ಬೆಂಗಳೂರಿನ ಆಟೋ ಡ್ರೈವರ್‌ಗಳದ್ದೇ 'ನಮ್ಮ ಯಾತ್ರಿ' ಆ್ಯಪ್; ರಾಜ್ಯೋತ್ಸವ ದಿನದಂದು ಚಾಲನೆ
ಬೆಂಗಳೂರು, ನ. 1: ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ, ಊಬರ್ ವಿವಾದಕ್ಕೆ ಸಿಲುಕಿಕೊಂಡಿರುವ ನಡುವೆ ಆಟೋಚಾಲಕರೇ ಸೇರಿಕೊಂಡು ಪರ್ಯಾಯ ವ್ಯವಸ್ಥೆ ರೂಪಿಸಿದ್ದಾರೆ. ಆಟೋಚಾಲಕರ ಸಂಘದ ವತಿಯಿಂದ ತಯಾರಾಗಿರುವ 'ನಮ್ಮ ಯಾತ್ರಿ' ಆ್ಯಪ್ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಅಧಿಕೃತವಾಗಿ ಚಾಲನೆಗೊಂಡಿದೆ.
ಕಳೆದ ತಿಂಗಳು ಅಕ್ಟೋಬರ್‌ನಲ್ಲೇ ಆ್ಯಪ್ ಗೂಗಲ್ ಪ್ಲೇನಲ್ಲಿ ಬಿಡುಗಡೆಯಾಗಿ ಪ್ರಾಯೋಗಿಕ ಹಂತದಲ್ಲಿತ್ತು. ಈ ಅಪ್ಲಿಕೇಶನ್ 10 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ. ನಮ್ಮ ಯಾತ್ರಿ ಜೊತೆ ಆಟೊಚಾಲಕರಿಗೆಂದೇ ಪ್ರತ್ಯೇಕ ಆ್ಯಪ್ ಇದ್ದು ಅದೂ ಕೂಡ 10 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.

ವಿಶೇಷವೇನು?
ನಮ್ಮ ಯಾತ್ರಿ ಆ್ಯಪ್‌ನಲ್ಲಿ ಸರ್ಕಾರ ನಿಗದಿ ಪಡಿಸಿರುವ ದರದಲ್ಲೇ ಆಟೋರಿಕ್ಷಾಗಳ ಪ್ರಯಾಣ ಸೇವೆ ಸಿಗುತ್ತದೆ. ಮೊದಲ 2 ಕಿಮೀಗೆ 30 ರೂಪಾಯಿ, ನಂತರದ ಪ್ರತೀ ಒಂದು ಕಿಲೋಮೀಟರ್‌ಗೆ 15 ರೂಪಾಯಿಯಂತೆ ದರವನ್ನು ಸರ್ಕಾರ ನಿಗದಿ ಮಾಡಿದೆ. 'ನಮ್ಮ ಯಾತ್ರಿ' ಆ್ಯಪ್ ಕೂಡ ಇದೇ ದರದಲ್ಲಿ ಸೇವೆ ಒದಗಿಸುತ್ತದೆ. ಆದರೆ, ಬುಕಿಂಗ್ ಫೀ ಎಂಬುದು ಹೆಚ್ಚುವರಿಯಾಗಿ ಗ್ರಾಹಕರಿಂದ ಪಡೆಯಲಾಗುತ್ತದೆ. ಅಂದರೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ 10 ರೂಪಾಯಿ ಹೆಚ್ಚು ಹಣವನ್ನು ಗ್ರಾಹಕರು ನೀಡಬೇಕಾಗಬಹುದು. ಆದರೆ, ಈ ಹೆಚ್ಚುವರಿ ಹಣವನ್ನು ಪಿಕಪ್ ಚಾರ್ಜ್ ಆಗಿ ಚಾಲಕರಿಗೆ ಸೇರುತ್ತದೆ.

