ಎರಡು ದಶಕಗಳ ಭಾರೀ ಪ್ರಯತ್ನ ಅಂತೂ ಫಲ ನೀಡಿದೆ. ಉತ್ತರ ಪ್ರದೇಶದ ಭೂವಿಜ್ಞಾನ ನಿರ್ದೇಶನಾಲಯ ಹಾಗೂ ಭಾರತ ಭೂವಿಜ್ಞಾನ ಇಲಾಖೆಯು ಎರಡು ಚಿನ್ನದ ಗಣಿಗಳನ್ನು ಪತ್ತೆ ಹಚ್ಚಿವೆ. ಸೋನ್ ಪಹಾಡಿ ಮತ್ತು ಹರಡಿ ಹಳ್ಳಿಗಳಲ್ಲಿ ತಲಾ ಒಂದೊಂದು ಚಿನ್ನದ ಗಣಿಯನ್ನು ಪತ್ತೆ ಮಾಡಿವೆ.
ಎಲ್ಲ ಸೇರಿ 3,350 ಟನ್ ಚಿನ್ನದ ನಿಕ್ಷೇಪ ಇರುವ ಸಾಧ್ಯತೆ ಇದೆ. ಅಂದರೆ ಸದ್ಯಕ್ಕೆ ಭಾರತದ ಬಳಿ ಇರುವ ಒಟ್ಟು ಚಿನ್ನದ ಸಂಗ್ರಹದ ಐದು ಪಟ್ಟು ಇದ್ದಂತಾಯಿತು. ಸೋನ್ ಪಹಾಡಿಯಲ್ಲಿ ಅಂದಾಜು 2,945.25 ಟನ್ ಹಾಗೂ ಹರಡಿಯಲ್ಲಿ 646.15 ಟನ್ ಚಿನ್ನದ ನಿಕ್ಷೇಪ ಇರಬಹುದು ಎಂದು ಅಂದಾಜಿಸಲಾಗಿದೆ. ಎರಡು ಕಡೆಯ ಚಿನ್ನದ ಲೆಕ್ಕಾಚಾರ ಹಾಕಿದರೆ 12 ಲಕ್ಷ ಕೋಟಿ ರುಪಾಯಿ ಆಗಬಹುದು.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 20ನೇ ತಾರೀಕಿನಂದು ಏಳು ಮಂದಿಯ ತಂಡವೊಂದು ಇಲ್ಲಿಗೆ ಭೇಟಿ ನೀಡಿದೆ. ಸೋನ್ ಭದ್ರಾ ಬಳಿಯ ಖನಿಜ ಶ್ರೀಮಂತ ಗಣಿಯನ್ನು ಹೊರ ತೆಗೆಯುವುದು ಕಷ್ಟ ಅಲ್ಲ. ಏಕೆಂದರೆ ಅದು ಬೆಟ್ಟದಲ್ಲಿದೆ. ಪರಿಹಾರ ವಿತರಣೆ, ಅಗತ್ಯ ಮಂಜೂರಾತಿ ಸಿಕ್ಕ ತಕ್ಷಣ ಸರ್ಕಾರವು ಹರಾಜು ಪ್ರಕ್ರಿಯೆ ಆರಂಭಿಸಲಿದೆ.

ಚಿನ್ನವನ್ನು ಹೊರತುಪಡಿಸಿ, ಈ ಪ್ರದೇಶದಲ್ಲಿನ ಅಪರೂಪದ ಯುರೇನಿಯಂ ಖನಿಜ ಕೂಡ ಹೊರತೆಗೆಯಲು ಪ್ರಯತ್ನಿಸಲಾಗುತ್ತದೆ. ಅಂದಹಾಗೆ ಈ ಎರಡು ಗಣಿಗಳಿಂದ ರಾಜ್ಯದ ಆದಾಯಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ಸಿಗಲಿದೆ. ಕೌಶಲ ಇರುವ ಅಥವಾ ಇಲ್ಲದಿರುವ ಕಾರ್ಮಿಕರಿಗೆ ಕೆಲಸ ಒದಗಿಸುವುದಷ್ಟೇ ಅಲ್ಲ, ತೀರಾ ಹಿಂದುಳಿದ ಈ ಎರಡು ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿ ಆಗಲಿದೆ.


Click it and Unblock the Notifications