For Quick Alerts
ALLOW NOTIFICATIONS  
For Daily Alerts

ನವರತ್ನ, ಮಹಾರತ್ನ ಷೇರುಗಳು ಕಡ್ಲೇಪುರಿ ಬೆಲೆಗೆ: ಇಲ್ಲಿವೆ 12 ಆಯ್ಕೆ

By ಕೆ. ಜಿ. ಕೃಪಾಲ್
|

ಇತ್ತೀಚಿನ ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ನೂರಾರು ಪಾಯಿಂಟ್ ಕುಸಿಯುವುದು, ಏರಿಕೆ ಕಾಣುವುದು ಸಾಮಾನ್ಯ ವಿದ್ಯಮಾನ ಆಗಿದೆ. ಈ ಹಿಂದೆಲ್ಲ ಲಾಂಗ್ ಟರ್ಮ್ ಇನ್ವೆಸ್ಟ್ ಮೆಂಟ್ ಎಂಬ ಮಂತ್ರವೊಂದನ್ನು ಸದಾ ಕೇಳಿಸಿಕೊಳ್ಳುತ್ತಿದ್ದಿವಿ. ಆದರೆ ಈಗ ಲಾಭ ಬಂದ ತಕ್ಷಣ ಅದನ್ನು ನಗದು ಮಾಡಿಕೊಳ್ಳಬೇಕು ಅನ್ನೋದೇ ಮೂಲಮಂತ್ರ ಆಗಿದೆ.

ಆ ಕಾರಣಕ್ಕೆ ಷೇರು ಮಾರ್ಕೆಟ್ ನಲ್ಲಿ ಈ ಪರಿಯ ರಭಸ, ಏರಿಳಿತ. ಲಾಭ ಬಂದ ತಕ್ಷಣ ಅದನ್ನು ನಗದು ಮಾಡಿಕೊಳ್ಳುವುದರ ಹಿಂದಿನ ಮತ್ತೊಂದು ಕಾರಣ, ಗರಿಷ್ಠ ಮಟ್ಟದಲ್ಲಿ ಇರುವ ಸೂಚ್ಯಂಕಗಳು (ಸೆನ್ಸೆಕ್ಸ್, ನಿಫ್ಟಿ). 28.02.2020ರಂದು ಉಂಟಾದ ಷೇರುಪೇಟೆಯ ರಕ್ತದೋಕುಳಿ ಹೆಚ್ಚಿನವರಿಗೆ ಆತಂಕವುಂಟು ಮಾಡಿದೆ.

5 ದಿನದಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್‌ ಇಳಿಕೆ, 12 ಲಕ್ಷ ಕೋಟಿ ರುಪಾಯಿ ಕಣ್ಮರೆ5 ದಿನದಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್‌ ಇಳಿಕೆ, 12 ಲಕ್ಷ ಕೋಟಿ ರುಪಾಯಿ ಕಣ್ಮರೆ

ಈ ರೀತಿಯ ಭರ್ಜರಿ ಕುಸಿತದ ಸಮಯದಲ್ಲೇ 'ಆಪತ್ತಿನಲ್ಲಿ ಅವಕಾಶ ಕಾಣು' ಎಂಬುದನ್ನು ಅಳವಡಿಸಿಕೊಳ್ಳಬೇಕು. ಸಾಧನೆ ಆಧಾರಿತ ಕಂಪೆನಿಗಳು ಸುಲಭ ಬೆಲೆಯಲ್ಲಿ ದೊರೆಯುತ್ತಿರುವಾಗ ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕೆಲವು ದಿನಗಳಿಂದ ವಿದೇಶಿ ಹೂಡಿಕೆದಾರರ ಸತತವಾದ ಮಾರಾಟ, ಕೊರೋನಾ ವೈರಸ್ ಕಾರಣ ಜಾಗತಿಕ ಪೇಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬಂಗಾರದಂತಹ ಕಂಪೆನಿಗಳಿಗೂ ಮಾನ್ಯತೆ ದೊರೆಯದಾಗಿದೆ.

ಈ ಸಂದರ್ಭದಲ್ಲಿ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಾರ್ವಜನಿಕ ಉದ್ದಿಮೆಗಳ ಬಗ್ಗೆ ಗಮನಹರಿಸುವುದು ಅವಶ್ಯಕ. ನವರತ್ನ, ಮಹಾರತ್ನ, ಮಿನಿರತ್ನ ಕಂಪೆನಿಗಳು ಅತಿಯಾದ ರಿಯಾಯಿತಿ ಬೆಲೆಯಲ್ಲಿ, ಹೆಚ್ಚಿನವು ವಾರ್ಷಿಕ- ಸಾರ್ವಕಾಲಿಕ ಕನಿಷ್ಠ ದರದಲ್ಲಿ ಲಭ್ಯವಿವೆ. ಇಂತಹ ಕಂಪೆನಿಗಳಲ್ಲಿ ಬ್ಯಾಂಕ್ ಡಿಪಾಜಿಟ್ಟುಗಳಂತೆ ಹೂಡಿಕೆ ಮಾಡಿ, ನಿರಂತರವಾಗಿ ಲಾಭಾಂಶ ಪಡೆಯಬಹುದು ಮತ್ತು ಷೇರಿನ ಬೆಲೆ ಗಗನಕ್ಕೇರಿದಾಗ ಬಂಡವಾಳ ಲಾಭವನ್ನು ಗಳಿಸಬಹುದು.

