮಾಡಿಸಿದ ಮೊತ್ತ (ಸಮ್ ಅಶ್ಯುರ್ಡ್)

ಅವಧಿ ವಿಮಾ ಪಾಲಿಸಿಗಳಲ್ಲಿ ಪಾವತಿಸಲಾದ ಎಲ್ಲ ಪ್ರೀಮಿಯಂ ಮೊತ್ತವನ್ನು ಪಾಲಿಸಿದಾರನ ಜೀವನ ಭದ್ರತೆಗಾಗಿ ಉಪಯೋಗಿಸಲಾಗುತ್ತದೆ. ಅಂದರೆ ಒಂದು ವೇಳೆ ಪಾಲಿಸಿದಾರ ಆಕಸ್ಮಿಕವಾಗಿ ಮೃತಪಟ್ಟಲ್ಲಿ ಮಾತ್ರ ಆತನ ನಾಮಿನಿದಾರರಿಗೆ ಸಂಪೂರ್ಣ ವಿಮೆ ಮಾಡಿಸಿದ ಮೊತ್ತವನ್ನು, ನಿರ್ದಿಷ್ಟ ಷರತ್ತುಗೊಳಪಟ್ಟು ಪಾವತಿ ಮಾಡಲಾಗುತ್ತದೆ. ಆದರೆ ಪಾಲಿಸಿ ಅವಧಿ ಮುಗಿದ ನಂತರವೂ ವ್ಯಕ್ತಿ ಬದುಕಿದ್ದರೆ ಆತನಿಗಾಗಲಿ ಅಥವಾ ನಾಮಿನಿಗಾಗಲಿ ಯಾವುದೇ ಹಣ ನೀಡುವ ಸೌಲಭ್ಯ ಇರುವುದಿಲ್ಲ.

ಅವಧಿ ವಿಮಾ ಪಾಲಿಸಿಗಳನ್ನು ವರ್ಷಕ್ಕೊಮ್ಮೆ ನವೀಕರಿಸಬೇಕಾಗುತ್ತದೆ. ಅದೇ ರೀತಿ ಎಂಡೋಮೆಂಟ್ ಪಾಲಿಸಿಯನ್ನು ಸಹ ಪಾವತಿ ಮಾಡುವ ಪಾಲಿಸಿಯ ರೀತಿ ಬದಲಾಯಿಸಿಕೊಳ್ಳಬಹುದಾಗಿದೆ. ಆದರೆ ಖಚಿತ ವಿಮಾ ಮೊತ್ತದಲ್ಲಿ ಕಡಿತವಾಗುತ್ತದೆ.
ಆದ್ದರಿಂದ ಯಾವುದೇ ಪಾಲಿಸಿಯ ಖಚಿತ ವಿಮಾ ಮೊತ್ತವನ್ನು ಏಜೆಂಟ್‌ಗಳಿಗೆ ಕೇಳಿ ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ವಿಮೆ ಕ್ಷೇತ್ರದ ಪರಿಣಿತರು.

