For Quick Alerts
ALLOW NOTIFICATIONS  
For Daily Alerts

ಅದ್ಬುತ ಮಕ್ಕಳು! ಇವರು 2018ರ ಟಾಪ್ 10 ಭಾರತೀಯ ಯುವ ಉದ್ಯಮಿಗಳು, ಅವರ ಸಾಧನೆಯಿಂದ ಪ್ರೇರಣೆ ಪಡೆಯಿರಿ..

ಯಾವುದೇ ಸಮಸ್ಯೆ, ಅಡೆತಡೆಗಳು ಬಂದಾಗ ಬರೀ ಅವುಗಳ ಬಗ್ಗೆ ಮಾತನಾಡುತ್ತ ಕೂರದೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಶ್ರೇಷ್ಠರೆನಿಸಿಕೊಳ್ಳುತ್ತಾರೆ.

|

ಯಾವುದೇ ಸಮಸ್ಯೆ, ಅಡೆತಡೆಗಳು ಬಂದಾಗ ಬರೀ ಅವುಗಳ ಬಗ್ಗೆ ಮಾತನಾಡುತ್ತ ಕೂರದೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಇದು ಇಂದಿನ ಕಾರ್ಪೊರೇಟ್ ವಲಯ ಇರಬಹುದು ಅಥವಾ ಸ್ಟಾರ್ಟಅಪ್ ಕ್ಷೇತ್ರವೇ ಇರಬಹುದು ಎಲ್ಲದಕ್ಕೂ ಅನ್ವಯಿಸುತ್ತದೆ. ಕಾರ್ಪೊರೇಟ್ ವಲಯದಲ್ಲಿ ಹಿರಿಯ ಹುದ್ದೆಗಳಲ್ಲಿ ಕುಳಿತ ಅನೇಕರು ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ದೊಡ್ಡ ಹುದ್ದೆಗೆ ಏರುವ ಅರ್ಹತೆ ಇರುವ ಅನೇಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಇದರೆಲ್ಲದರ ಮಧ್ಯೆ ಇನ್ನೊಂದು ವರ್ಗ ಹುಟ್ಟಿಕೊಂಡಿದೆ. ಅವರೇ ಭಾರತದ ಯುವ ನವೋದ್ಯಮಿಗಳು. ಇವರು ಯಾವುದೇ ಅವಕಾಶಕ್ಕಾಗಿ ಯಾರ ಬಾಗಿಲೂ ತಟ್ಟದೇ ತಮ್ಮದೇ ವಿಚಾರಗಳ ಮೂಲಕ ಹೊಸ ಮಾದರಿಯ ಸ್ಟಾರ್ಟಪ್ ಆರಂಭಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಭಾರತದಲ್ಲಿ ಇಂದು ಹಲವಾರು ನವೋದ್ಯಮಿಗಳು ಇಡೀ ಜಗತ್ತಿನ ಗಮನ ಸೆಳೆಯುವಂಥ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ.

 

ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲ. ವಯಸ್ಸು ಎಂಬುದು ಒಂದು ಅಂಕಿ ಮಾತ್ರ. ಹೊಸ ಕಲ್ಪನೆಗಳು, ಅದನ್ನು ಸಾಕಾರ ಮಾಡುವ ಇಚ್ಛಾಶಕ್ತಿ ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ನವೋದ್ಯಮಿಗಳು ತೋರಿಸಿ ಕೊಟ್ಟಿದ್ದಾರೆ. ಇವರು ಭಾರತದ ಉದ್ಯಮವನ್ನು ಆಳಲಿರುವ ಯುವ ಉದ್ಯಮಿಗಳು!

ಪ್ರಸ್ತುತ 2018 ರಲ್ಲಿ ಭಾರತದ 10 ಶ್ರೇಷ್ಠ ನವೋದ್ಯಮಿಗಳು ಹಾಗೂ ಅವರ ಸಾಧನೆಗಳೇನು ಎಂಬುದನ್ನು ತಿಳಿಯೋಣ. ಅವರ ಸಾಧನೆಯಿಂದ ನಾವೂ ಪ್ರೇರಣೆ ಪಡೆದುಕೊಳ್ಳೋಣ.

