ಟೀವಿ ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶವನ್ನೂ ಆಲೋಚಿಸಿ
"ಮನೆಗೊಂದು ಟೀವಿ ತರಬೇಕು. ಯಾವುದು ತರಬೇಕು ಅನ್ನೋದೇ ಗೊತ್ತಾಗ್ತಿಲ್ಲ". ಇಂಥದ್ದೊಂದು ಮಾತು ನೀವು ಕೇಳಿಸಿಕೊಂಡಿದ್ದೀರಾ ಅಥವಾ ನೀವೇ ಆಡಿದ್ದೀರಾ? ಹಾಗಿದ್ದಲ್ಲಿ ನೀವು ಈ ಲೇಖನ ಓದಲೇಬೇಕು. ಏಕೆಂದರೆ, ಈ ಮಾತಿಗೂ ಥಿಯೇಟರ್ ಗಳಿಗೆ ಜನರೇ ಬರುತ್ತಿಲ್ಲ ಎಂಬ ಆಕ್ಷೇಪಕ್ಕೂ ಬಹಳ ಹತ್ತಿರದ ನಂಟಿದೆ.
ಬದಲಾಗುತ್ತಿರುವ ತಂತ್ರಜ್ಞಾನ ಏನೇನು ಮಾಡಿದೆ ಅಥವಾ ಮಾಡ್ತಿದೆ ಎಂಬುದನ್ನು ತಿಳಿದುಕೊಳ್ಳದೆ ಹೋದರೆ ನಿಮ್ಮ ಕೈಯಿಂದ ಸಾವಿರಾರು ರುಪಾಯಿ ವ್ಯರ್ಥವಾಗಿ ಹೋಗುತ್ತದೆ. ಆ ನಂತರ ಚಿಂತೆ ಮಾಡಿ ಪ್ರಯೋಜನ ಏನು? ನಿಮ್ಮ ಹಣ ಉಳಿಯಬೇಕು. ಜತೆಗೆ ಕಾಲದ ಜತೆಗೆ ಅಪ್ ಡೇಟ್ ಆಗಿರಬೇಕು. ಅದೇ ತಾನೆ ಮೂಲಮಂತ್ರ.
ಹಾಗಿದ್ದರೆ ಟೀವಿ ಖರೀದಿ ಆಲೋಚನೆಯಲ್ಲಿ ಈ ವಿಚಾರಗಳನ್ನು ಖಾತ್ರಿ ಮಾಡಿಕೊಳ್ಳಿ.

ಸಾಮಾನ್ಯ ಟೀವಿಯೇ ಸ್ಮಾರ್ಟ್ ಆಗಿಬಿಡುತ್ತದೆ
ಬಹಳ ಮಂದಿಗೆ ಈಚೆಗೆ ಏನು ಬೇಜಾರು ಅಂದರೆ, ನಾವು ಸಾವಿರಾರು ರುಪಾಯಿ ದುಡ್ಡು ಕೊಟ್ಟು ವರ್ಷಗಳ ಹಿಂದೆ ಟೀವಿ ಖರೀದಿ ಮಾಡಿದ್ದೇವೆ. ಟೀವಿ ದೊಡ್ಡದಾಗಿದೆ. ಆದರೆ ಸ್ಮಾರ್ಟ್ ಟೀವಿ ಅಲ್ಲ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಸೇರಿದಂತೆ ಯಾವುದಕ್ಕೂ ನಮ್ಮ ಟೀವಿ ಸ್ಪಂದಿಸಲ್ಲ. ಈಗ ಹೊಸದಾಗಿ ಟೀವಿ ಖರೀದಿ ಮಾಡಿದವರಿಗೆ ಸಿಕ್ಕಿರುವ ಫೀಚರ್ ನೋಡಿದರೆ, ನಮ್ಮ ಮನೆ ಟೀವಿ ಏನು ಪ್ರಯೋಜನ ಅನ್ನಿಸಿಬಿಡುತ್ತದೆ ಎಂಬ ಆಕ್ಷೇಪ ಹೇಳಿಕೊಳ್ಳುತ್ತಾರೆ. ಸಾಮಾನ್ಯ ಎಲ್ ಸಿಡಿ, ಎಲ್ ಇಡಿ ಟೀವಿಗಳನ್ನೂ ಕನಿಷ್ಠ ಎರಡ್ಮೂರು ಸಾವಿರ ರುಪಾಯಿಗಳಲ್ಲಿ ಸ್ಮಾರ್ಟ್ ಟೀವಿ ರೀತಿ ಮಾಡಬಹುದು ಎಂಬುದು ಗೊತ್ತೆ? ಹೌದು, ಈಗ ಅಮೆಜಾನ್ ಫೈರ್ ಸ್ಟಿಕ್, ಏರ್ ಟೆಲ್ ನಿಂದ ಸೆಟ್ ಟಾಪ್ ಬಾಕ್ಸ್ ಮೂಲಕವೇ ಸ್ಮಾರ್ಟ್ ಟೀವಿ ಆಗುತ್ತದೆ. ಇನ್ನೂ ಹೆಚ್ಚು ಹಣವೇ ಖರ್ಚು ಮಾಡಲು ಸಿದ್ಧವಿದ್ದರೆ ಆಪಲ್ ಟೀವಿ ಇದೆ. ಈಗ ಇರುವ ಟೀವಿಗೆ ಅವುಗಳ ಪೈಕಿ ಯಾವುದಾದರೂ ಒಂದನ್ನು ಇನ್ ಸ್ಟಾಲ್ ಮಾಡಿದರೆ ಸಾಕು. ಸ್ಮಾರ್ಟ್ ಟೀವಿಗಳು ಹೇಗೆ ಕೆಲಸ ಮಾಡುತ್ತವೋ ಹಾಗೇ ಇರುತ್ತದೆ.

ಯಾವ ಅಳತೆಯ ಟೀವಿ?
ಇನ್ನು ದೊಡ್ಡ ಅಳತೆಯ ಟೀವಿ ಖರೀದಿ ಬಗ್ಗೆ ಆಲೋಚನೆ ಮಾಡುತ್ತಿರುವವರಾದರೆ, ಈಗೆಲ್ಲ ಇಂಚಿಗೆ ರು. 500ಕ್ಕಿಂತ ಕಡಿಮೆ ದರದಲ್ಲಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಟೀವಿ ದೊರೆಯುತ್ತದೆ. 32 ಇಂಚಿನ ಎಲ್ ಇಡಿ ಟೀವಿ 12,000 ರುಪಾಯಿಗೆಲ್ಲ ಸಿಗುತ್ತದೆ. 65 ಇಂಚಿನ ಟೀವಿ 50 ಸಾವಿರ ರುಪಾಯಿಯಿಂದ ದೊರೆಯುತ್ತದೆ. ಕೇಬಲ್ ಕೂಡ ಸೆಟ್ ಟಾಪ್ ಬಾಕ್ಸ್ ಬಂದಿರುವುದರಿಂದ ಯಾವುದೇ ಟೀವಿ ಖರೀದಿ ಮಾಡಿದರೂ ಸ್ಪಷ್ಟ ಚಿತ್ರ ಬರುವುದರಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಆಗುವುದಿಲ್ಲ. ನಾವು ವಿಶ್ವಾದ್ಯಂತ ಹೆಸರಾದ ಬ್ರ್ಯಾಂಡ್ ಟೀವಿಯನ್ನೇ ಖರೀದಿ ಮಾಡುತ್ತೀವಿ ಅನ್ನೋದಾದರೆ ಆ ಟೀವಿ ಏಳೆಂಟು- ಹತ್ತು ವರ್ಷ ಬಾಳಿಕೆ ಬರಬಹುದಾ? ನೆನಪಿರಲಿ, ಈಗೆಲ್ಲ ಯಾರೂ ನಾಲ್ಕು- ಹೆಚ್ಚೆಂದರೆ ಐದು ವರ್ಷಕ್ಕೆ ಟೀವಿಯನ್ನು ಬದಲಾವಣೆ ಮಾಡುತ್ತಾರೆ. ಆ ಕಾರಣಕ್ಕೆ ಒಂದಕ್ಕೆ ಎರಡರಷ್ಟು ಹಣ ಕೊಟ್ಟು ಟೀವಿ ಖರೀದಿಸಬೇಕಾ ಎಂಬ ಪ್ರಶ್ನೆ ಬರುತ್ತದೆ.