ಪತರಗುಟ್ಟಿದ ಷೇರು ಮಾರುಕಟ್ಟೆ; ಕರಗಿದ ಹೂಡಿಕೆದಾರರ ಸಂಪತ್ತುಪತರಗುಟ್ಟಿದ ಷೇರು ಮಾರುಕಟ್ಟೆ; ಕರಗಿದ ಹೂಡಿಕೆದಾರರ ಸಂಪತ್ತು

ಷೇರುಪೇಟೆಯಲ್ಲಿ ಉತ್ತಮ ಕಂಪೆನಿ ಯಾವುದು ಎಂದು ಹುಡುಕಿ, ಹೂಡಿಕೆ ಮಾಡುವುದಕ್ಕೆ ಮುಖ್ಯ ಮಾನದಂಡಗಳು ಹೀಗಿವೆ: ಕಂಪೆನಿಗಳು ಸಾಧಿಸುವ ಉತ್ತಮ ಫಲಿತಾಂಶ, ಆ ಮೂಲಕ ನೀಡಬಹುದಾದ ಡಿವಿಡೆಂಡ್, ಬೋನಸ್ ಷೇರುಗಳು. ಸದ್ಯದ ಈ ಪರಿಸ್ಥಿತಿಗೆ ಸರ್ಕಾರದ ಕೆಲವು ಕ್ರಮಗಳು ಕಾರಣವಾದರೂ ಅತಿಯಾದ ಕನಿಷ್ಠ ಬೆಲೆಗೆ ಜಾರಿರುವುದು ಉತ್ತಮ- ಸಹಜ ಹೂಡಿಕೆಗೆ ಅವಕಾಶ ಎನ್ನಬಹುದು.

ಬಂಡವಾಳ ಹಿಂತೆಗೆತದ ಕಾರಣಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೆಚ್ಚಿನ ಸಾಧನೆಯಾಧಾರಿತ ಕಂಪೆನಿಗಳು ಸಣ್ಣ ಹೂಡಿಕೆದಾರರಿಗೆ ಅಪೂರ್ವವಾದ ಅವಕಾಶ. ಆದರೆ ದೀರ್ಘಕಾಲೀನ ಹೂಡಿಕೆ ಎಂದು ನಿರ್ಧರಿಸಿದ್ದರೂ ಪೇಟೆ ಒದಗಿಸಿದ ಲಾಭ ಗಳಿಕೆ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ಅವಶ್ಯವಾಗಿದೆ.

ಸಾರ್ವಜನಿಕ ವಲಯದ ಕೆಲವು ಕಂಪೆನಿಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ನೆನಪಿರಲಿ, ಇದು ಖರೀದಿ ಮಾಡುವುದಕ್ಕೆ ಶಿಫಾರಸು ಅಲ್ಲ. ಈ ಅಂಶಗಳನ್ನು ತುಲನೆ ಮಾಡಿದ ನಂತರ ಪೇಟೆಯ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ, ಸ್ವಂತವಾಗಿ ನಿರ್ಧರಿಸಿ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

ಈ ಕಂಪೆನಿಯು ಭಾರತತಕ್ಕೆ ಅಗತ್ಯ ಇರುವ ಸುಮಾರು ಶೇಕಡಾ 35ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿದೆ. ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪೆನಿಯನ್ನು ವಹಿವಾಟಿನ ಗಾತ್ರದಲ್ಲಿ ಹಿಂದಿಕ್ಕಿದೆ ಎಂಬ ಅಂಶ ಹೊರಬಿದ್ದಿದೆ. ಅಂದರೆ ಈ ಕಂಪೆನಿಯು ರಿಲಯನ್ಸ್ ಇಂಡಸ್ಟ್ರೀಸ್ ಮಟ್ಟದಲ್ಲಿದೆ. ರು. 10ರ ಮುಖಬೆಲೆ ಷೇರಿನ ಬೆಲೆ ವಾರ್ಷಿಕ ಕನಿಷ್ಠ ಮಟ್ಟದಲ್ಲಿದ್ದು, ಈಗ ರು. 105ರ ಸಮೀಪವಿದೆ. ಈ ಕಂಪೆನಿಯು ಷೇರುದಾರರಿಗೆ ಆಕರ್ಷಕವಾದ ಕಾರ್ಪೊರೇಟ್ ಫಲಗಳನ್ನು ನೀಡಿದೆ. 2018ರ ಮಾರ್ಚ್ ನಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿದೆ, ಡಿಸೆಂಬರ್ 2018ರಲ್ಲಿ ಷೇರುಗಳನ್ನು ಹಿಂಕೊಳ್ಳುವ ಮೂಲಕವೂ ಷೇರುದಾರರಿಗೆ ಲಾಭ ಮಾಡಿಕೊಟ್ಟಿದೆ. ಈ ವರ್ಷ ಮಧ್ಯಂತರ ಲಾಭಾಂಶವನ್ನು ಘೋಷಿಸಿಲ್ಲ. ಆ ಕಾರಣಕ್ಕೆ ಆಕರ್ಷಕವಾದ ಲಾಭಾಂಶ ನಿರೀಕ್ಷಿಸಬಹುದಾಗಿದೆ.