ರಿತೇಶ್ ಅಗರವಾಲ್ - ವಯಸ್ಸು 24

ರಿತೇಶ್ ಅಗರವಾಲ್ - ವಯಸ್ಸು 24

ರಿತೇಶ್ ಅಗರವಾಲ್ ಅವರ ಸಾಧನೆ ತಿಳಿಯುವ ಮುಂಚೆ ಇವರ ಬಾಲ್ಯ ಜೀವನದ ಬಗ್ಗೆ ತುಸು ತಿಳಿದುಕೊಳ್ಳುವುದು ಅಗತ್ಯ. ಶಾಲಾ ಅಭ್ಯಾಸದ ಬಗ್ಗೆ ಅಷ್ಟೊಂದು ಒಲವು ಹೊಂದಿರದ ರಿತೇಶ ಶಾಲಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು. ಆಗ ಇವರ ಗಮನಸೆಳೆದಿದ್ದು ಹೊಟೇಲ್ ರೂಂ ಗಳನ್ನು ಬಾಡಿಗೆ ನೀಡುವ ಓರಾವೆಲ್ ಸ್ಟೇಸ್ ಎಂಬ ಸಂಸ್ಥೆ. ಆಗಿನ್ನೂ ಇವರ ವಯಸ್ಸು ೧೮.

ಆಗಾಗ ಊರಿಂದೂರಿಗೆ ಪ್ರಯಾಣಿಸುವವರಿಗಾಗಿ ಕಡಿಮೆ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಕೋಣೆಗಳನ್ನು ಬಾಡಿಗೆ ನೀಡುವ ಓರಾವೆಲ್ ಸ್ಟೇಸ್ ಕಂಪನಿಯಂಥ ಇನ್ನೊಂದು ಕಂಪನಿ ಇಲ್ಲ ಎಂಬುದನ್ನು ಇವರು ಗಮನಿಸಿದರು. ಆಗ ಇವರು ಅದೇ ಮಾದರಿಯ ಓಯೋ ಎಂಬ ಬಿ೨ಬಿ ಹೋಟೆಲ್ ಚೇನ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಮೊದಲಿಗೆ ಗುರ್ಗಾಂವನಲ್ಲಿ ಕೇವಲ ೧೧ ಕೋಣೆಗಳ ಹೋಟೆಲ್‌ನೊಂದಿಗೆ ಆರಂಭವಾದ ಇವರ ಓಯೋ ಕಂಪನಿ ಭಾರತದ ಅತಿ ಯಶಸ್ವಿ ಸ್ಟಾರ್ಟಪ್‌ಗಳಲ್ಲೊಂದಾಗಿದೆ.
ಇಂದು ಓಯೋ ಕಂಪನಿ ಭಾರತದ ೧೭೦ ನಗರಗಳಲ್ಲಿ ೫೫೦೦ ಆಸ್ತಿಗಳೊಂದಿಗೆ ೬೫ ಸಾವಿರ ರೂಂಗಳ ಬೃಹತ್ ಕಂಪನಿಯಾಗಿ ಬೆಳೆದಿದೆ. ಹೀಗೆ ಕಡಿಮೆ ಬಜೆಟ್‌ನಲ್ಲಿ ಹೋಟೆಲ್ ರೂಂಗಳನ್ನು ನೀಡುವ ಮೂಲಕ ಸಮಾಜದ ಹಲವಾರು ಕ್ಷೇತ್ರದ ಜನರಿಗೆ ಇವರು ಸಹಾಯ ಮಾಡಿದಂತಾಗಿದೆ. ಅನೇಕರು ಬರೀ ಚಿಂತನೆ ಮಾಡಿ ಕೈಬಿಟ್ಟಿದ್ದನ್ನು ರಿತೇಶ್ ಅಗರವಾಲ್ ಸಾಕಾರ ಮಾಡಿ ತೋರಿಸಿದ್ದಾರೆ.
ಯುವ ನವೋದ್ಯಮಿಯಾದ ಇವರ ಸಾಧನೆಗೆ ಹತ್ತು ಹಲವಾರು ಬಿರುದು, ಸನ್ಮಾನಗಳು ಒಲಿದು ಬಂದಿವೆ. ೨೦೧೩ ರಲ್ಲಿ ಟಾಟಾ ಫಸ್ಟ್ ಡಾಟ್ ಅವಾರ್ಡ್ಸನ ಟಾಪ್ ೫೦ ಶ್ರೇಷ್ಠ ನವೋದ್ಯಮಿಗಳ ಪಟ್ಟಿಯಲ್ಲಿ ಇವರು ಕಾಣಿಸಿಕೊಂಡರು. ಗ್ಲೋಬಲ್ ಸ್ಟುಡೆಂಟ್ ಎಂಟರಪ್ರೆನ್ಯೂರಶಿಪ್ ಅವಾರ್ಡ್ಸ ಇಂಡಿಯಾದ ಫೈನಲಿಸ್ಟ್ ಆದರು. ೨೦೧೩ ರಲ್ಲಿ ಬಿಸಿನೆಸ್ ಇನ್ಸೈಡರ್‌ನ ೮ ಜಾಗತಿಕ ಶ್ರೇಷ್ಠ ಯುವ ನವೋದ್ಯಮಿಗಳ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದರು. ತಮ್ಮ ೧೭ ನೇ ವಯಸ್ಸಿನಲ್ಲಿಯೇ ಸ್ಟಾರ್ಟಪ್ ಆರಂಭಿಸಿದ ಇವರು ಜಗತ್ತಿನ ಅತಿ ಕಿರಿಯ ಸಿಇಓ ಎಂದು ಖ್ಯಾತಿ ಪಡೆದಿದ್ದಾರೆ. ಈ 24 ವರ್ಷದ ಹುಡುಗ ಭಾರತದ ಅತಿದೊಡ್ಡ ಹೊಟೇಲ್ ಉದ್ಯಮ ನಡೆಸುತ್ತಿದ್ದಾನೆ!

