ಆ ಹಿರಿಯರ ಹೆಸರು ಯದಿ ರೆಡ್ಡಿ. ವಯಸ್ಸು 73. ವಿಜಯವಾಡದಲ್ಲಿ ದೇವಾಲಯದ ಪ್ರವೇಶ ದ್ವಾರದಲ್ಲಿ ಕೂತು ಭಿಕ್ಷೆ ಬೇಡುವ ಈ ವ್ಯಕ್ತಿ ಈಗ ಸುದ್ದಿಯಲ್ಲಿದ್ದಾರೆ. ಏಕೆ ಗೊತ್ತಾ? ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ ಕಳೆದ 7 ವರ್ಷದಲ್ಲಿ ಇವರು 8 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.
ಅಂದಹಾಗೆ, ಯದಿ ರೆಡ್ಡಿ ಅವರು ನಾಲ್ಕು ದಶಕಗಳ ಕಾಲ ರಿಕ್ಷಾ ದೂಡಿದ್ದಾರೆ. ಆದರೆ ಯಾವಾಗ ಮಂಡಿಯೇ ಸವೆದು ಹೋಯಿತೋ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿದಿದ್ದಾರೆ. "ನಾನು ನಲವತ್ತು ವರ್ಷಗಳ ಕಾಲ ರಿಕ್ಷಾ ದೂಡಿದ್ದೇನೆ. ಮೊದಲಿಗೆ ಸಾಯಿಬಾಬ ದೇವಸ್ಥಾನದ ಅಧಿಕಾರಿಗಳಿಗೆ 1 ಲಕ್ಷ ರುಪಾಯಿ ನೀಡಿದೆ. ಯಾವಾಗ ನನ್ನ ಆರೋಗ್ಯ ಕ್ಷೀಣಿಸುತ್ತಾ ಬಂತೋ ಆಗ ನನಗೆ ಹಣದ ಅಗತ್ಯ ಇಲ್ಲ ಅನಿಸಿತು. ಆಗ ಇನ್ನೂ ಹೆಚ್ಚಿಗೆ ಹಣವನ್ನು ದೇವಾಲಯಕ್ಕೆ ನೀಡಲು ನಿರ್ಧರಿಸಿದೆ" ಎನ್ನುತ್ತಾರೆ.
ವಿಚಿತ್ರ ಏನು ಅಂದರೆ, ಯಾವಾಗ ರೆಡ್ಡಿ ಅವರು ದೇವಸ್ಥಾನಕ್ಕೆ ಹಣ ದೇಣಿಗೆ ನೀಡಲು ಆರಂಭಿಸಿದರೋ ಆಗ ಅವರ ಆದಾಯವೂ ಹೆಚ್ಚಾಗಿದೆ. "ದೇವಸ್ಥಾನಕ್ಕೆ ದೇಣಿಗೆ ನೀಡಲು ಆರಂಭಿಸಿದ ಮೇಲೆ ಜನರು ನನ್ನನ್ನು ಗುರುತಿಸಲು ಶುರು ಮಾಡಿದರು. ಅಚ್ಚರಿ ಅನ್ನುವ ರೀತಿಯಲ್ಲಿ ನನ್ನ ಆದಾಯ ಕೂಡ ಹೆಚ್ಚಾಯಿತು. ಈ ತನಕ 8 ಲಕ್ಷ ರುಪಾಯಿ ನೀಡಿದ್ದೇನೆ. ನನ್ನ ಎಲ್ಲ ಸಂಪಾದನೆಯನ್ನು ಆ ದೇವರಿಗೇ ನೀಡುತ್ತೇನೆ ಎಂದು ಭಾಷೆ ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ ಯದಿ ರೆಡ್ಡಿ.

ದೇವಸ್ಥಾನದ ಆಡಳಿತ ಮಂಡಳಿಯವರು ರೆಡ್ಡಿಯವರ ದಾನ ಗುಣವನ್ನು ಮೆಚ್ಚಿಕೊಂಡಿದ್ದು, ಯದಿ ರೆಡ್ಡಿ ನೀಡಿದ ಹಣದಿಂದ ದೇವಾಲಯದ ಅಭಿವೃದ್ಧಿಗೆ ಸಹಾಯ ಆಗಿದೆ ಎಂದು ತಿಳಿಸಿದ್ದಾರೆ.
"ಯದಿ ರೆಡ್ಡಿ ಸಹಾಯದಿಂದ ನಾವು ಗೋಶಾಲೆ ನಿರ್ಮಿಸಲು ಸಾಧ್ಯವಾಗಿದೆ. ಅವರು 8 ಲಕ್ಷ ರುಪಾಯಿಯನ್ನು ದೇವಸ್ಥಾನಕ್ಕೆ ನೀಡಿದ್ದಾರೆ. ನಾವು ಯಾರನ್ನೂ ಏನೂ ಕೇಳಿಲ್ಲ. ಆದರೆ ನಗರದಲ್ಲಿ ಇರುವ ಜನರು ಅವರಿಂದ ಆದಷ್ಟು ಸಹಾಯವನ್ನು ಮಾಡುತ್ತಲೇ ಇದ್ದಾರೆ" ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.


Click it and Unblock the Notifications