ಎನ್ ಎಂಡಿಸಿ ಲಿಮಿಟೆಡ್

ಎನ್ ಎಂಡಿಸಿ ಲಿಮಿಟೆಡ್

ಎನ್ ಎಂಡಿಸಿ ಕಂಪೆನಿಯ ರು. 1ರ ಮುಖಬೆಲೆಯ ಷೇರನ್ನು 2010ರಲ್ಲಿ ಪ್ರತಿ ಷೇರಿಗೆ ರು. 300ರಂತೆ ವಿತರಿಸಿತ್ತು. ಮತ್ತೊಮ್ಮೆ 2018ರ ಜನವರಿಯಲ್ಲಿ ರು. 153.50ರ ಕನಿಷ್ಠ ಬೆಲೆಯಲ್ಲಿ ಷೇರು ವಿತರಿಸಿತು. ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ರು.74.80 ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿತು. ಈಗಿನ ದಿನಗಳಲ್ಲಿ ನಿರಂತರವಾಗಿ ಷೇರಿನ ದರ ಕುಸಿದು, ರು. 88.45 ಕ್ಕೆ ಕುಸಿದು, ನಂತರ ಸ್ವಲ್ಪ ಚೇತರಿಕೆ ಕಂಡು ಸದ್ಯಕ್ಕೆ ರು. 92ರ ಸಮೀಪವಿದೆ. ಈ ಕಂಪೆನಿಯು ಫೆಬ್ರವರಿ ತಿಂಗಳಲ್ಲಿ ರು. 1ರ ಮುಖಬೆಲೆಯ ಪ್ರತಿ ಷೇರಿಗೆ ರು. 5.29 ರಂತೆ ಮಧ್ಯಂತರ ಲಾಭಾಂಶವನ್ನು ವಿತರಿಸಿದೆ. ಒಂದು ತಿಂಗಳಲ್ಲಿ ರು. 125ರ ಸಮೀಪದಿಂದ ರು.89ರ ವರೆಗೂ ಕುಸಿದಿರುವ ಈ ಕಂಪೆನಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಹೆಚ್ಚಿನ ಅಂತಿಮ ಲಾಭಾಂಶ ನಿರೀಕ್ಷಿಸಬಹುದು.

ಆರ್ ಇ ಸಿ ಲಿಮಿಟೆಡ್

ಆರ್ ಇ ಸಿ ಲಿಮಿಟೆಡ್

ಆರ್ ಇಸಿ (ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್) ಲಿಮಿಟೆಡ್ ಕಂಪೆನಿಯು ಪವರ್ ವಲಯದ ಸಾರ್ವಜನಿಕ ಉದ್ದಿಮೆಯಾಗಿದ್ದು, ಶೇಕಡಾ 52.63ರಷ್ಟು ಪಾಲನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಂಪೆನಿಯ ಷೇರಿನ ಬೆಲೆ ರು. 118ರ ಸಮೀಪವಿದೆ. ಒಂದೇ ತಿಂಗಳಲ್ಲಿ ರು. 158ರ ಸಮೀಪದಿಂದ ರು. 116.75ರ ವಾರ್ಷಿಕ ಕನಿಷ್ಠಕ್ಕೆ ಜಾರಿರುವ ಸಾಧನೆಯಾಧಾರಿತ ಕಂಪೆನಿಯಾಗಿದೆ. ಫೆಬ್ರವರಿ 11ರಂದು ರು. 10ರ ಮುಖಬೆಲೆಯ ಪ್ರತಿ ಷೇರಿಗೆ ರು.11ರಂತೆ ಮಧ್ಯಂತರ ಲಾಭಾಂಶವನ್ನು ವಿತರಿಸಿದೆ. ಮಾರ್ಚ್ ನಂತರದಲ್ಲಿ ಅಂತಿಮ ಲಾಭಾಂಶವನ್ನು ನಿರೀಕ್ಷಿಸಬಹುದು. ಈ ಕಂಪೆನಿಯನ್ನು ಮತ್ತೊಂದು ಪವರ್ ವಲಯದ ಪವರ್ ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ವಿಲೀನಗೊಳಿಸುವ ಯೋಜನೆ ಜಾರಿಯಾಗಬೇಕಾಗಿದೆ. 2016ರಲ್ಲಿ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ವಿತರಿಸಿದೆ.