ಫರ್ಹಾದ್ ಆಸಿಡವಾಲಾ - ವಯಸ್ಸು 23
 

ಫರ್ಹಾದ್ ಆಸಿಡವಾಲಾ - ವಯಸ್ಸು 23

ಫರ್ಹಾದ ತಮ್ಮ 13 ನೇ ವಯಸ್ಸಿನಲ್ಲಿಯೇ ತಂದೆಯಿಂದ 1200 ರೂ. ಸಾಲ ಪಡೆದು ಆನ್‌ಲೈನ್ ಕಮ್ಯುನಿಟಿ ಜಾಲತಾಣ ಆರಂಭಿಸಿದ್ದರು ಎಂದರೆ ಇವರ ಪ್ರತಿಭೆಯ ಬಗ್ಗೆ ಅರಿವಾಗುತ್ತದೆ. 16ನೇ ವಯಸ್ಸಿನಲ್ಲಿ ೫೦೦ ರೂ. ಸಾಲ ಪಡೆದು ತಮ್ಮದೇ ಡೊಮೈನ್ ನೇಮ್ ಖರೀದಿಸಿದ್ದರು. ಇವರು ೧೭ ವರ್ಷದವರಾಗಿದ್ದಾಗಲೇ ವಿಶ್ವದ ದೊಡ್ಡ ಸುದ್ದಿಸಂಸ್ಥೆ ಸಿಎನ್‌ಎನ್ ಇವರ ಸಂದರ್ಶನವನ್ನು ಬಿತ್ತರಿಸಿತ್ತು. ತಮ್ಮ ಮೊದಲ ಬಿಸಿನೆಸ್ ಐಡಿಯಾವನ್ನು ೨೫ ಸಾವಿರ ರೂ. ಗಳಿಗೆ ತಮ್ಮ ಅಭಿಮಾನಿಯೊಬ್ಬರಿಗೆ ಮಾರಿದ ಇವರು, ಅದೇ ಹಣದಿಂದ ರಾಕ್‌ಸ್ಟಾ ಮೀಡಿಯಾ ಎಂಬ ವೆಬ್ ಡೆವಲಪಮೆಂಟ್ ಮೀಡಿಯಾ ಕಂಪನಿ ಆರಂಭಿಸಿದರು. ಈಗ ತಮ್ಮ ೨೪ನೇ ವಯಸ್ಸಿನಲ್ಲಿ ಇವರು ಭಾರತದ ಶ್ರೇಷ್ಠ ನವೋದ್ಯಮಿಗಳಲ್ಲೊಬ್ಬರಾಗಿ ಗುರುತಿಸಲ್ಪಡುತ್ತಾರೆ.

ಜಗತ್ತಿನ ಹಲವಾರು ನಿಯತಕಾಲಿಕೆಗಳ ಶ್ರೇಷ್ಠ ನವೋದ್ಯಮಿಗಳ ಪಟ್ಟಿಯಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಟೆಡ್ ಎಕ್ಸ್ ಉಪನ್ಯಾಸಕರೂ ಆಗಿರುವ ಇವರು ಐಐಟಿ ಖರಗಪುರನ ವಾರ್ಷಿಕ ಎಂಟರಪ್ರೆನ್ಯೂರ್ ಸಮ್ಮೇಳನದಲ್ಲಿ ಭಾಷಣ ಮಾಡಿದ ಅತಿ ಕಿರಿಯ ವಯಸ್ಸಿನ ನವೋದ್ಯಮಿ ಎಂದು ಹೆಸರುವಾಸಿಯಾಗಿದ್ದಾರೆ.