ಚಾಲಕರಿಗೆ ದಿನಕ್ಕೆ 30-40 ರೂ ಶುಲ್ಕ?
ಆಟೊರಿಕ್ಷಾ ಚಾಲಕರ ಒಕ್ಕೂಟ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ಡಿ ರುದ್ರಮೂರ್ತಿ ನೀಡಿರುವ ಮಾಹಿತಿ ಪ್ರಕಾರ ಆಟೊಚಾಲಕರಿಂದ ದಿನಕ್ಕೆ 30-40 ರೂಪಾಯಿ ಶುಲ್ಕ ಪಡೆಯುವ ಯೋಜನೆ ಇದೆ.
"ಕನಿಷ್ಠ ಮೊದಲ ಮೂರು ತಿಂಗಳ ಕಾಲ ನಮ್ಮ ಯಾತ್ರಿ ಆ್ಯಪ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಪ್ರಯಾಣಿಕರಿಂದ ಬುಕಿಂಗ್ ಫೀ ಆಗಿ 10 ರೂ ಪಡೆಯುತ್ತೇವೆ. ಪ್ರಯಾಣಿಕರ ಸ್ಥಳಕ್ಕೆ ಹೋಗುವ ಡ್ರೈವರ್‌ಗೆ ಈ ಹಣವನ್ನು ಕೊಡಲಾಗುತ್ತದೆ.
"ಮೂರು ತಿಂಗಳ ನಂತರ ಆಟೊರಿಕ್ಷಾ ಚಾಲಕರಿಂದ ದಿನಕ್ಕೆ 30-40 ರೂ ಶುಲ್ಕವನ್ನು ಪಡೆಯಲಾಗುತ್ತದೆ. ಇದು ನಮ್ಮ ಯಾತ್ರಿಯ ಕಾರ್ಯಾಚರಣೆ ವೆಚ್ಚವನ್ನು ಭರಿಸಲು ಪಡೆಯುವ ಹಣವಾಗಿರುತ್ತದೆ" ಎಂದು ಡಿ ರುದ್ರಮೂರ್ತಿ ಹೇಳುತ್ತಾರೆ.
ಇದೇ ವೇಳೆ, ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಮೀಟರ್ ಇರಲಿದೆ. ಆದರೆ, ಚಾಲಕರು ಮೀಟರ್ ಮೇಲೆ 30 ರೂ ಹೆಚ್ಚುವರಿ ಹಣವನ್ನು ಕೇಳಬಹುದು. ಗ್ರಾಹಕರು ಇಚ್ಛಿಸಿದರೆ ಮಾತ್ರ ಆ ಹಣವನ್ನು ನೀಡಬಹುದು ಎಂದು ಹೇಳಲಾಗಿದೆ.

ಆ್ಯಪ್ ಅಭಿವೃದ್ಧಿಪಡಿಸಿದ್ದು ಯಾರು?
ಆಟೊರಿಕ್ಷಾ ಚಾಲಕರ ಸಂಘ ರೂಪಿಸಿದ ರೇಡಿಂಗ್ ಅಪ್ಲಿಕೇಶನ್ ಇದು. ಜಸ್‌ಪೇ ಟೆಕ್ನಾಲಜೀಸ್ ಪ್ರೈ ಲಿ ಎಂಬ ಪೇಮೆಮಟ್ ಗೇಟ್‌ವೇ ಕಂಪನಿ ಈ ಆ್ಯಪ್ ಅಭಿವೃದ್ಧಿಗೆ ಸಹಾಯ ಮಾಡಿದೆ. ಕೇಂದ್ರ ಸರ್ಕಾರದ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಅಡಿಯಲ್ಲಿ ಬೆಕನ್ ಪ್ರೋಟೋಕಾಲ್ ತಂತ್ರಜ್ಞಾನದ ಮೇಲೆ ಅಪ್ಲಿಕೇಶನ್ ತಯಾರಾಗಿದೆ.