ಕೋಲ್ ಇಂಡಿಯಾ ಲಿಮಿಟೆಡ್

ಕೋಲ್ ಇಂಡಿಯಾ ಲಿಮಿಟೆಡ್

2010ರಲ್ಲಿ ನವರತ್ನ ಕಂಪೆನಿ ಕೋಲ್ ಇಂಡಿಯಾ ಪ್ರತಿ ಷೇರಿಗೆ ರು. 245ರಂತೆ ವಿತರಣೆ ಮಾಡಿತು. ಸದ್ಯಕ್ಕೆ ವಾರ್ಷಿಕ ಕನಿಷ್ಠ ಬೆಲೆಯ ಸಮೀಪವಿರುವ ಈ ಷೇರು 2019ರ ಜೂನ್ ತಿಂಗಳಲ್ಲಿ ರು.270ರ ವರೆಗೂ ತಲುಪಿ, ವಾರ್ಷಿಕ ಗರಿಷ್ಠ ದಾಖಲಿಸಿತ್ತು. ಈ ಷೇರು ಮೇ 2011ರಲ್ಲಿ ರು. 422ರ ವರೆಗೂ ಏರಿಕೆ ಕಂಡು, ವಿಜೃಂಭಿಸಿತು. ಅಲ್ಲಿಂದ ತನ್ನ ಸ್ಥಾನವನ್ನು ಕಳೆದುಕೊಂಡಿತು. ಈ ಕಂಪೆನಿಯು ಒಂದು ಸಮಯದಲ್ಲಿ ಸೆನ್ಸೆಕ್ಸ್ ನ ಭಾಗವಾಗಿದ್ದು, ನಂತರ ಅದರಿಂದ ಹೊರಬಂದಿದೆ. ದೇಶದ ಶೇಕಡಾ 80ಕ್ಕೂ ಹೆಚ್ಚಿನ ಕಲ್ಲಿದ್ದಲಿನ ಅಗತ್ಯವನ್ನು ಪೂರೈಸುವ ಈ ಕಂಪೆನಿ ಷೇರು ವಿತರಣೆ ಬೆಲೆಗಿಂತ ಕಡಿಮೆ ದರದಲ್ಲಿ ಅಂದರೆ ರು. 169ರ ಸಮೀಪ ವಹಿವಾಟಾಗುತ್ತಿದೆ. 2018ರಲ್ಲಿ ಪ್ರತಿ ಷೇರಿಗೆ ರು. 16.50, 2019ರಲ್ಲಿ ಪ್ರತಿ ಷೇರಿಗೆ ರು. 13.10ರಂತೆ ಲಾಭಾಂಶವನ್ನು ವಿತರಿಸಿದ್ದಲ್ಲದೆ, ಪ್ರತಿ ಷೇರಿಗೆ ರು. 235ರಂತೆ ಬೈಬ್ಯಾಕ್ ಮಾಡಿದೆ. ಈ ಕಂಪೆನಿಯು ಮಾರ್ಚ್ 6ರಂದು ಮಧ್ಯಂತರ ಲಾಭಾಂಶ ವಿತರಣೆಯನ್ನು ಘೋಷಿಸುವ ಕಾರ್ಯಸೂಚಿ ಹೊರಬಿದ್ದಿದ್ದು, ಲಾಭಾಂಶ ವಿತರಣೆಗೆ ಮಾರ್ಚ್ 17 ನಿಗದಿತ ದಿನವಾಗಿದೆ.