ಶ್ರಾವಣ ಮತ್ತು ಸಂಜಯ ಕುಮಾರನ್ - ವಯಸ್ಸು 15 ಮತ್ತು 17

ಶ್ರಾವಣ ಮತ್ತು ಸಂಜಯ ಕುಮಾರನ್ - ವಯಸ್ಸು 15 ಮತ್ತು 17

17 ವರ್ಷದ ಶ್ರಾವಣ ಹಾಗೂ 15 ವರ್ಷದ ಸಂಜಯ ಸಹೋದರರು ಸದ್ಯ ಭಾರತದ ಅತಿ ಕಿರಿಯ ವಯಸ್ಸಿನ ನವೋದ್ಯಮಿಗಳಾಗಿದ್ದಾರೆ. ಇವರಬ್ಬರೂ ಸೇರಿ 'ಗೋ ಡೈಮೆನ್ಷನ್ಸ್' ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. ಇಂದಿನ ಡಿಜಿಟಲ್ ಜಗತ್ತಿಗೆ ಅವಶ್ಯಕವಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದೇ ಇವರ ಕಂಪನಿಯ ಗುರಿಯಾಗಿದೆ. ಭಾರತದ ಅತಿ ಕಿರಿಯ ಮೊಬೈಲ್ ಆಪ್ ಡೆವಲಪರ್‌ಗಳೆಂದು ಇವರು ಹೆಸರು ಮಾಡಿದ್ದಾರೆ.
ಪುಸ್ತಕಗಳನ್ನು ಓದುವುದು ಹಾಗೂ ಎದುರಾಗುವ ಸವಾಲುಗಳನ್ನು ನಿಭಾಯಿಸುವುದೇ ತಮ್ಮ ಯಶಸ್ಸಿನ ಗುಟ್ಟಾಗಿದೆ ಎಂದು ಈ ಸಹೋದರರು ಹೇಳುತ್ತಾರೆ.
ಸದ್ಯ ಆಂಡ್ರಾಯ್ಡ ಹಾಗೂ ಐಓಎಸ್ ಎರಡೂ ಪ್ಲಾಟಫಾರ್ಮಗಳಿಗೆ ಆಪ್ ಅಭಿವೃದ್ಧಿ ಪಡಿಸುತ್ತಿರುವ ಶ್ರಾವಣ ಮತ್ತು ಸಂಜಯ, ಜಗತ್ತಿನ ಅರ್ಧಕ್ಕೂ ಹೆಚ್ಚು ಸ್ಮಾರ್ಟಫೋನ್‌ಗಳಲ್ಲಿ ತಮ್ಮ ಆಪ್‌ಗಳು ಇನಸ್ಟಾಲ್ ಆಗಿರಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. ಈಗಾಗಲೇ 11 ಆಪ್‌ಗಳನ್ನು ಇವರು ತಯಾರಿಸಿದ್ದು, ಇವು ೬೦ ದೇಶಗಳಲ್ಲಿ 60 ಸಾವಿರ ಬಾರಿ ಡೌನ್ಲೋಡ್ ಮಾಡಿಕೊಳ್ಳಲ್ಪಟ್ಟಿವೆ. 2017ರ ಫೋರ್ಬ್ಸ್ ನಿಯತಕಾಲಿಕೆಯ ೩೦ ವರ್ಷದೊಳಗಿನ ಶ್ರೇಷ್ಠ 30 ವ್ಯಕ್ತಿಗಳ ಪಟ್ಟಿಯಲ್ಲಿ ಇವರು ಸ್ಥಾನ ಪಡೆದುಕೊಂಡಿದ್ದಾರೆ.

