For Quick Alerts
ALLOW NOTIFICATIONS  
For Daily Alerts

ಈ 4 ಮನಸ್ಥಿತಿಯವರಿಗೆ ಗೆಲುವು ಅಸಾಧ್ಯ ಏಕೆ ಗೊತ್ತಾ?

By ಅನಿಲ್ ಆಚಾರ್
|

ಪ್ರಯತ್ನಗಳು ವಿಫಲ ಆಗಬಹುದು, ಆದರೆ ಪ್ರಯತ್ನ ಮಾಡದಿದ್ದರೆ ವೈಫಲ್ಯ ನಿಶ್ಚಿತ ಎಂಬ ಮಾತೊಂದಿದೆ. ತುಂಬ ದೊಡ್ಡ ಗುರಿಗಳನ್ನು ಇರಿಸಿಕೊಂಡವರಲ್ಲಿ ಬಹು ಪಾಲು ಮಂದಿ ಅದನ್ನು ತಲುಪಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಏನು ಗೊತ್ತಾ? ಆ ಗುರಿಯನ್ನು ತಲುಪುವ ಬಗ್ಗೆ ಸ್ವತಃ ಆ ವ್ಯಕ್ತಿಗೇ ನಂಬಿಕೆ ಇರುವುದಿಲ್ಲ.

ಈ ಲೇಖನದಲ್ಲಿ ಗುರಿ ತಲುಪುವವರಲ್ಲಿ ಹಾಗೂ ಅದನ್ನು ತಲುಪಲು ಸಾಧ್ಯವಾಗದವರಲ್ಲಿ ಏನು ವ್ಯತ್ಯಾಸ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸಾಧಕರು ಜೀವಿಸಿದ ರೀತಿಯೇ ಎಲ್ಲರಿಗೂ ಪಾಠ. ಅಂಥ ಜೀವನಗಳಿಂದ ಹೆಕ್ಕಿ ತೆಗೆದ ನಾಲ್ಕು ಪಾಠ ಇಲ್ಲಿದೆ: ಕಲಿಯುವ ಮನಸ್ಸಿರುವವರಿಗಾಗಿ.

ಸುಸ್ತಾಗುವ ಮುಂಚೆಯೇ ಸುಧಾರಿಸಿಕೊಳ್ಳುವುದಕ್ಕೆ ಆರಂಭಿಸುತ್ತೇವೆ

ಸುಸ್ತಾಗುವ ಮುಂಚೆಯೇ ಸುಧಾರಿಸಿಕೊಳ್ಳುವುದಕ್ಕೆ ಆರಂಭಿಸುತ್ತೇವೆ

ರತನ್ ಟಾಟಾ, ವಾರೆನ್ ಬಫೆಟ್ ಸೇರಿದಂತೆ ವ್ಯವಹಾರ ಜಗತ್ತಿನ ಸಾಧಕರು ವಿರಮಿಸುವಂತೆ ಕಾಣುವುದೇ ಇಲ್ಲ. ಇವರಿಗೆ ವಯಸ್ಸು ಎಂಬುದು ಸಂಖ್ಯೆ ಅಷ್ಟೇ. ಮುಖದ ಮೇಲೆ ಸುಸ್ತಿನ ಗೆರೆಗಳು ಕಾಣುವುದೇ ಇಲ್ಲ. ಹೊಸ ಸಾಹಸಗಳು, ಕೆಲಸಗಳಲ್ಲಿ ತೊಡಗಿಕೊಳ್ಳುವುದೇ ಇವರಿಗೆ ಖುಷಿಯ ಸಂಗತಿ. ಆದರೆ ತುಂಬ ದೊಡ್ಡ ಕನಸಿನ ಬೆನ್ನಟ್ಟಿ ಹೊರಟ ಹಲವರಲ್ಲಿ ಸುಸ್ತಾಗುವ ಮುನ್ನವೇ ಸುಧಾರಿಸಿಕೊಳ್ಳುವ ಮನಸ್ಥಿತಿ ಇಣುಕುತ್ತದೆ. ವ್ಯವಹಾರವೋ- ಉದ್ಯಮವೋ ಆರಂಭಿಸಿದ ಕೆಲವೇ ತಿಂಗಳು, ವರ್ಷಗಳಲ್ಲಿ ವಾರದ ಬಿಡುವು, ತಿಂಗಳ ರಜಾ ಹಾಗೂ ವರ್ಷಕ್ಕೆ ಇಷ್ಟು ದಿನ ಬಿಡುವು ಎಂದು ವಿಶ್ರಾಂತಿ ಪಡೆಯುವುದಕ್ಕೆ ಆರಂಭಿಸುತ್ತಾರೆ. ದೇಹಕ್ಕಾದ ದಣಿವು ಅದಲ್ಲ. ಇಟ್ಟುಕೊಂಡ ಗುರಿಯ ಮೇಲಿನ ನೋಟ ಆಚೀಚೆ ಆಗುವುದರ ಪರಿಣಾಮ ಅದು. ಗುರಿಯ ಮೇಲೆ ಅರ್ಜುನನ ಏಕಾಗ್ರತೆ ಇಲ್ಲದಿದ್ದಲ್ಲಿ ಫಲಿತಾಂಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ.