ಗೇಲ್ (ಇಂಡಿಯಾ) ಲಿಮಿಟೆಡ್

ಗೇಲ್ (ಇಂಡಿಯಾ) ಲಿಮಿಟೆಡ್

ಗೇಲ್ (ಇಂಡಿಯಾ) ಲಿಮಿಟೆಡ್ ಸಾರ್ವಜನಿಕ ವಲಯದ ಮಹಾರತ್ನ ಕಂಪೆನಿಯಾಗಿದ್ದು, ಕೇಂದ್ರ ಸರ್ಕಾರವು ಈ ಕಂಪೆನಿಯಲ್ಲಿ ಶೇಕಡಾ 52.13ರಷ್ಟು ಪಾಲನ್ನು ಹೊಂದಿದೆ. ಕಳೆದ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಕಂಪೆನಿಯು ಸ್ವಲ್ಪ ಸುಧಾರಣೆ ಕಂಡಿದ್ದರೂ ಎ ಜಿ ಆರ್ ವಿಷಯದಲ್ಲಿ ಗೊಂದಲ ನಿವಾರಣೆ ಆಗಬೇಕಾಗಿದೆ. ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರು. 6.40 ಮಧ್ಯಂತರ ಲಾಭಾಂಶವನ್ನು ವಿತರಿಸಿದೆ. ಪ್ರತಿ ವರ್ಷವೂ ಆಕರ್ಷಕ ಲಾಭಾಂಶವನ್ನು ವಿತರಿಸುವ ಈ ಕಂಪೆನಿ ಹಿಂದಿನ ವರ್ಷ 1:1ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಕಳೆದ ಒಂದು ತಿಂಗಳಲ್ಲಿ ರು. 132ರ ಸಮೀಪದಿಂದ ಕುಸಿದಿರುವ ಈ ಷೇರು ಶುಕ್ರವಾರ 28ರಂದು ರು. 102ರ ಸಮೀಪಕ್ಕೆ ಕುಸಿದಿತ್ತು. ಸದ್ಯ ರು. 105ರ ಸಮೀಪವಿರುವ ಈ ಕಂಪೆನಿ ಷೇರಿನ ವಾರ್ಷಿಕ ಗರಿಷ್ಠ ಮಟ್ಟ ರು. 180.

ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪೆನಿ ಲಿಮಿಟೆಡ್

ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪೆನಿ ಲಿಮಿಟೆಡ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನವರತ್ನ ಕಂಪೆನಿಯಾಗಿದ್ದು, 2018ರ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರು. 1,215ರಲ್ಲಿ ಸಾರ್ವಜನಿಕ ಷೇರು ವಿತರಣೆ ಮಾಡಿತು. ನಂತರದ ದಿನಗಳಲ್ಲಿ ಷೇರಿನ ಬೆಲೆ ಸತತವಾದ ಇಳಿಕೆಯತ್ತ ಸಾಗಿದೆ. ಸದ್ಯಕ್ಕೆ ರು. 685ರ ಸಮೀಪವಿರುವ ಈ ಕಂಪೆನಿ ಷೇರು ಹೂಡಿಕೆದಾರರ ಸುಮಾರು ಶೇಕಡಾ 45ರಷ್ಟು ಬಂಡವಾಳವನ್ನು ನಾಶಗೊಳಿಸಿದೆ. ಹಿಂದಿನ ವರ್ಷದ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರು. 19.80ರಂತೆ ಲಾಭಾಂಶ ವಿತರಿಸಿತ್ತು. ಈ ವರ್ಷವೂ ಉತ್ತಮವಾದ ಲಾಭಾಂಶವನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ವಿತರಣೆಯ ಬೆಲೆಗಿಂತ ಹೆಚ್ಚಿನ, ಭಾರಿ ಗಾತ್ರದ ಕುಸಿತ ಕಂಡಿರುವ ಈ ಕಂಪೆನಿಯ ಷೇರು ಬಂಡವಾಳ ವೃದ್ಧಿಗೆ ಉತ್ತಮ ಕೊಡುಗೆಯಾಗಬಲ್ಲದು.

ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್

ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್

ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಆರ್ಥಿಕ ವಲಯದ ಕಂಪೆನಿಯಾಗಿದ್ದು, ಕೇಂದ್ರ ಸರ್ಕಾರವು ಶೇಕಡಾ 55.99 ಪಾಲನ್ನು ಹೊಂದಿದೆ. ರು. 10ರ ಮುಖಬೆಲೆಯ ಈ ಷೇರಿನ ಡಿಸೆಂಬರ್ 2019ರ ತ್ರೈಮಾಸಿಕದ ಇಪಿಎಸ್ ರು. 6.36 ಮತ್ತು ಮಾರ್ಚ್ 2019ರ ಅಂತ್ಯದಲ್ಲಿ ರು. 26.34 ಇತ್ತು. ಈ ಕಂಪೆನಿ ಫೆಬ್ರವರಿ ಅಂತ್ಯದಲ್ಲಿ ಪ್ರತಿ ಷೇರಿಗೆ ರು. 9.50ರಂತೆ ಮಧ್ಯಂತರ ಲಾಭಾಂಶವನ್ನು ವಿತರಿಸಿದೆ. 2016ರಲ್ಲಿ 1:1 ರ ಅನುಪಾತದ ಬೋನಸ್ ಷೇರನ್ನು ವಿತರಿಸಿದೆ. ಜೂನ್ 2019ರಲ್ಲಿ ರು. 138.80ರ ವಾರ್ಷಿಕ ಗರಿಷ್ಠ ತಲುಪಿದ ನಂತರ ಜನವರಿ 2020ರಲ್ಲಿ ರು. 105ರ ಸಮೀಪಕ್ಕೆ ಕುಸಿದು, ಫೆಬ್ರವರಿ ತಿಂಗಳಲ್ಲಿ ಮತ್ತೆ ರು. 133ಕ್ಕೆ ಪುಟಿದೆದ್ದು, ಲಾಭಾಂಶದ ನಂತರದ ವಹಿವಾಟಿನಲ್ಲಿ ರು. 109ರ ವರೆಗೂ ತಲುಪಿದೆ. ಇತರ ಖಾಸಗಿ ವಲಯದ ಖ್ಯಾತ ಕಂಪೆನಿಗಳಿಗಿಂತ ಹೆಚ್ಚಿನ ಲಾಭ ಗಳಿಸುತ್ತಿರುವ ಈ ಕಂಪೆನಿಯ ಷೇರಿನ ಬೆಲೆ ಪಾತಾಳಕ್ಕೆ ಕುಸಿದಿರುವಾಗ ಹೂಡಿಕೆಗೆ ಉತ್ತಮ ಅವಕಾಶವಾಗಿದೆ.