ಅದ್ವೈತ ಠಾಕೂರ - ವಯಸ್ಸು 15

ಅದ್ವೈತ ಠಾಕೂರ - ವಯಸ್ಸು 15

ಅದ್ಭುತ ತಂತ್ರಜ್ಞಾನ ಪರಿಣತಿ ಹೊಂದಿರುವ 15 ವರ್ಷದ ಬಾಲಕ ಅದ್ವೈತ ಠಾಕೂರ ತನ್ನ 6ನೇ ವಯಸ್ಸಿನಿಂದಲೇ ಕಂಪ್ಯೂಟರ್ ಬಳಸಲು ಆರಂಭಿಸಿದ. 9ನೇ ವಯಸ್ಸಿನಲ್ಲಿಯೇ ತನ್ನ ಮೊದಲ ವೆಬ್ಸೈಟ್ ಅನ್ನು ಆರಂಭಿಸಿದ್ದು ಅದ್ವೈತ್‌ನ ಹೆಗ್ಗಳಿಕೆಯಾಗಿದೆ. ಈತ ಈಗಾಗಲೇ ಕಳೆದ ಕೆಲ ವರ್ಷಗಳಿಂದ ಗೂಗಲ್‌ನ ಎಐ ಹಾಗೂ ಕ್ಲೌಡ್ ಪ್ಲಾಟಫಾರ್ಮಗಳೊಂದಿಗೆ ಕೆಲಸ ಮಾಡುತ್ತಿದ್ದಾನೆ. ಭಾರತದ ಕಿರಿಯ ಕಂಪ್ಯೂಟರ ಪ್ರೋಗ್ರಾಮರ್ ಆಗಿರುವ ಅದ್ವೈತ, ಇಂಟರನೆಟ್‌ನ ಯುವ ನವೋದ್ಯಮಿಯಾಗಿದ್ದಾನೆ.
ಅಪೆಕ್ಸ್ ಇನ್ಫೊಸಿಸ್ ಇಂಡಿಯಾ ಎಂಬ ಕಂಪನಿಯನ್ನು ಸ್ಥಾಪಿಸಿರುವ ಅದ್ವೈತ ಠಾಕೂರ ಪ್ರಸ್ತುತ ಅದರ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬಿಂಗ್, ಗೂಗಲ್ ಹಾಗೂ ಹಾಬ್ ಸ್ಪಾಟ್‌ಗಳ ಸರ್ಟಿಫೈಡ್ ಪ್ರೊಫೆಷನಲ್ ಸಹ ಆಗಿದ್ದಾನೆ. ವಿಕಿಯಾದ 2017ರ 20 ವರ್ಷದೊಳಗಿನ ಯಂಗ್ ಎಂಟರಪ್ರೆನ್ಯೂರ್ ಪಟ್ಟಿಯಲ್ಲಿ 4ನೇ ರ್‍ಯಾಂಕ್ ಪಡೆದಿದ್ದಾನೆ.
ವಿಶಿಷ್ಟ ಪ್ರತಿಭೆ ಹೊಂದಿರುವ ಈ ಬಾಲಕ ೨೦೧೫ ರಲ್ಲಿ ತನ್ನ 12ನೇ ವಯಸ್ಸಿನಲ್ಲಿ 'ಅಪೆಕ್ಸ್ ಇನ್ಫೊಸಿಸ್ ಇಂಡಿಯಾ' ಕಂಪನಿಯನ್ನು ಆರಂಭಿಸಿದ್ದು, ಅದೀಗ ಅಧಿಕೃತ ಡೊಮೈನ್ ನೇಮ್ ನೋಂದಾಯಿಸುವ ಹಾಗೂ ಕಂಪನಿಗಳಿಗೆ ಡಿಜಿಟಲ್ ಸೇವೆಗಳನ್ನು ನೀಡುವ ಕಂಪನಿಯಾಗಿ ಹೊರಹೊಮ್ಮಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್ ಹಾಗೂ ಐಓಟಿ ಕ್ಷೇತ್ರಗಳಲ್ಲಿ ಅಪೆಕ್ಸ್ ಇನ್ಫೊಸಿಸ್ ಇಂಡಿಯಾ ಕಂಪನಿ ಕೆಲಸ ಮಾಡುತ್ತಿದೆ.

ಅರ್ಜುನ ರಾಯ್ - ವಯಸ್ಸು 20

ಅರ್ಜುನ ರಾಯ್ - ವಯಸ್ಸು 20

ಆಟವಾಡುತ್ತ, ಮಜಾ ಮಾಡುತ್ತ ಕಾಲ ಕಳೆಯುವ ವಯಸ್ಸಿನಲ್ಲಿ ಅರ್ಜುನ ರಾಯ್ ಅವರು ಬೇರೆಯದೇ ಚಿಂತನೆ ಹೊಂದಿದ್ದರು. ತನ್ನ ಗುರಿಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಹಾಗೂ ಅದನ್ನು ಸಾಕಾರಗೊಳಿಸಲು ಬೇಕಾದ ದೃಢ ನಿಶ್ಚಯ ಆಗಲೇ ಅವರಲ್ಲಿ ಮನೆ ಮಾಡಿದ್ದವು. ಅವರ ವಯಸ್ಸಿನ ಸಹಪಾಠಿಗಳಿ ವಿಡಿಯೋ ಗೇಮ್ ಆಡುತ್ತ ಕಾಲ ಕಳೆಯುತ್ತಿದ್ದಾಗ ಇವರು ಗ್ಯಾರೇಜ್ ಸೇಲ್ ಆಯೋಜಿಸಿ ತಮ್ಮ ಮೊಟ್ಟ ಮೊದಲ ಹಣ ಸಂಪಾದನೆ ಮಾಡಿದ್ದರು. ಬಹುತೇಕ ಯುವಕರು ದೊಡ್ಡವರು ಹೇಳಿದ ಮಾರ್ಗದಲ್ಲಿ ಜೀವನ ಕಟ್ಟಿಕೊಳ್ಳಲು ಯತ್ನಿಸುತ್ತಾರೆ. ಆದರೆ ಅರ್ಜುನ ರಾಯ್ ಅವರಂಥ ಕೆಲವರು ಮಾತ್ರ ತಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಹೊಸ ಮಾರ್ಗದಲ್ಲಿ ಸಾಗಿ ಯಶಸ್ಸು ಕಾಣುತ್ತಾರೆ.

