ತಿರುಮಲ ವೆಂಕಟೇಶ್ವರ ದೇಗುಲಕ್ಕೆ ವಿಶಾಖಪಟ್ಟಣ ಭಕ್ತರ 1 ಕೋಟಿ ದೇಣಿಗೆ
ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಈ ಹಣವನ್ನು ಭಕ್ತರ ಉಚಿತ ಅನ್ನ ಸಂತರ್ಪಣೆಗಾಗಿ ಬಳಸುವಂತೆ ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್ ಗೆ ಅವರು ಮನವಿ ಮಾಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಣಿಗೆ ನೀಡಿದ ಭಕ್ತರು ತಮ್ಮ ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ. ಡಿ. ಡಿ. ಮೂಲಕ ಹಣವನ್ನು ವಿಶಾಖಪಟ್ಟಣದ ಸ್ವರೂಪಾನಂದೇಂದ್ರ ಸ್ವಾಮೀಜಿ ಅವರಿಂದ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರ ಮಾಡಿಸಿದ್ದಾರೆ. ಅಂದ ಹಾಗೆ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನಿರ್ವಹಣೆಯನ್ನು ಟಿಟಿಡಿ ಆಡಳಿತ ಮಂಡಳಿ ಮಾಡುತ್ತದೆ.

ಭಾರತದ ಶ್ರೀಮಂತ ದೇವಾಲಯಗಳಲ್ಲಿ ತಿರುಮಲದಲ್ಲಿ ಇರುವ ವೆಂಕಟೇಶ್ವರ ಸ್ವಾಮಿಯ ದೇಗುಲವೂ ಒಂದು. ನಿತ್ಯ ಮೂವತ್ತು ಸಾವಿರ ಮಂದಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಒಂದು ವರ್ಷದಲ್ಲಿ ದೇಣಿಗೆ ಮೂಲಕವೇ ಒಂಬೈನೂರು ಕೋಟಿಗೂ ಹೆಚ್ಚು ಮೊತ್ತ ಸಂಗ್ರಹ ಆಗುತ್ತದೆ.