ಸೋಲುವ ಮುಂಚೆಯೇ ಸೋಲನ್ನು ಗೆಲ್ಲುವ ಮುಂಚೆಯೇ ಗೆಲುವನ್ನು ಅಪ್ಪಿರುತ್ತೇವೆ

ಸೋಲುವ ಮುಂಚೆಯೇ ಸೋಲನ್ನು ಗೆಲ್ಲುವ ಮುಂಚೆಯೇ ಗೆಲುವನ್ನು ಅಪ್ಪಿರುತ್ತೇವೆ

1983ರ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ್ದ ಅಲ್ಪ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ತಂಡದ ಗೆಲುವಿನ ಬಗ್ಗೆ ನಾಯಕ ಕ್ಲೈವ್ ಲಾಯ್ಡ್ ಗೆ ಅದ್ಯಾವ ಪರಿ ವಿಶ್ವಾಸ ಇತ್ತೆಂದರೆ, ಆರಂಭಿಕ ವಿಕೆಟ್ ಕಳೆದುಕೊಂಡಿದ್ದರೂ ಗೆಲುವಿನ ಸಂಭ್ರಮಾಚರಣೆಗೆ ಸಿದ್ಧತೆ ಆರಂಭಿಸಿದ್ದರಂತೆ. ಆದರೆ ವಿವಿಯನ್ ರಿಚರ್ಡ್ಸ್ ವಿಕೆಟ್ ಕಳೆದುಕೊಂಡ ಮೇಲೆ ಸ್ಥಿತಿಯೇ ಬದಲಾಯಿತು. ಕೊನೆಗೆ ಭಾರತ ಜಯ ಕಂಡಿತು. ಇದೇ ರೀತಿಯಲ್ಲಿ ಸೋಲುವ ಮುನ್ನ ಸೋತ ಹತಾಶ ಭಾವದಿಂದ ಕೆಲಸದಲ್ಲಿ ತೊಡಗುವವರೂ ಇರುತ್ತಾರೆ. ಆದ್ದರಿಂದ ಸೋಲು ಅಥವಾ ಗೆಲುವು ಯಾವುದೋ ಒಂದು ಘಟನೆ, ಸನ್ನಿವೇಶ ಅಥವಾ ನಿರ್ಧಾರಗಳಿಂದ ಮುಗಿದು ಬಿಡುವುದಿಲ್ಲ. ಹಾಗೇ ಸೋಲು ಅಥವಾ ಗೆಲುವು ಪೂರ್ತಿ ಖಾತ್ರಿ ಆಗುವ ತನಕ ಸೆಲಬ್ರೇಟ್ ಮಾಡುವ ಅಗತ್ಯ ಇರುವುದಿಲ್ಲ.