ತ್ರಿಶನೀತ ಅರೋರಾ - ವಯಸ್ಸು 23

ತ್ರಿಶನೀತ ಅರೋರಾ - ವಯಸ್ಸು 23

ತ್ರಿಶನೀತ ಅರೋರಾ ವಯಸ್ಸು ಈಗಿನ್ನೂ ೨೫. ಆದರೆ ಸಾಧನೆ ಮಾತ್ರ ಹಲವಾರು. ಇವರೊಬ್ಬ ಬರಹಗಾರ ಮತ್ತು ತಾವೇ ಹೇಳಿಕೊಳ್ಳುವಂತೆ ಫ್ರೆಂಡ್ಲಿ ಹ್ಯಾಕರ್ ಆಗಿದ್ದಾರೆ. ಟಿಎಸಿ ಸೆಕ್ಯೂರಿಟಿ ಸೊಲ್ಯೂಶನ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿರುವ ಇವರು ಅದರ ಸಿಇಓ ಸಹ ಆಗಿದ್ದಾರೆ. ಭಾರತೀಯ ಮೂಲದ ಈ ಕಂಪನಿ ಕಾರ್ಪೊರೇಟ್ ಕಂಪನಿಗಳ ಸೈಬರ್ ಸೆಕ್ಯೂರಿಟಿ ಭದ್ರ ಪಡಿಸುವ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಂಡವಾಳ ಹೂಡಿಕೆದಾರ ವಿಜಯ ಕೇಡಿಯಾ ಅವರು ತ್ರಿಶನೀತ ಅರೋರಾ ಅವರಿಗೆ ಹಣಕಾಸು ಫಂಡಿಂಗ್ ಮಾಡಿದ್ದು, ಐಬಿಎಂನ ಮಾಜಿ ವೈಸ್ ಪ್ರೆಸಿಡೆಂಟ್ ವಿಲಿಯಂ ಮೇ ಸಹಾಯ ಮಾಡಿದ್ದಾರೆ. ೨೦೧೭ ರಲ್ಲಿ ಜಿಕ್ಯೂ ಮ್ಯಾಗಜೀನ್ ಪ್ರಕಟಿಸಿದ ೫೦ ಶ್ರೇಷ್ಠ ಪ್ರೇರಣಾದಾಯಿ ಯುವ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನ್ಯೂ ಮೆಕ್ಸಿಕೋದ ಸಾಂತಾ ಎಫ್‌ಇ ಮೇಯರ್, ತ್ರಿಶನೀತ ಅವರಿಗೆ ಸನ್ಮಾನಿಸುವ ನಿಟ್ಟಿನಲ್ಲಿ ಆಗಸ್ಟ್ ೨೫, ೨೦೧೭ ರಂದು 'ತ್ರಿಶನೀತ ಅರೋರಾ ಡೇ' ಆಯೋಜಿಸಿದ್ದರು.