"ಎಲ್ಲರಿಗೂ ಲಾಭವಾಗಲಿ ಎಂಬ ಉದ್ದೇಶದಿಂದ ನಾವು ಆಟೋಚಾಲಕರು ಒಂದು ಸೇರಿದ್ದೇವೆ. ಇಲ್ಲಿ ಚಾಲಕರಿಗಾಗಲೀ, ಪ್ರಯಾಣಿಕರಿಗಾಗಲೀ ಮೋಸವಾದಂತನಿಸಬಾರದು" ಎಂದು ಎಆರ್‌ಡಿಯು ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ.
ಎಆರ್‌ಡಿಯು ಪ್ರಕಾರ ಬೆಂಗಳೂರಿನಲ್ಲಿ 14 ಸಾವಿರ ಚಾಲಕರು ಈ ಆ್ಯಪ್ ಸೇವೆಯ ವ್ಯಾಪ್ತಿಗೆ ಬಂದಿದ್ದಾರೆ. ದಿನಕ್ಕೆ 50-1000 ಬುಕಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಇದೆ.
ಇನ್ನು, ಗ್ರಾಹಕರ ನೆರವಿಗೆಂದು ಕಸ್ಟಮರ್ ಕೇರ್ ಸೆಂಟರ್ ಸ್ಥಾಪನೆಯಾಗಿದ್ದು, ಅದರಲ್ಲಿ 15-20 ಜನರು ಇರಲಿದ್ದಾರೆ.

ಪರವಾನಿಗೆ ಇಲ್ಲ
ಇದೇ ವೇಳೆ, ಆಟೊ ಸೇವೆ ನೀಡಲು ನಮ್ಮ ಯಾತ್ರಿ ಆ್ಯಪ್‌ಗೆ ಪರವಾನಿಗೆ ಸಿಕ್ಕಿಲ್ಲ. "ಸದ್ಯಕ್ಕೆ ಪರವಾನಿಗೆ ನೀಡಲು ಕಾನೂನು ಪ್ರಕಾರ ಅವಕಾಶ ಇಲ್ಲವಾದ್ದರಿಂದ ನಮ್ಮ ಯಾತ್ರಿ ಆ್ಯಪ್‌ಗೆ ಸಾರಿಗೆ ಇಲಾಖೆಯಿಂದ ಲೈಸೆನ್ಸ್ ಸಿಕ್ಕಿಲ್ಲ. ನಾವು ಕಾರ್ಯಾಚರಿಸಬಹುದು ಎಂದು ಇಲಾಖೆ ಹೇಳಿದೆ. ಏನಾದರೂ ಹೆಚ್ಚುಕಡಿಮೆ ಆದರೆ ನಾವೇ ತಲೆ ಕೊಡಬೇಕು" ಎಂದು ಡಿ ರುದ್ರಮೂರ್ತಿ ತಿಳಿಸಿದ್ಧಾರೆ.
ಈ ಅಪ್ಲಿಕೇಶನ್ ಆಟೋರಿಕ್ಷಾ ಚಾಲಕರಿಗೆ ಭರವಸೆಯ ಕಿರಣವಾಗಿದೆ. ಇದು ಕೆಲ ತಿಂಗಳಿಗೆ ಮುಚ್ಚಿಹೋಗದೇ ದೀರ್ಘ ಕಾಲ ನಡೆದರೆ ಚೆನ್ನ. ಸರ್ಕಾರವೇ ಇಂಥದ್ದೊಂದು ಆ್ಯಪ್ ಅನ್ನು ಆರಂಭಿಸಿದ್ದರೆ ಹೆಚ್ಚು ಅನುಕೂಲಕರವಾಗುತ್ತಿತ್ತು ಎಂಬುದು ಕೆಲ ಆಟೋಚಾಲಕರ ಅನಿಸಿಕೆ.