ಮನೆಯಲ್ಲೇ ಥಿಯೇಟರ್ ಮಾಡಬಹುದು
ಈಗ ಮತ್ತೊಂದು ಸಾಧ್ಯತೆ ತಿಳಿದುಕೊಂಡು ಬಿಡಿ. ಮನೆಯು ವಿಶಾಲವಾಗಿದ್ದು, ದೊಡ್ಡದಾಗಿ ಸ್ಕ್ರೀನ್ ಇರಬೇಕು ಅಂದುಕೊಳ್ಳುವವರು ಪ್ರೊಜೆಕ್ಟರ್ ಖರೀದಿ ಮಾಡಿ, ಮನೆಗಳಲ್ಲೇ ಹದಿನೈದರಿಂದ ಇಪ್ಪತ್ತು ಮಂದಿ ಕೂತು ನೋಡಬಹುದಾದ ಹೋಮ್ ಥಿಯೇಟರ್ ಮಾಡಿಕೊಳ್ಳುತ್ತಿದ್ದಾರೆ. ಬಹಳ ಹಿಂದಿನಿಂದ ಈ ರೀತಿಯ ಪ್ಯಾಷನ್ ಇರುವವರು ಇದ್ದರು. ಆದರೆ ಪ್ರೊಜೆಕ್ಟರ್, ಸ್ಕ್ರೀನ್ ಮತ್ತು ಮನೆಯಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ ಹಾಗೂ ಮೇಂಟೇನೆನ್ಸ್ ಸಿಕ್ಕಾಪಟ್ಟೆ ದುಬಾರಿ ಆಗುತ್ತಿತ್ತು. ಆ ಕಾರಣಕ್ಕೆ ಜನ ಹಿಂಜರಿಯುತ್ತಿದ್ದರು. ಸದ್ಯಕ್ಕೆ 4K ಪ್ರೊಜೆಕ್ಟರ್ ಬರುತ್ತಿದೆ. ಜತೆಗೆ ಮನೆಗಳಲ್ಲಿ ಇಂಥ ಒಂದು ಹೋಮ್ ಥಿಯೇಟರ್ ಮಾಡಿಕೊಳ್ಳುವುದು ಅತಿ ದುಬಾರಿ ಎನಿಸುತ್ತಿಲ್ಲ. ಆರಂಭದಲ್ಲಿ ಹೇಳಿದ ಮಾತನ್ನು ಒಮ್ಮೆ ನೆನಪಿಸಿಕೊಳ್ಳಿ: ಈ ರೀತಿ ಹೋಮ್ ಥಿಯೇಟರ್ ಗಳು ಇರುವುದರಿಂದಲೇ ಥಿಯೇಟರ್ ಗಳಿಗೆ ಜನರು ಬರುವುದು ಕಡಿಮೆ ಆಗಿದೆ.

ಯಾವ ಅಳತೆಯ ಕೋಣೆಗೆ ಯಾವ ಟೀವಿ?