ಕವಿತಾ ಶುಕ್ಲಾ - ವಯಸ್ಸು 29

ಕವಿತಾ ಶುಕ್ಲಾ - ವಯಸ್ಸು 29

ಕವಿತಾ ಶುಕ್ಲಾ ಅವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಹಲವಾರು ವಿಷಯಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದರು. ಚಿಕ್ಕ ಮಕ್ಕಳ ಒಂದು ವಿಜ್ಞಾನ ಪ್ರೊಜೆಕ್ಟ್ ತಯಾರಿಸಲು ಬೇಕಾಗುವ ಹಣಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಇವರು ಮೊದಲ ಸಂಶೋಧನೆ ಮಾಡಿದ್ದರು. ನಂತರ ಇವರು ಆರಂಭಿಸಿದ್ದೇ 'ಫೆನುಗ್ರೀನ್' ಎಂಬ ಕಂಪನಿ. ತನ್ನ ೧೨ನೇ ವಯಸ್ಸಿನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ನೀರು ಕುಡಿದು ಅವರಿಗೆ ಕಾಯಿಲೆ ಬಂದಿತ್ತು. ಆದರೆ ಅವರ ಅಜ್ಜಿ ಮನೆಯಲ್ಲಿಯೇ ತಯಾರಿಸಿದ ಕೆಲ ಮಸಾಲೆಗಳ ಟೀ ಕುಡಿದಾಗ ಕಾಯಿಲೆ ವಾಸಿ ಆಗಿತ್ತು. ಇದು ಕವಿತಾ ಅವರಲ್ಲಿ ಸಂಶೋಧನೆಯ ಕುತೂಹಲವನ್ನು ಮೂಡಿಸಿತು. ಮರಳಿ ತನ್ನ ದೇಶ ಮೇರಿಲ್ಯಾಂಡ್‌ಗೆ ತೆರಳಿದ ನಂತರ ಅಡುಗೆ ಮನೆಯಲ್ಲಿನ ಸಾಂಬಾರು ಪದಾರ್ಥಗಳನ್ನು ಬಳಸಿ ಭಾರತದಲ್ಲಿ ಅವರ ಅಜ್ಜಿ ಮಾಡಿದ ಚಹಾದ ಗುಣಗಳನ್ನು ಸಂಶೋಧನೆ ಮಾಡಿದರು.

ಕಿಂಗ್ ಸಿದ್ಧಾರ್ಥ - ವಯಸ್ಸು 20

ಕಿಂಗ್ ಸಿದ್ಧಾರ್ಥ - ವಯಸ್ಸು 20

ಕಿಂಗ್ ಸಿದ್ಧಾರ್ಥ ಓರ್ವ ಭಾರತೀಯ ಉತ್ಸಾಹಿ ನವೋದ್ಯಮಿಯಾಗಿ ಗುರುತಿಸಲ್ಪಡುತ್ತಾರೆ. ಇವರು ತಮ್ಮ ಡಿಸೈನಿಂಗ್ ಹಾಗೂ ತತ್ವಜ್ಞಾನಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಹಲವಾರು ಮಹಾವಿದ್ಯಾಲಯಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಇವರು ನಿಯಮಿತವಾಗಿ ಉಪನ್ಯಾಸಗಳನ್ನು ನೀಡುತ್ತಾರೆ.
ಸಾಮಾನ್ಯವಾಗಿ ನವೋದ್ಯಮಿಗಳು ನಡೆದು ಬಂದ ಸಂಪ್ರದಾಯದ ಹಾದಿಯಲ್ಲಿಯೇ ನಡೆಯಲು ಇಷ್ಟ ಪಡುವುದಿಲ್ಲ. ಕಿಂಗ್ ಸಿದ್ಧಾರ್ಥ ಅವರ ಜೀವನವೂ ಇದಕ್ಕೆ ಹೊರತಲ್ಲ. ಅವರು ಹೊಸ ಮಾರ್ಗಗಳ ಮೂಲಕ ಸಾಧನೆ ಮಾಡಲು ಯತ್ನಿಸಿದವರು. ಶಾಲೆಯಿಂದ ಡ್ರಾಪ್ ಆದರೂ ಕಲಿಕೆಯನ್ನು ಮಾತ್ರ ಎಂದಿಗೂ ಅವರು ನಿಲ್ಲಿಸಿಲ್ಲ. 11 ವರ್ಷ ವಯಸ್ಸಿನಲ್ಲಿ ಶಾಲೆಯಲ್ಲಿದ್ದಾಗಲೇ ತನ್ನ ಗುರಿಗಳ ಬಗ್ಗೆ ಇವರು ಆತ್ಮವಿಶ್ವಾಸ ಹೊಂದಿದ್ದರು. ತಾವು ವಾಸಿಸುವ ಪ್ರದೇಶದಲ್ಲಿ ಸಭೆಗಳನ್ನು ಆಯೋಜಿಸಲಾರಂಭಿಸಿದ ಸಿದ್ಧಾರ್ಥ, ಅವಕ್ಕೆ ಟಿಕೆಟ್ ದರ ನಿಗದಿ ಮಾಡಿದ್ದರು.