ಆಯಿಲ್ ಇಂಡಿಯಾ ಲಿಮಿಟೆಡ್

ಆಯಿಲ್ ಇಂಡಿಯಾ ಲಿಮಿಟೆಡ್

ಆಯಿಲ್ ಇಂಡಿಯಾ ಲಿಮಿಟೆಡ್ ಕಂಪೆನಿಯು ತೈಲ ಪರಿಶೋಧನೆ ವಲಯಕ್ಕೆ ಸೇರಿದ್ದು, ಕೇಂದ್ರ ಸರ್ಕಾರವು ಶೇಕಡಾ 59.57ರಷ್ಟು ಭಾಗಿತ್ವವನ್ನು ಹೊಂದಿದೆ. ರು. 10ರ ಮುಖಬೆಲೆಯ ಷೇರಿನ ಸದ್ಯದ ಬೆಲೆಯು ರು. 108ರಲ್ಲಿದೆ. ಕಳೆದ ಒಂದು ತಿಂಗಳಲ್ಲಿ ರು. 141 ರಿಂದ ರು. 105ಕ್ಕೆ ಕುಸಿದಿರುವುದು ಪೇಟೆಯ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ. ಫೆಬ್ರವರಿಯಲ್ಲಿ ಈ ಕಂಪೆನಿಯು ಪ್ರತಿ ಷೇರಿಗೆ ರು. 9ರಂತೆ ಮಧ್ಯಂತರ ಲಾಭಾಂಶ ವಿತರಿಸಿದೆ. ಪ್ರತಿ ವರ್ಷವೂ ಈ ರೀತಿಯ ಆಕರ್ಷಕ ಲಾಭಾಂಶ ನೀಡುತ್ತಿರುವ ಕಂಪೆನಿಯ ಷೇರು ಭಾರಿ ಕುಸಿತ ಕಂಡಿರುವುದರಿಂದ ಬ್ಯಾಂಕ್ ಡಿಪಾಜಿಟ್ಟುಗಳಂತೆ ಇಂತಹ ಕಂಪೆನಿಗಳಲ್ಲಿ ಹೂಡಿಕೆ ಮಾಡಿ, ನಿರಂತರವಾಗಿ ಲಾಭಾಂಶ ಪಡೆಯಬಹುದು ಮತ್ತು ಷೇರಿನ ಬೆಲೆ ಏರಿದಾಗ ಬಂಡವಾಳ ಲಾಭವನ್ನು ಗಳಿಸಬಹುದು.