ದೊಡ್ಡ ಟೀವಿ ತೆಗೆದುಕೊಳ್ಳಬೇಕು, ವಿಪರೀತ ಫೀಚರ್ ಇರಬೇಕು... ಇಂಥ ಬೇಕುಗಳನ್ನೆಲ್ಲ ಪಕ್ಕಕ್ಕಿಟ್ಟು ಯೋಚನೆ ಮಾಡಿ. ಮನೆಯಲ್ಲಿ ಎಲ್ಲಿ ಟೀವಿಯನ್ನು ಇಡುತ್ತೀರಿ? ಆ ಸ್ಥಳದಲ್ಲಿ ಎಷ್ಟು ದೂರದಿಂದ ಟೀವಿಯನ್ನು ನೋಡುತ್ತೀರಿ ಎಂಬುದರ ಆಧಾರದಲ್ಲಿ ಸ್ಕ್ರೀನ್ ಸೈಜ್ ನಿರ್ಧಾರ ಮಾಡಿ. ಒಂದು ಪುಟ್ಟ ಕೋಣೆಯಲ್ಲಿ 65 ಅಥವಾ 75 ಇಂಚಿನ ಟೀವಿ ತಂದಿಟ್ಟುಕೊಂಡರೆ ಕಣ್ಣಿಗೆ ದೊಡ್ಡ ಸಮಸ್ಯೆ ಆಗುತ್ತದೆ. ಆದ್ದರಿಂದ ಟೀವಿಯನ್ನು ಎಲ್ಲಿಡುತೀರಿ? ಆ ಕೋಣೆ ಅಥವಾ ಹಾಲ್ ನ ಅಳತೆ ಎಷ್ಟು? ಎಲ್ ಇಡಿ ಖರೀದಿ ಮಾಡಬೇಕೋ ಅಥವಾ ಒಎಲ್ ಇಡಿ ಅಥವಾ ತ್ರೀಡಿ ಯಾವುದು? ಒಂದು ದಿನದಲ್ಲಿ ಟೀವಿ ನೋಡುವ ಸಲುವಾಗಿ ಎಷ್ಟು ಸಮಯ ಬಿಡುವು ಸಿಗುತ್ತದೆ? ಧಾರಾವಾಹಿ ನೋಡ್ತೀರೋ ಅಥವಾ ಸಿನಿಮಾ ನೋಡ್ತೀರೋ ಅಥವಾ ಸ್ಪೋರ್ಟ್ಸ್ ನೋಡುವ ಸಲುವಾಗಿಯೋ ಎಂಬುದನ್ನು ತೀರ್ಮಾನ ಮಾಡಿಕೊಳ್ಳಿ. ದೊಡ್ಡ ಸ್ಕ್ರೀನ್ ನ ಟೀವಿ ಬೇಕು ಅಂತಾದರೆ, ಸಾಮಾನ್ಯವಾದ ಎಲ್ ಇಡಿ ಟೀವಿಗೆ ಮೂರ್ನಾಲ್ಕು ಸಾವಿರದ ಒಂದು ಡಿವೈಸ್ ಹಾಕಿಕೊಂಡರೂ ಅದು ಸ್ಮಾರ್ಟ್ ಟೀವಿ ಆಗುತ್ತದೆ. ಲಕ್ಷಾಂತರ ರುಪಾಯಿ ಖರ್ಚು ಮಾಡುವುದಕ್ಕೂ ನಾವು ರೆಡಿ, ಮನೆಯಲ್ಲಿ ಕುಟುಂಬದ ಜತೆ ಕೂತು, ಸ್ಪೋರ್ಟ್ಸ್- ಸಿನಿಮಾ ನೋಡುವುದು ನಿಮ್ಮ ಉದ್ದೇಶವಾದರೆ, ಮನೆಯಲ್ಲಿ ಅವಕಾಶವೂ ಇದ್ದರೆ ಪ್ರೊಜೆಕ್ಟರ್ ಖರೀದಿ ಮಾಡಿ, 'ಹೋಮ್ ಥಿಯೇಟರ್' ಮಾಡಿಕೊಳ್ಳಿ.