ಪ್ರಣವ ಯಾದವ - ವಯಸ್ಸು 28

ಪ್ರಣವ ಯಾದವ - ವಯಸ್ಸು 28

ಈ ಜಗತ್ತು ೫೦೦೦ ಸಾವಿರ ಐಡಿಯಾಗಳಿಂದ ಕೊನೆಗೆ ೫ ಐಡಿಯಾಗಳನ್ನು ಬಳಸಿಕೊಳ್ಳಲು ಸಾಕಷ್ಟು ದಾರಿಗಳನ್ನು ಕಂಡುಕೊಂಡಿದೆ. ಆದರೆ ಬಹುತೇಕ ಅತ್ಯಾಧುನಿಕ ಕಂಪನಿಗಳು ಸಹ ಆ ೫ ಐಡಿಯಾಗಳಿಂದ ಒಂದು ಐಡಿಯಾಗೆ ತಲುಪಲು ಅತಿ ಹಳೆಯ ವಿಧಾನಗಳನ್ನು ಬಳಸುತ್ತವೆ ಎನ್ನುತ್ತಾರೆ ನ್ಯೂರೋ ಇನಸೈಟ್ ಕಂಪನಿಯ ಸಿಇಓ ಪ್ರಣವ ಯಾದವ.
ನ್ಯೂರೋಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಇವರಿಗೆ ಸಿಇಓ ಆಗಿ ಕೆಲಸ ಮಾಡುವ ಅವಕಾಶ ದೊರಕಿತು. ಪರಿಣಾಮಕಾರಿ ಟೆಲಿವಿಜನ್ ಜಾಹೀರಾತು ಹೇಗೆ ತಯಾರಿಸುವುದು ಎಂಬ ಬಗ್ಗೆ ಸಿದ್ಧಪಡಿಸಲಾದ ಪೇಟೆಂಟ್ ಪಡೆಯಲಾಗಿದ್ದ ಬ್ರೇನ್ ಮ್ಯಾಪಿಂಗ್ ತಾಂತ್ರಿಕತೆಯನ್ನು ಮಾರ್ಕೆಟಿಂಗ್ ಮಾಡುವ ಜವಾಬ್ದಾರಿಯನ್ನು ಇವರು ಸಮರ್ಥವಾಗಿ ನಿಭಾಯಿಸಿದರು. ದೆಹಲಿ ಬಳಿಯ ಊರಿನಲ್ಲಿ ಹುಟ್ಟಿದ ಇವರು ೨೦೦೩ ರಲ್ಲಿ ಕಾರ್ಲಟನ್ ಕಾಲೇಜಿನಲ್ಲಿ ಅಭ್ಯಾಸ ಮಾಡಲು ಅಮೆರಿಕೆಗೆ ತೆರಳಿದರು.

ಶ್ರೀಲಕ್ಷ್ಮಿ ಸುರೇಶ - ವಯಸ್ಸು 20

ಶ್ರೀಲಕ್ಷ್ಮಿ ಸುರೇಶ - ವಯಸ್ಸು 20

ಜಗತ್ತಿನ ಅತಿ ಕಿರಿಯ ವಯಸ್ಸಿನ ವೆಬ್ ಡಿಸೈನರ್ ಹಾಗೂ ಸಿಇಓ ಆಗಿರುವ ಶ್ರೀಲಕ್ಷ್ಮಿ ಸುರೇಶ ಇನ್ನೂ ಹಲವಾರು ಸಾಧನೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀಲಕ್ಷ್ಮಿ ತಮ್ಮ ೧೦ನೇ ವಯಸ್ಸಿನಲ್ಲಿಯೇ ಇಡಿಸೈನ್ ಎಂಬ ಕಂಪನಿ ಆರಂಭಿಸಿ ಯಶಸ್ಸಿನ ಪಯಣ ಆರಂಭಿಸಿದರು. ವೆಬ್ ಡಿಸೈನ್ ಮಾಡುವ ಇಡಿಸೈನ್ ಕಂಪನಿ ಎಸ್‌ಇಓ ಸೇರಿದಂತೆ ವೆಬ್ ಕ್ಷೇತ್ರದ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಭಾರತದ ನೂರಕ್ಕೂ ಹೆಚ್ಚು ಹೆಸರಾಂತ ಸಂಘ-ಸಂಸ್ಥೆಗಳಿಗೆ ವೆಬ್ಸೈಟ್ ಡಿಸೈನ್ ಮಾಡಿದ ಖ್ಯಾತಿ ಇವರದಾಗಿದೆ.

Read more about: business money india finance news
English summary

Top 10 Young Entrepreneurs In India 2018, get inspire..

some of India's youngest entrepreneurs, and we hope it will inspire you and help you realize that it's neither never too late or never too early to pursue your dreams of being being a business owner.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X