ಸಣ್ಣ ಗಾಳಿಯೂ ಸುನಾಮಿಯಂತೆ ಕಂಡಿರುತ್ತದೆ

ಸಣ್ಣ ಗಾಳಿಯೂ ಸುನಾಮಿಯಂತೆ ಕಂಡಿರುತ್ತದೆ

ರಿಸ್ಕ್ ಇಲ್ಲದೆ ಯಾವುದೇ ಸುಲಭಕ್ಕೆ ದಕ್ಕುವುದಿಲ್ಲ. ಆದರೆ ಈ ಅಪಾಯವನ್ನು ಎದುರಿಸುವ ಅಥವಾ ಸ್ವೀಕರಿಸುವ ಮನಸ್ಥಿತಿ ಯಾವ ರೀತಿಯದು ಎಂಬುದು ಬಹಳ ಮುಖ್ಯ. ದೂರದ ಹಾದಿಯನ್ನು ಕ್ರಮಿಸುವಾಗ ಸವಾಲುಗಳು ಸಹ ಸಹಜ. ಆದರೆ ಬಹಳ ಜನ ಸಣ್ಣ ಮಟ್ಟದ ಗಾಳಿಗೂ ಸುನಾಮಿ ಬಂದಂತೆ ಹೆದರುತ್ತಾರೆ. ಆ ಕಾರಣಕ್ಕೆ ಸದಾ ಪ್ಲಾನ್ ಬಿ ಎಂದು ಇಟ್ಟುಕೊಂಡಿರುತ್ತಾರೆ. ಕೆಲಸ ಬಿಟ್ಟು, ವ್ಯಾಪಾರ- ವ್ಯವಹಾರ ಶುರು ಮಾಡುವಾಗಲೇ ಒಂದು ವೇಳೆ ಇದು ಕ್ಲಿಕ್ ಆಗದಿದ್ದಲ್ಲಿ ವಾಪಸ್ ಅದೇ ಕೆಲಸಕ್ಕೆ ಹಿಂತಿರುಗಲು ಏನು ಬೇಕೋ ಎಲ್ಲ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅದೇ ರೀತಿ ಐಎಎಸ್ ನಂತಹ ಪರೀಕ್ಷೆ ತೆಗೆದುಕೊಳ್ಳುವವರು, ಹೊಸ ವೃತ್ತಿ ಸ್ವೀಕರಿಸುವವರು ಸಣ್ಣ ಗಾಳಿ ಬೀಸಿದರೂ ಸುನಾಮಿಯಂತೆ ಹೆದರಿ, ಆ ವ್ಯವಹಾರ, ವೃತ್ತಿ ಅಥವಾ ಹೊಸ ಸವಾಲನ್ನು ಅರ್ಧಕ್ಕೆ ಕೈ ಬಿಟ್ಟು, ಹಳೆಯ ಕೆಲಸಕ್ಕೆ ವಾಪಸಾಗುತ್ತಾರೆ.

ಹಿನ್ನಡೆಗೆ ಬೇರೆಯವರನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ

ಹಿನ್ನಡೆಗೆ ಬೇರೆಯವರನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ

ಅಂದುಕೊಂಡಂತೆ ಏನಾದರೂ ಆಗದಿದ್ದಲ್ಲಿ, ಸಮಸ್ಯೆಗಳು ಎದುರಾಗುವಂತಿದ್ದರೆ ಆ ವೈಫಲ್ಯದ ಹೊಣೆಯನ್ನು ಇನ್ನೊಬ್ಬರ ತಲೆಗೆ ಕಟ್ಟುವ ಸ್ವಭಾವದಿಂದ ಸೋಲನ್ನು ಬಹಳ ಬೇಗ ಒಪ್ಪಿಕೊಳ್ಳುವವರು ಹೆಚ್ಚು. ಅದು ಹೇಗೆ ಶುರುವಾಗುತ್ತದೆ ಅಂದರೆ, ನನ್ನ ಜಾತಕದಲ್ಲಿ ಈ ದೋಷ ಇತ್ತಂತೆ. ಅದಕ್ಕೆ ನನ್ನ ಅಪ್ಪ- ಅಮ್ಮ ಶಾಂತಿ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂಬಲ್ಲಿಂದ ಆರಂಭವಾಗುತ್ತದೆ. ಓದಿದ ಶಾಲೆ, ಕಲಿತ ಕಾಲೇಜು, ಜೊತೆಗಿರುವ ಪಾರ್ಟನರ್, ಹೆಂಡತಿ, ದುಡ್ಡು ಕೊಡದ ಅತ್ತೆ- ಮಾವ, ಆಸ್ತಿ ಕೊಡದ ಅಪ್ಪ- ಅಮ್ಮ, ವಾಸ್ತು ದೋಷ ಹೀಗೆ ಏನೆಲ್ಲ ಕಾರಣಗಳನ್ನು ಹುಡುಕಿ, ಅದರ ಮೇಲೆ ಹೊಣೆ ವರ್ಗಾವಣೆ ಮಾಡುವ ಮನಸ್ಥಿತಿಯಿಂದ ಬಹಳ ಜನಕ್ಕೆ ತಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಯಾರಿಗೆ ತಮ್ಮ ವೈಫಲ್ಯಕ್ಕೆ ತಾವೇ ಹೊಣೆ ಎಂದು ಹೇಳಿಕೊಳ್ಳುವ ಮನಸ್ಥಿತಿ ಇರುವುದಿಲ್ಲವೋ ಅಂಥವರಿಗೆ ಗೆಲುವು ಅಸಾಧ್ಯ. ಏಕೆಂದರೆ, ಇಂಥವರು ವಸ್ತುನಿಷ್ಠವಾಗಿ ತಮ್ಮ ತಪ್ಪನ್ನು ಎಂದೂ ವಿಮರ್ಶೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಆಗ ತಿದ್ದುಕೊಳ್ಳುವುದಕ್ಕೂ ಆಗಲ್ಲ.

English summary

4 Obstacles While Reaching Big Goals: How To Cope Up From Those?

Here is the 4 obstacles to reach goals for an individual and also know how to cope up from those challenges.
Story first published: Sunday, June 14, 2020, 11:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X