ಮನೆ ಸಾಲದ ಬಾಧ್ಯತೆಯನ್ನು ನಿಭಾಯಿಸಲು ಅವಧಿ ವಿಮೆ ಅನುಕೂಲಕರವಾಗಿವೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ೩೫ನೇ ವರ್ಷ ವಯಸ್ಸಿನಲ್ಲಿ 50 ಲಕ್ಷ ರೂ. ಬಾಧ್ಯತಾ ಸಾಲ ಹೊಂದಿದ್ದಾನೆ ಎಂದುಕೊಳ್ಳೋಣ. ಈ ಬಾಧ್ಯತೆಯನ್ನು ೩೦ ವರ್ಷಗಳವರೆಗೆ ನಿಭಾಯಿಸಬೇಕಾದರೆ ಪ್ರತಿ ವರ್ಷ ೯ ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುವಷ್ಟು ಪಾಲಿಸಿ ಕೊಳ್ಳಬೇಕಾಗುತ್ತದೆ. ಅದೇ ರೀತಿ ಪ್ರತಿ ತಿಂಗಳು 50 ಸಾವಿರ ರೂಪಾಯಿ ಆದಾಯ ಪಡೆಯುವ ವ್ಯಕ್ತಿಯೊಬ್ಬ ಮುಂದಿನ ೨೫ ವರ್ಷಗಳವರೆಗೆ (ನಿವೃತ್ತಿಯ 60ನೇ ವಯಸ್ಸಿನವರೆಗೆ) ಆದಾಯ ಖಾತರಿ ಪಡೆಯಬೇಕಾದರೆ ಪ್ರತಿ ವರ್ಷ 12 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುಷ್ಟು ವಿಮೆ ಕೊಳ್ಳಬೇಕಾಗುತ್ತದೆ. (ಆರೋಗ್ಯವಂತ ಹಾಗೂ ಧೂಮಪಾನ ಮಾಡದ ವ್ಯಕ್ತಿ ಆಗಿರಬೇಕು. ಇದು ಜಿಎಸ್‌ಟಿ ಹೊರತುಪಡಿಸಿ). ಎನ್ನುತ್ತಾರೆ ಪಿಎನ್‌ಬಿ ಮೆಟ್ ಲೈಫ್ ಸಂಸ್ಥೆಯ ಪ್ರಾಡಕ್ಟ್ ಹೆಡ್ ಖಾಲಿದ ಅಹ್ಮದ್.

7. ಇನ್ಸೂರೆನ್ಸ್ ಕಂಪನಿಯ ಕ್ಲೇಮ್ ಪಾವತಿ

7. ಇನ್ಸೂರೆನ್ಸ್ ಕಂಪನಿಯ ಕ್ಲೇಮ್ ಪಾವತಿ

ಜೀವ ವಿಮೆ ಕೊಳ್ಳುವುದು ಒಂದು ದೀರ್ಘಾವಧಿಯ ಹೊಣೆಗಾರಿಕೆಯಾಗಿದೆ. ಹೀಗಾಗಿ ಕೊಳ್ಳಲಿರುವ ಪಾಲಿಸಿಯ ಸಂಪೂರ್ಣ ವಿವರ ಹಾಗೂ ಇನ್ಸೂರೆನ್ಸ್ ಕಂಪನಿಯ ಕ್ಲೇಮ್ ಪಾವತಿಯ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡುತ್ತಾರೆ ಎಕ್ಸೈಡ್ ಲೈಫ್ ಇನ್ಸೂರೆನ್ಸ್ ನ ತಿವಾರಿ.

8. ಆದಾಯ

8. ಆದಾಯ

ಮಾರುಕಟ್ಟೆಯ ಏರಿಳಿತದ ಮೇಲೆ ಆಧಾರಿತವಾದ ಯೂಲಿಪ್ ಯೋಜನೆಗಳಲ್ಲಿ ರಿಸ್ಕ್ ಇದ್ದೇ ಇರುತ್ತದೆ. ಆದ್ದರಿಂದ ಅವಧಿ ವಿಮೆ ಜೊತೆಗೆ ಪಾಲಿಸಿಯಿಂದ ತಾವು ಗಳಿಸಬಹುದಾದ ಆದಾಯದ ಬಗ್ಗೆ ತಿಳಿದುಕೊಂಡಿರುವುದು ಅಗತ್ಯ ಎನ್ನುತ್ತಾರೆ ತಜ್ಞರು.

ಸಾಂಪ್ರದಾಯಿಕ ವಿಮೆ ಪಾಲಿಸಿಗಳು ವಾರ್ಷಿಕ ಶೇ. 6 ಅಥವಾ 7ಕ್ಕಿಂತ ಹೆಚ್ಚು ಪ್ರತಿಫಲ ನೀಡಲಾರವು. ಹಾಗೆಯೇ ಯೂಲಿಪ್ ಗಳಲ್ಲಿ ಮಾರ್ಕೆಟ್ ರಿಸ್ಕ್ ಇರುತ್ತದೆ. ಆದ್ದರಿಂದ ಸಾಂಪ್ರದಾಯಿಕ ಯೋಜನೆಗಳ ಕಡಿಮೆ ಆದಾಯ ಹಾಗೂ ಯೂಲಿಪ್ ಗಳಲ್ಲಿನ ಅಪಾಯ ಎರಡರ ಬಗ್ಗೆಯೂ ಸಿದ್ಧತೆ ಮಾಡಿಕೊಂಡಿರಬೇಕು ಎಂಬುದು ಮಹಿಂದ್ರಾ ಇನ್ಸೂರೆನ್ಸ್ ಬ್ರೋಕರ್ಸ್‌ನ ಜೈದೀಪ ದೇವರೆ ಅವರ ಅಭಿಪ್ರಾಯವಾಗಿದೆ.