ಇಂಜಿನೀರ್ಸ್  ಇಂಡಿಯಾ ಲಿಮಿಟೆಡ್

ಇಂಜಿನೀರ್ಸ್ ಇಂಡಿಯಾ ಲಿಮಿಟೆಡ್

ಇಂಜಿನೀರ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯು ಸೇವಾ ವಲಯಕ್ಕೆ ಸೇರಿದ್ದು, ಕೇಂದ್ರ ಸರ್ಕಾರವು ಶೇಕಡಾ 51.50 ಪಾಲನ್ನು ಹೊಂದಿದೆ. ರು. 5ರ ಮುಖಬೆಲೆಯ ಷೇರಿನ ಸದ್ಯದ ಬೆಲೆಯು ರು. 70ರಲ್ಲಿದೆ. ಕಳೆದ ಒಂದು ತಿಂಗಳಲ್ಲಿ ರು. 99ರಿಂದ ರು. 70ಕ್ಕೆ ಕುಸಿದಿದೆ. ಫೆಬ್ರವರಿಯಲ್ಲಿ ಈ ಕಂಪೆನಿಯು ಪ್ರತಿ ಷೇರಿಗೆ ರು. 3.60ರಂತೆ ಮಧ್ಯಂತರ ಲಾಭಾಂಶವನ್ನು ವಿತರಿಸಿದೆ. ಪ್ರತಿ ವರ್ಷವೂ ಈ ರೀತಿಯ ಲಾಭಾಂಶ ನೀಡುತ್ತಿರುವ ಕಂಪೆನಿಯ ಷೇರು ಭಾರಿ ಕುಸಿತ ಕಂಡಿದೆ. 2016ರಲ್ಲಿ 1:1 ಅನುಪಾತದ ಬೋನಸ್ ಷೇರು ವಿತರಿಸಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನವರತ್ನ ಕಂಪೆನಿಯಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರವು ಶೇಕಡಾ 55.27 ಪಾಲನ್ನು ಹೊಂದಿದೆ. ಈ ಕಂಪೆನಿ ಷೇರಿನ ಬೆಲೆ ಕಳೆದ ಒಂದು ತಿಂಗಳಿನಲ್ಲಿ ರು. 103ರ ಸಮೀಪದಿಂದ ರು. 73ರ ವರೆಗೂ ಕುಸಿದಿದೆ. ರು. 1ರ ಮುಖಬೆಲೆಯ ಈ ಕಂಪೆನಿ ಷೇರು ನವೆಂಬರ್ 2019ರಲ್ಲಿ ರು. 122ರ ಗರಿಷ್ಠದಲ್ಲಿತ್ತು. 2018ರ ಮಾರ್ಚ್ ನಲ್ಲಿ ಕಂಪೆನಿಯು ತನ್ನ ಷೇರುದಾರರಿಂದ ರು. 182.50ಗೆ ಬೈಬ್ಯಾಕ್ ಮಾಡಿದೆ. ಅಂದರೆ ಕಂಪೆನಿಯ ವ್ಯಾಲ್ಯೂಯೇಷನ್ ಭಾರಿ ಕುಸಿತ ಕಂಡಿದೆ ಎಂದಾಯಿತು. ಫೆಬ್ರವರಿ ತಿಂಗಳಲ್ಲಿ ಪ್ರತಿ ಷೇರಿಗೆ ರು. 1.40ರಂತೆ ಮಧ್ಯಂತರ ಲಾಭಾಂಶವನ್ನು ವಿತರಿಸಿದೆ.

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್

ಒಎನ್ ಜಿಸಿ ಎಂದೇ ಖ್ಯಾತವಾಗಿರುವ ಈ ಕಂಪೆನಿಯು ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮ ಯಶಸ್ಸು ಕಾಣಲು ಹೆಚ್ಚಿನ ಕೊಡುಗೆ ನೀಡಿದೆ. ಅಲ್ಲದೆ 2018ರಲ್ಲಿ ತೈಲ ಮಾರಾಟ ಕಂಪೆನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿಯ ಶೇಕಡಾ 51.11ರ ಪಾಲನ್ನು ಕೇಂದ್ರ ಸರ್ಕಾರದಿಂದ ಖರೀದಿಸಿತು. ಹಾಗಾಗಿ ತನ್ನಲ್ಲಿರುವ ಹೆಚ್ಚುವರಿ ನಿಧಿಯನ್ನು ಬಳಸಿಕೊಂಡಿದ್ದಲ್ಲದೆ ಹೊರಗಿನಿಂದಲೂ ಸಂಪನ್ಮೂಲ ಸಂಗ್ರಹಿಸಿಕೊಂಡು, ರು. 36,915 ಕೋಟಿ ವಿನಿಯೋಗಿಸಿತು. ಹಿಂದಿನ ವರ್ಷ ಎರಡು ಮಧ್ಯಂತರ ಹಾಗೂ ಅಂತಿಮ ಲಾಭಾಂಶಗಳಿಂದ ಒಟ್ಟು ರು. 7ರಷ್ಟು ಲಾಭಾಂಶ ವಿತರಿಸಿತ್ತು. ಕಂಪೆನಿಯ ಆಡಳಿತ ಮಂಡಳಿಯು ಮಾರ್ಚ್ 4ರಂದು ಮಧ್ಯಂತರ ಲಾಭಾಂಶ ಪ್ರಕಟಿಸುವ ಕಾರ್ಯ ಸೂಚಿಯನ್ನು ಹೊಂದಿದ್ದು, ಇದಕ್ಕಾಗಿ ಮಾರ್ಚ್ 13 ರೆಕಾರ್ಡ್ ಡೇಟ್ ಎಂದು ಪ್ರಕಟಿಸಿದೆ.