9. ಶುಲ್ಕಗಳು

9. ಶುಲ್ಕಗಳು

ಹೂಡಿಕೆದಾರರ ದೃಷ್ಟಿಯಿಂದ ನೋಡುವುದಾದರೆ ಯೂಲಿಪ್ ಗಳಲ್ಲಿ ಹಣ ತೊಡಗಿಸುವುದಕ್ಕಿಂತ ನೇರವಾಗಿ ಇಕ್ವಿಟಿ ಮ್ಯುಚುವಲ್ ಫಂಡ್ ಗಳಲ್ಲಿ ಹಣ ಹೂಡುವುದು ಕಡಿಮೆ ವೆಚ್ಚದಾಯಕವಾಗಿದೆ.

ವಿಮಾ ಕ್ಷೇತ್ರದ ನಿಯಂತ್ರಕ ಸಂಸ್ಥೆ ಐಆರ್‌ಡಿಎ (ಇನ್ಸೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ) ವಿಮಾ ಪಾಲಿಸಿಗಳ ಮೇಲೆ ವಿಧಿಸಲಾಗುವ ಶುಲ್ಕಗಳ ಮೇಲೆ ನಿಯಂತ್ರಣ ಹೇರಿದೆ. ಆದರೂ ನೇರವಾಗಿ ಮ್ಯುಚುವಲ್ ಫಂಡ್ ಗಳಲ್ಲಿ ಹಣ ತೊಡಗಿಸುವುದಕ್ಕಿಂತ ವಿಮಾ ಪಾಲಿಸಿಗಳ ಶುಲ್ಕ ಅಧಿಕವಾಗಿವೆ. ಬ್ಯಾಂಕ್‌ಗಳಲ್ಲಿ ಸಣ್ಣ ಪ್ರಮಾಣದ ಉಳಿತಾಯ ಹಾಗೂ ಠೇವಣಿಗಳಿಗೆ ಯಾವುದೇ ಶುಲ್ಕಗಳಿಲ್ಲ ಎಂದು ಹೇಳುತ್ತಾರೆ ಜೈದೀಪ ದೇವರೆ.

10. ಹಣದುಬ್ಬರ

10. ಹಣದುಬ್ಬರ

ಕುಟುಂಬದ ಭವಿಷ್ಯದ ಹಣಕಾಸು ಅಗತ್ಯ ಹಾಗೂ ಕಾಲಾವಧಿಯಲ್ಲಿ ಉಂಟಾಗುವ ಹಣದುಬ್ಬರದ ಪರಿಣಾಮಗಳನ್ನು ಆಧರಿಸಿ ವಿಮೆ ಪಾಲಿಸಿ ಕೊಂಡುಕೊಳ್ಳಬೇಕು ಎಂಬುದು ವಿಮಾ ತಜ್ಞರ ಸಲಹೆಯಾಗಿದೆ.
ಪಾಲಿಸಿ ಕವರ್ ಬಗ್ಗೆ ನಿರ್ಧರಿಸುವಾಗ ಹೆಚ್ಚಳವಾಗುವ ಹಣದುಬ್ಬರವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಪಿಎನ್‌ಬಿ ಮೆಟ್ ಲೈಫ್‌ನ ಅಹ್ಮದ್.

English summary

10 Things You Must Consider Before Buying A Life Insurance Policy

Here are 10 basic things you must consider before putting your money in a life insurance policy.
Story first published: Wednesday, June 27, 2018, 10:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X