ಎಂಎಂಟಿಸಿ ಲಿಮಿಟೆಡ್

ಎಂಎಂಟಿಸಿ ಲಿಮಿಟೆಡ್

ಎಂಎಂಟಿಸಿ ಷೇರಿನ ಬೆಲೆ 2013ರ ಮಾರ್ಚ್ ನಲ್ಲಿ ರು. 250ರಲ್ಲಿದ್ದು, ಸರ್ಕಾರವು ಪ್ರತಿ ಷೇರಿಗೆ ರು. 60ರಂತೆ ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡುವ ಯೋಜನೆ ಪ್ರಕಟಿಸುತ್ತಿದ್ದಂತೆಯೇ ಷೇರಿನ ಬೆಲೆ ನಿರಂತರವಾಗಿ ಕುಸಿದು ರು. 50ರೊಳಗೆ ಕುಸಿಯಿತು. ಜನವರಿ 2013 ರಲ್ಲಿ ರು. 430ರ ಸಮೀಪವಿದ್ದ ಷೇರಿನ ಬೆಲೆ ಜೂನ್ ತಿಂಗಳ ವಿತರಣೆ ವೇಳೆಗೆ ರು. 150ರ ಸಮೀಪಕ್ಕೆ ಕುಸಿಯಿತು. ಈ ಕುಸಿತವು ನಿರಂತರವಾದ ಕೆಳಗಿನ ಆವರಣ ಮಿತಿ (Lower Circuit) ತಲುಪುವ ಮೂಲಕ ಪ್ರದರ್ಶಿತವಾಯಿತು. 2011-12ರಲ್ಲಿ ರು. 70.72 ಕೋಟಿ ಲಾಭ ಗಳಿಸಿದ್ದ ಕಂಪೆನಿ, 2012-13ರಲ್ಲಿ ರು. 70.62 ಕೋಟಿಯಷ್ಟು ನಷ್ಟ ಅನುಭವಿಸಿತ್ತು. ಈ ವಿತರಣೆಯ ನಂತರ ಷೇರಿನ ಬೆಲೆ ನಿರಂತರವಾದ ಕುಸಿತದತ್ತ ಸಾಗಿ ರು. 17ರ ಸಮೀಪಕ್ಕೆ ತಲುಪಿದೆ. ಈ ಮಧ್ಯೆ 2018ರಲ್ಲಿ 1:2ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಅಂದರೆ ಏಳು ವರ್ಷಗಳಾದರೂ ವಿತರಿಸಿದ ಬೆಲೆಗೂ ತಲುಪದೇ ಇರುವುದು, ಲಾಭ ಗಳಿಕೆ ಕ್ಷೀಣಿಸುತ್ತಿರುವುದು ಬೇಸರದ ಅಂಶವಾಗಿದೆ. ಈ ಕಂಪೆನಿಯಲ್ಲಿ ಕೇಂದ್ರ ಸರ್ಕಾರವು ಶೇಕಡಾ 89.93ರಷ್ಟು ಪಾಲನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಕಂಪೆನಿ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇದೆ.

ಲೇಖಕ ಕೆ. ಜಿ. ಕೃಪಾಲ್ ಬಗ್ಗೆ

ಲೇಖಕ ಕೆ. ಜಿ. ಕೃಪಾಲ್ ಬಗ್ಗೆ

ಷೇರು ಮಾರುಕಟ್ಟೆಯಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅನುಭವ ಇರುವವರು ಕೆ. ಜಿ. ಕೃಪಾಲ್. ಈಗಲೂ ಸಕ್ರಿಯ ಷೇರು ದಲ್ಲಾಳಿಗಳಾಗಿರುವ ಅವರು, ಅಪಾರ ಸಂಖ್ಯೆಯ ಹೂಡಿಕೆದಾರ ಜಾಗೃತಿ ಸಮಾವೇಶಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. ದೂರದರ್ಶನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮುದ್ರಣ, ಎಲೆಕ್ಟ್ರಾನಿಕ್, ಆನ್ ಲೈನ್ ಮೀಡಿಯಾ ಯಾವುದೂ ಕೃಪಾಲ್ ಅವರ ಲೇಖನಗಳಿಂದ ಹೊರತಾಗಿಲ್ಲ. ಅಂಕಣಕಾರರಾಗಿಯೂ ಚಿರಪರಿಚಿತರು. ಅವರ ಲೇಖನಗಳು ಪುಸ್ತಕಗಳಾಗಿ ಹಲವು ಮುದ್ರಣ ಕಂಡಿವೆ. ಆರ್ಥಿಕ ವಿಷಯಗಳ ಬಗ್ಗೆ ಸಮಚಿತ್ತದ ಒಳನೋಟಗಳಿಂದಾಗಿ ಆರ್ಥಿಕ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವ, ಮಾತನಾಡುವ ಪ್ರಮುಖರೆನಿಸಿದ್ದಾರೆ.

English summary

Navaratna, Maharatna Company Shares At Cheap Price: Here Is The 12 Recommendations

Due to global recession fear and Corona virus spread Indian PSU stocks touched 52 week low price. Here is the 12 recommendations to consider.
Story first published: Sunday, March 1, 2020, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X